ತುಮಕೂರು: ಗಲಾಟೆ ಪ್ರಕರಣದಲ್ಲಿ ಐವರು ಯುವಕರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವು ಜಿಲ್ಲೆಯ (Tumkur News) ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಪೋಲಿಸ್ ಠಾಣೆಯ ಪಿಎಸ್‌ಐ ವಿರುದ್ಧ ಕೇಳಿಬಂದಿದೆ. ಪಿಎಸ್‌ಐ ಕುಡಿದ ಮತ್ತಿನಲ್ಲಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಪಿಎಸ್‌ಐ ಅರ್ಜುನ್ ಗೌಡ ಎಂಬುವವರ ವಿರುದ್ಧ ಥಳಿತ ಆರೋಪ ಕೇಳಿಬಂದಿದೆ. ಚಿರಂಜೀವಿ, ಅನಿಲ್, ಮಾರುತಿ, ಗುಣಶೇಖರ್ ಹಾಗೂ ಮಂಜುನಾಥ್ ಗಾಯಾಳು ಯುವಕರಾಗಿದ್ದಾರೆ. ಶುಕ್ರವಾರ ದೊಡ್ಡಹಳ್ಳಿ ಮತ್ತು ಕೆ.ರಾಮಪುರ ಗ್ರಾಮದ ಯುವಕರ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ವಿಚಾರವಾಗಿ ವೈ.ಎನ್. ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಶನಿವಾರ ಬೆಳಗ್ಗೆ 5 ಜನ ಯುವಕರನ್ನು ಠಾಣೆಗೆ ವಿಚಾರಣೆಗೆಂದು ಕರೆಸಿಕೊಳ್ಳಲಾಗಿತ್ತು.
ಇದನ್ನೂ ಓದಿ | Cow slaughter : ಗೋರಕ್ಷಕರ ಹೆಸರಲ್ಲಿ ಮುಸ್ಲಿಂ ವ್ಯಕ್ತಿಯ ಕೊಲೆ; ಪುನೀತ್ ಕೆರೆಹಳ್ಳಿ ಟೀಮ್ ಕೃತ್ಯ; ಮಂಡ್ಯದಲ್ಲಿ ಭಾರಿ ಪ್ರತಿಭಟನೆ
ಮಧ್ಯರಾತ್ರಿ 12 ಗಂಟೆಗೆ ಠಾಣೆಗೆ ಆಗಮಿಸಿದ್ದ ಪಿಎಸ್‌ಐ ಅರ್ಜುನ್ ಗೌಡ, ಇತರೇ ನಾಲ್ವರು ಪೋಲಿಸ್ ಸಿಬ್ಬಂದಿ ಜತೆ ಸೇರಿ ಐವರು ಯುವಕರನ್ನು ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಇನ್ನು ಪಿಎಸ್‌ಐ ಅರ್ಜುನ್ ಗೌಡ ಕುಡಿದ ಮತ್ತಿನಲ್ಲಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕರ ಪೋಷಕರು ಆರೋಪಿಸಿದ್ದು, ಮೈಯೆಲ್ಲ ಬಾಸುಂಡೆಗಳು ಬರುವಂತೆ ಲಾಠಿಯಿಂದ ಹೊಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಯುವಕರನ್ನು ಚಿಕಿತ್ಸೆಗಾಗಿ ಪಾವಗಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು
ಕೋಲಾರ: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಪರವನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಬಂಗಾರಪೇಟೆ ತಾಲೂಕು ತಂಗೇಡಿಮಿಟ್ಟೆ ಗ್ರಾಮದ ಗೋಪಾಲ್ (25) ಹಾಗೂ ಪರವನಹಳ್ಳಿ ಗ್ರಾಮದ ನವೀನ್ (26) ಮೃತರು. ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ | Road accident : ಹಿರಿಯೂರು ಬಳಿ ಬಸ್, ಟಾಟಾ ಏಸ್, ಲಾರಿಗಳ ಸರಣಿ ಅಪಘಾತ; ಒಬ್ಬ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ಚಳ್ಳಕೆರೆಯ ಹಿರೇಹಳ್ಳಿ ಬಳಿ ಕಾರು ಪಲ್ಟಿ; ತೊಗಲು ಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ಸಾವು
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಕಾರೊಂದು ಪಲ್ಟಿ (Road Accident) ಹೊಡೆದಿದ್ದು, ತೊಗಲು ಗೊಂಬೆ ಕಲಾವಿದರೊಬ್ಬರು ಮೃತಪಟ್ಟಿದ್ದಾರೆ.
ತೊಗಲು ಗೊಂಬೆ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣ (91) ಮೃತಪಟ್ಟವರು. ಬಳ್ಳಾರಿ ಮೂಲದವರಾಗಿದ್ದು, ತೊಗಲುಗೊಂಬೆ ಆಟದ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾರಿನಲ್ಲಿದ್ದ ಅವರ ಪುತ್ರ ಹನುಮಂತಪ್ಪಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಕ್ರೇನ್ ಮೂಲಕ ಎತ್ತಿದ್ದಾರೆ. ಪ್ರಕರಣ ದಾಖಲಾಗಿದೆ.