Site icon Vistara News

PSI Suspend | ಯುವಕನಿಗೆ ಕಿರುಕುಳ ಕೊಟ್ಟ ಆರೋಪ ಹೊತ್ತಿದ್ದ ಸಿರಿವಾರ ಪಿಎಸ್‌ಐ ಗೀತಾಂಜಲಿ ಅಮಾನತು

psi geetanjali land dispute harassment Suspend

ರಾಯಚೂರು: ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದ ಸಿರವಾರ ಠಾಣೆಯ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರನ್ನು ಕರ್ತವ್ಯ ಲೋಪ ಅಡಿಯಲ್ಲಿ ಅಮಾನತುಗೊಳಿಸಿ (PSI Suspend) ಆದೇಶ ಹೊರಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಭಾನುವಾರ ತಡರಾತ್ರಿ ಆದೇಶವನ್ನು ಹೊರಡಿಸಿದ್ದಾರೆ. ಗೀತಾಂಜಲಿ ಹೆಸರಿನಲ್ಲಿ ಯುವಕನೊಬ್ಬ ಡೆತ್‌ನೋಟ್‌ ಬರೆದಿಟ್ಟು ನಾಪತ್ತೆಯಾಗಿದ್ದ ಪ್ರಕರಣ, ಟ್ರ್ಯಾಕ್ಟರ್‌ ತಡೆದು ಕಿರಿಕ್‌ ಮಾಡಿದ್ದ ಪ್ರಕರಣ ಹಾಗೂ ಠಾಣೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ಆಂತರಿಕ ತನಿಖೆಯನ್ನು ಗೀತಾಂಜಲಿ ಎದುರಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆದಿದ್ದು, ನಿಯಮ ಉಲ್ಲಂಘನೆ ಕಂಡುಬಂದಿದ್ದರಿಂದ ಗೀತಾಂಜಲಿ ಅವರನ್ನು ತತ್‌ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಲಾಗಿದೆ.

ಇದನ್ನೂ ಓದಿ | Border Dispute | ಎಂಇಎಸ್‌ ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ: ಸಿಎಂ ಬೊಮ್ಮಾಯಿ

ಡೆತ್‌ನೋಟ್‌ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ
ಪಿಎಸ್‌ಐ ಗೀತಾಂಜಲಿ ಹೆಸರನ್ನು ಉಲ್ಲೇಖಿಸಿ ಡೆತ್‌ ನೋಟ್‌ ಬರೆದಿಟ್ಟು ಡಿಸೆಂಬರ್‌ ೩ರಂದು ನಾಪತ್ತೆಯಾದ (Missing Case) ಸಿರವಾರ ನಿವಾಸಿ ತಾಯಣ್ಣ ಡಿಸೆಂಬರ್‌ ೬ರಂದು ಬಳ್ಳಾರಿಯಲ್ಲಿ ಪತ್ತೆಯಾಗಿದ್ದ. ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆತ ಆರೋಪಿಸಿದ್ದ.

ಡೆತ್‌ ನೋಟ್‌ನಲ್ಲಿ ಮಾಡಿರುವ ಆರೋಪವೇನು?
ಗೀತಾಂಜಲಿ ಶಿಂಧೆ ಅವರು ತನಗೆ ಸಿಕ್ಕಾಪಟ್ಟೆ ಹಿಂಸೆ ನೀಡಿದ್ದಾರೆ ಎನ್ನುವುದು ತಾಯಣ್ಣ ಮಾಡಿರುವ ಪ್ರಮುಖ ಆರೋಪ. ಈ ಬಗ್ಗೆ ಆತ ಡೆತ್‌ನೋಟ್‌ ರೂಪದಲ್ಲಿ ಪತ್ರವೊಂದನ್ನು ಬರೆದಿದ್ದು, ತನಗಾದ ಅನ್ಯಾಯವನ್ನು ವಿವರಿಸಿದ್ದ. ಆತನ ಆರೋಪ ಹೀಗಿದೆ.
-ನಮ್ಮ ಮನೆ ಜಾಗದ ವಿಚಾರವಾಗಿ ಪಿಎಸ್‌ಐ ಮಧ್ಯಪ್ರವೇಶ ಮಾಡಿದ್ದು, ಸುಖಾಸುಮ್ಮನೆ ನನ್ನನ್ನು ಠಾಣೆಗೆ ಕರೆಸಿಕೊಳ್ಳುತ್ತಿದ್ದಾರೆ.
-ನನ್ನನ್ನು ಕಂಡಲ್ಲಿ ನಿಲ್ಲಿಸಿ ಹೊಡೆಯುತ್ತಾರೆ. ನಾನು ರಸ್ತೆಯಲ್ಲಿ ಕಂಡಾಗಲೆಲ್ಲ ಹೀಗೆ ಮಾಡಿದ್ದಾರೆ. ಆದರೆ, ನಾನು ಇದನ್ನು ಯಾರಿಗೂ ಹೇಳಿರಲಿಲ್ಲ. ನನಗೆ ಇದರಿಂದ ಬಹಳ ನೋವಾಗಿದೆ.
-ಡಿಸೆಂಬರ್‌ ೨ರ ರಾತ್ರಿ ಮಲ್ಲಣ್ಣ ಎಂಬ ಪೊಲೀಸರೊಬ್ಬರು ನನ್ನನ್ನು ಕರೆದು ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ಕರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಾನು ನನ್ನ ಮಾವನ ಮನೆಗೆ ಹೋಗುತ್ತಿದ್ದವನು ಠಾಣೆಗೆ ವಾಪಸ್‌ ಬಂದೆ. ಆದರೆ, ಬಂದ ಕೂಡಲೇ ಕಾರಣ ಹೇಳದೆ ನನ್ನನ್ನು ಲಾಕಪ್‌ನಲ್ಲಿ ವಿನಾಕಾರಣ ಕೂರಿಸಿದ್ದಾರೆ. ಬಳಿಕ ನನ್ನನ್ನು ಬಿಟ್ಟುಕಳುಹಿಸಿದ್ದಾರೆ. ಮತ್ತೆ ನನ್ನನ್ನು ಲಾಕಪ್‌ ಹಾಕುವ ಬೆದರಿಕೆಯನ್ನು ಒಡ್ಡಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ತಾಯಣ್ಣ ಪತ್ರದಲ್ಲಿ ಬರೆದುಕೊಂಡಿದ್ದರು.
-ನನ್ನ ಪಿತ್ರಾರ್ಜಿತ ಆಸ್ತಿ ಇರುವ ಜಾಗಕ್ಕೂ ನಾನು ಹೋಗುವಂತಿಲ್ಲ ಎಂದು ಪಿಎಸ್‌ಐ ಗೀತಾಂಜಲಿ ತಾಕೀತು ಮಾಡಿದ್ದಾರೆ. ಈ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ನನಗೆ ಗೀತಾಂಜಲಿ ಅವರು ಬಹಳವೇ ನೋವು ಕೊಟ್ಟಿದ್ದಾರೆ.
-ನನಗೆ ರೌಡಿಶೀಟರ್‌ ಕೇಸ್‌ ಹಾಕುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಹೀಗೆ ಬಹಳ ಸಲ ಹೇಳಿದ್ದಾರೆ. ಇದು ನನಗೆ ತುಂಬಾ ನೋವು ತಂದಿದೆ. ಇದರಿಂದ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
-ಅಮ್ಮ, ಅಪ್ಪ, ಅಣ್ಣಂದಿರೇ, ಅಕ್ಕಂದಿರೇ ನಿಮಗೆ ನಮಸ್ಕರಿಸುತ್ತಾ ನಾನು ಈ ಭೂಮಿ ಬಿಟ್ಟು ಹೋಗುತ್ತಿದ್ದೇನೆ. ಮುಂದಿನ ವರ್ಷ ನಾನು ಲಾಯರ್‌ ಆಗುತ್ತಿದ್ದೆ. ಆದರೆ, ನನ್ನ ಆ ಕನಸಿಗೆ ಈ ಪಿಎಸ್‌ಐ ಗೀತಾಂಜಲಿ ಕಪ್ಪು ಚುಕ್ಕೆ ಇಟ್ಟರು. ನನ್ನ ಈ ಆತ್ಮಹತ್ಯೆಯಿಂದ ರಾಜ್ಯದಲ್ಲಿ ಅಮಾಯಕರ ಮೇಲಿನ ದೌರ್ಜನ್ಯ ಕಡಿಮೆ ಆಗಬೇಕು ಎಂದೂ ತಾಯಣ್ಣ ಬರೆದುಕೊಂಡಿದ್ದರು.

ಇದನ್ನೂ ಓದಿ | ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ರದ್ದು, ರೈತರಿಗೆ ಆಘಾತ

Exit mobile version