Site icon Vistara News

Road Accident : ಬೈಕ್‌ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ; ತಂದೆ ಕಣ್ಣೆದುರೇ ಹಾರಿ ಹೋಯ್ತು ಮಗಳ ಪ್ರಾಣ

Road Accident in Bengaluru

ಬೆಂಗಳೂರು: ಇಲ್ಲಿನ ಜಾಲಹಳ್ಳಿ ಕ್ರಾಸ್‌ನಲ್ಲಿ ಬೈಕ್‌ಗೆ ಖಾಸಗಿ ಬಸ್‌ ಡಿಕ್ಕಿಯಾಗಿ ಪಿಯು ವಿದ್ಯಾರ್ಥಿನಿ (Road Accident) ಮೃತಪಟ್ಟಿದ್ದಾಳೆ. ದಿಶಾ (18) ಮೃತ ದುರ್ದೈವಿ.

ದಿಶಾ ತನ್ನ ತಂದೆ ಸತೀಶ್‌ ಜತೆಗೆ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಳು. ಈ ವೇಳೆ ಹಿಂದಿನಿಂದ ಬಂದ ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ದಿಶಾ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಕೂದಳೆ ಅಂತರದಲ್ಲಿ ತಂದೆ ಸತೀಶ್‌ ಬಚಾವ್ ಆಗಿದ್ದಾರೆ.

ದಿಶಾ ಮಲ್ಲೇಶ್ವರಂನ ಎಂಇಎಸ್‌ ಕಾಲೇಜಿನಲ್ಲಿ (MES college) ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ತಂದೆ ಕಣ್ಣೆದುರೇ ಮಗಳ ಪ್ರಾಣ ಹಾರಿ ಹೋಗಿದ್ದು, ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.

ಸದ್ಯ, ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪಾರ್ಟಿ ಮಾಡಿ ಬಂದು ಪೊಲೀಸ್‌ ಜೀವ ತೆಗೆದರು!

ದೇವನಹಳ್ಳಿ: ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತ ಬಂದ ಯುವಕರು ಕೆಟ್ಟು ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ (road accident) ಪರಿಣಾಮ, ಸ್ಥಳದಲ್ಲಿದ್ದ ಒಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ ಮೃತಪಟ್ಟಿದ್ದಾರೆ. ಏಳು ಜನರಿಗೆ ಗಂಭೀರ ಗಾಯಗಳಾಗಿವೆ.

ದುರಂತವೆಂದರೆ, ಕೆಟ್ಟುಹೋಗಿದ್ದ ಕಾರು ಪರಿಶೀಲನೆಗೆ ಬಂದ ಪೊಲೀಸ್‌ ಕಾನ್‌ಸ್ಟೇಬಲ್‌ ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌ ಇನ್‌ಸ್ಪೆಕ್ಟರ್ ಕೂದಲಳತೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಏರ್‌ಪೋರ್ಟ್‌ ರಸ್ತೆಯ ಚಿಕ್ಕಜಾಲ ಬಳಿ ಘಟನೆ ನಡೆದಿದೆ. ದೇವನಹಳ್ಳಿ ಪೊಲೀಸ್ ಠಾಣೆಯ ಪಿಸಿ ಸುರೇಶ್ ಮೃತ ದುರ್ದೈವಿ. ಕಳೆದ ರಾತ್ರಿ ನೈಟ್ ರೌಂಡ್ಸ್ ಮಾಡುತ್ತಿದ್ದ ದೇವನಹಳ್ಳಿ ಇನ್‌ಸ್ಪೆಕ್ಟರ್ ಧರ್ಮೇಗೌಡ ಮತ್ತು ಜೀಪ್ ಡ್ರೈವರ್ ಸುರೇಶ್ ಈ ವೇಳೆ ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಇನ್ನೊವಾ ಕಾರನ್ನು ಕಂಡಿದ್ದಾರೆ. ಹೀಗಾಗಿ ಏನಾಗಿದೆ ಎಂದು ನೋಡಲು ಚಾಲಕನ ಸಹಾಯಕ್ಕೆ ಹೋಗಿದ್ದರು. ಇದೇ ಸಮಯದಲ್ಲಿ ಪೋನ್ ಕಾಲ್ ರಿಸೀವ್‌ ಮಾಡಲು ಇನ್‌ಸ್ಪೆಕ್ಟರ್ ಧರ್ಮೇಗೌಡ ರಸ್ತೆ ಬದಿಗೆ ಹೋಗಿದ್ದರು.

ಇದನ್ನೂ ಓದಿ: Forest Encroachment : ಡೀಮ್ಡ್‌ ಫಾರೆಸ್ಟ್‌ ಒತ್ತುವರಿ ಮಾಡಿದ್ದ ಸಕಲೇಶಪುರ ರೆಸಾರ್ಟ್‌ಗೆ ಬೀಗ!

ಈ ವೇಳೆ ಮೂವರು ಯುವಕರು ಹಾಗೂ ಮೂವರು ಯುವತಿಯರಿದ್ದ ಆಸೆಂಟ್‌ ಕಾರು ವೇಗವಾಗಿ ಬಂದು ಡಿಕ್ಕಿಯಾಗಿದೆ. ಇವರು ರಾತ್ರಿಯೆಲ್ಲ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದು ಮುಂಜಾನೆ ನಂದಿಬೆಟ್ಟಕ್ಕೆ ತೆರಳುತ್ತಿದ್ದರು. ಅಪಘಾತದ ರಭಸಕ್ಕೆ ಪಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಟ್ಟು ನಿಂತಿದ್ದ ಕಾರು ಚಾಲಕನ ಕೈ ಕಾಲು ಮುರಿದಿದೆ. ಕುಡಿದ ಮತ್ತಿನಲ್ಲಿದ್ದ ಯುವಕರು ಹಾಗೂ ಯುವತಿಯರಿಗೂ ಗಂಭೀರ ಗಾಯಗಳಾಗಿವೆ.

ಪೊಲೀಸ್ ಪೇದೆ ಸುರೇಶ್ ದುರ್ಮರಣಕ್ಕೆ ಪೊಲೀಸರು ಕಂಬನಿ ಮಿಡಿದಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version