ಬೆಂಗಳೂರು: 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ (Public Exam) ನಡೆಸುವ ರಾಜ್ಯ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಮಾರ್ಚ್ 13ರಿಂದ ಆರಂಭವಾಗಬೇಕಾಗಿದ್ದ ಪರೀಕ್ಷೆ ರದ್ದಾಗಲಿದೆ.
ಹೈಕೋರ್ಟ್ ನ್ಯಾ. ಪ್ರದೀಪ್ ಸಿಂಗ್ ಹೆರೂರ್ ಅವರ ನೇತೃತ್ವ ಪೀಠವು ಶುಕ್ರವಾರ ನಡೆಸಿದ ಮಹತ್ವದ ವಿಚಾರಣೆಯ ಬಳಿಕ ಪಬ್ಲಿಕ್ ಪರೀಕ್ಷೆ ನಡೆಸದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಪಬ್ಲಿಕ್ ಪರೀಕ್ಷೆಗೆ ಪೋಷಕರ ವಿರೋಧವೂ ಇತ್ತು. ಇದೀಗ ಹೈಕೋರ್ಟ್ ಆದೇಶ ಪೋಷಕರಿಗೂ ನಿರಾಳತೆ ನೀಡಿದೆ.
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮೇಲ್ಮನವಿ ಸಲ್ಲಿಸಿದ್ದರು. 2022-23ನೇ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ಸಂಘವು ತಕರಾರು ಅರ್ಜಿ ಸಲ್ಲಿಸಿತ್ತು.
ಅದನ್ನು ಫೆಬ್ರವರಿ 23ರಂದು ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ರುಪ್ಸಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮೌಲ್ಯಮಾಪನ ಬದಲಾವಣೆಗೆ ಸರ್ಕಾರ ಕೈಗೊಂಡಿರುವ ನಿರ್ಣಯವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಸಂಘದ ಆಕ್ಷೇಪಣೆಯಾಗಿತ್ತು.
ಮೇಲ್ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಸಕ್ತ ಶೈಕ್ಷಣಿಕ ಸಾಲಿನ 5 ಮತ್ತು 8ನೇ ತರಗತಿಗಳ ಪರೀಕ್ಷೆಗಳು ಮಾರ್ಚ್ 13ರಂದು ಆರಂಭವಾಗಲಿರುವುದರಿಂದ ತುರ್ತಾಗಿ ಅರ್ಜಿ ಇತ್ಯರ್ಥ ಪಡಿಸಿ ಎಂದು ಸೂಚಿಸಿತ್ತು. ಅದರಂತೆ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಪಬ್ಲಿಕ್ ಪರೀಕ್ಷೆ ರದ್ದು ಮಾಡಿದ್ದು ಯಾಕೆ?
ಐದು ಮತ್ತು ಎಂಟನೇ ತರಗತಿ ಪರೀಕ್ಷೆ ನಡೆಸದಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ವಿಷಯದ ಬಗ್ಗೆ ರಾಜ್ಯ ಹೈಕೋರ್ಟ್‌ನ ಗಮನ ಸೆಳೆದಿದ್ದು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷರಾಗಿರುವ ಲೋಕೇಶ್ ತಾಳಿಕಟ್ಟೆ ಅವರು. ಅವರು ಪ್ರತಿಪಾದಿಸಿದ ಹಲವು ಅಂಶಗಳನ್ನು ಹೈಕೋರ್ಟ್ ಪರಿಗಣಿಸಿ ಈ ತೀರ್ಪನ್ನು ನೀಡಿದೆ.
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಲೊಕೇಶ್ ತಾಳಿಕಟ್ಟೆ ಅವರು, ರಾಜ್ಯ ಸರ್ಕಾರ ಏಕಾಏಕಿಯಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿದ್ದನ್ನು ಪ್ರಶ್ನಿಸಿ ಸಂಘಟನೆ ಮೂಲಕ ಹೈಕೋರ್ಟ್ ಬಾಗಿಲು ತಟ್ಟಿದ್ದೆವು. ಅದಕ್ಕೀಗ ಗೆಲುವು ಸಿಕ್ಕಿದೆ ಎಂದರು.
ಶಿಕ್ಷಣ ಇಲಾಖೆ ವಾರ್ಷಿಕ ಚಟುವಟಿಕೆಗಳ ಪಟ್ಟಿಯಲ್ಲಿ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿರಲಿಲ್ಲ. ಏಕಾಏಕಿಯಾಗಿ ತೀರ್ಮಾನವನ್ನು ಪ್ರಕಟಿಸಿತ್ತು. ಇದರ ನಡುವೆ ಸರ್ಕಾರಿ ಶಾಲೆಗಳಿಗೆ ಪಬ್ಲಿಕ್ ಪರೀಕ್ಷೆಯ ಸಿಲೆಬಸ್ ನೀಡಿತ್ತು. ಆದರೆ ಖಾಸಗಿ ಶಾಲೆಗಳಿಗೆ ಅದನ್ನು ನೀಡಲೇ ಇಲ್ಲ. ಇಡೀ ರಾಜ್ಯಕ್ಕೆ ಒಂದೇ ಮಾದರಿ ಪರೀಕ್ಷೆ ನಡೆಸಬೇಕು ಎಂದು ಏಕಪಕ್ಷೀಯ ಆದೇಶವನ್ನು ನೀಡಿತ್ತು. ಇದು ಮಕ್ಕಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಿಕ್ಷಣ ಇಲಾಖೆಯ ದಬ್ಬಾಳಿಕೆ ಎಂದು ಪರಿಗಣಿಸಿ ನಾವು ಕೋರ್ಟ್‌ಗೆ ಮನವಿ ಮಾಡಿದೆವು. ಈಗ ತೀರ್ಪು ಬಂದಿದೆ. ಇನ್ನಾದರೂ ಇಲಾಖೆ ಒಂದು ವ್ಯವಸ್ಥೆಯ ಸಾಧಕ ಬಾಧಕಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ಲೋಕೇಶ್ ತಾಳಿಕಟ್ಟೆ ಹೇಳಿದರು.