ಬೆಂಗಳೂರು: ರಾಜ್ಯದ ಪದವಿಪೂರ್ವ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ 2022-23ನೇ ಸಾಲಿನ ತರಗತಿಗಳು ಗುರುವಾರ(ಜೂನ್ 9) ಆರಂಭವಾಗಲಿವೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ತರಗತಿಗಳು ಸರಿಯಾಗಿ ನಡೆದಿರಲಿಲ್ಲ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ಪಿಯು ಕಾಲೇಜುಗಳಲ್ಲಿ ದಾಖಲಾತಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಹಿಜಾಬ್ ಧರಿಸುವ ಕುರಿತು ವಿವಾದದ ಹಿನ್ನೆಲೆಯಲ್ಲಿ, ಹೈಕೋರ್ಟ್ ಆದೇಶದಂತೆ ನಿಗದಿಪಡಿಸಿದ ಸಮವಸ್ತ್ರ ಧರಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಲಾಗಿದೆ. ಕಾಲೇಜು ನಿರ್ದೇಶನ ಮೀರಿ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಮುಂದಾದರೆ ಮತ್ತೆ ವಿವಾದ ಭುಗಿಲೇಳುವ ಸಾಧ್ಯತೆ ಇದೆ. ಈಗಾಗಲೆ ಕಾಲೇಜುಗಳು ಹಾಗೂ ಸ್ಥಳೀಯ ಪೊಲೀಸರು ಈ ಕುರಿತು ಗಮನ ಹರಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ.
ತರಗತಿ ಆರಂಭಕ್ಕೆ ಪಿಯು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮೂಲಸೌಕರ್ಯ ಸಹಿತ ಇನ್ನಿತರ ಅಗತ್ಯ ಸೌಲಭ್ಯಗಳ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಇಲಾಖೆ ಸೂಚಿಸಿದೆ. ಸಮವಸ್ತ್ರ ಇರುವ ಸಂಸ್ಥೆಗಳಲ್ಲಿ ಸಮವಸ್ತ್ರಗಳನ್ನು ಧರಿಸುವಂತೆ ಪಿಯು ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ | ಪಿಯು ಪಠ್ಯ ಪರಿಷ್ಕರಣೆಯಿಂದಲೂ ರೋಹಿತ್ ಚಕ್ರತೀರ್ಥ ಔಟ್