Site icon Vistara News

Public Exam : ಕೋರ್ಟ್‌ ಸೂಚನೆಯಂತೆ ಮಾ. 27ರಿಂದ 5, 8ನೇ ಕ್ಲಾಸ್‌ಗೆ ಪಬ್ಲಿಕ್‌ ಪರೀಕ್ಷೆ, ಇಲ್ಲಿದೆ ಹೊಸ ವೇಳಾಪಟ್ಟಿ

Exam

#image_title

ಬೆಂಗಳೂರು: 5 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ (Public Exam) ನಡೆಸಬಹುದು ಎಂದು ಹೈಕೋರ್ಟ್ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಿಗೇ ಶಿಕ್ಷಣ ಇಲಾಖೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೈಕೋರ್ಟ್‌ ಸೂಚಿಸಿದಂತೆ ಮಾರ್ಚ್‌ 27ರಿಂದ ಪರೀಕ್ಷೆಗಳು ನಡೆಯಲಿವೆ.

ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಈ ಹಿಂದೆ ಮಾರ್ಚ್‌ 13ರಿಂದ 5 ಮತ್ತು 8ನೇ ತರಗತಿ ಬೋರ್ಡ್​ ಪರೀಕ್ಷೆ ನಡೆಸಲು ಮುಂದಾಗಿತ್ತು. ಆದರೆ, ಇದನ್ನು ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಮನವಿಯನ್ನು ಪರಿಗಣಿಸಿದ ಏಕಸದಸ್ಯ ಪೀಠ ಪಬ್ಲಿಕ್‌ ಪರೀಕ್ಷೆಯನ್ನು ರದ್ದುಪಡಿಸಿತ್ತು. ಇದರ ವಿರುದ್ಧ ಶಿಕ್ಷಣ ಇಲಾಖೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ವಾದವನ್ನು ಆಲಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠದ ಕೆಲವು ಷರತ್ತುಗಳೊಂದಿಗೆ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿದೆ. ಇದರ ಹಿನ್ನೆಲೆಯಲ್ಲಿ ಹೊಸ ವೇಳಾಪಟ್ಟಿ ಪ್ರಕಟವಾಗಿದೆ.

ಯಾವಾಗ ಪರೀಕ್ಷೆ?

27.03.23ರಿಂದ 30.03.23ರವರೆಗೆ 5ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದರೆ, 8ನೇ ತರಗತಿ ವಿದ್ಯಾರ್ಥಿಗಳಿಗೆ 27.03.2023ರಿಂದ 01.04.2023ರವರೆಗೆ ಪರೀಕ್ಷೆ ನಿಗದಿ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ನಿಗದಿ ಮಾಡಲಾಗಿದೆ, ಮೌಲ್ಯಾಂಕನದ ಬಳಿ ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣಗೊಳಿಸುವುದಿಲ್ಲ ಎಂದು ಇಲಾಖೆ ಪ್ರಕಟಿಸಿದೆ. ಜತೆಗೆ ಫಲಿತಾಂಶವನ್ನು ವಿದ್ಯಾರ್ಥಿಗೆ ಮಾತ್ರ ತಿಳಿಸಬೇಕು ಎಂಬ ಹೈಕೋರ್ಟ್‌ ಸೂಚನೆಯನ್ನು ಪಾಲಿಸುವುದಾಗಿ ಸ್ಪಷ್ಟಪಡಿಸಿದೆ.

ಶಿಕ್ಷಣ ಇಲಾಖೆ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿ ಹೀಗಿದೆ…

ಪರೀಕ್ಷೆ ವೇಳಾಪಟ್ಟಿ

ಶಿಕ್ಷಣ ಇಲಾಖೆ ನೀಡಿರುವ ಕೆಲವೊಂದು ಪ್ರಮುಖ ಸೂಚನೆಗಳು ಹೀಗಿವೆ

●ಮಂಡಲಿ ವತಿಯಿಂದ ಮೌಲ್ಯಾಂಕನ ನಡೆಸುವ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಿಗೂ ಮಂಡಲಿಯಿಂದ ನಿಗದಿಪಡಿಸಿರುವ ದಿನಾಂಕಕ್ಕಿಂತ ಮೊದಲೇ ತಮ್ಮ ಶಾಲಾ ಹಂತದಲ್ಲಿಯೇ ಮೌಲ್ಯಾಂಕನ ನಡೆಸುವುದು. (ಉದಾ: ದೈಹಿಕ ಶಿಕ್ಷಣ, ಇತರೆ ವಿಷಯಗಳು)

● 8ನೇ ತರಗತಿಯಲ್ಲಿ ಪ್ರಥಮ ಭಾಷೆ ಇಂಗ್ಲೀಷ್ (NCERT) ಮತ್ತು ತೃತೀಯ ಭಾಷೆ ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ. – ಹಿಂದಿ (NCERT) ವಿಷಯಗಳು

ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶೋತ್ತರ ಪತ್ರಿಕೆಗಳನ್ನೇ ಬಳಸಿ ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸುವುದು.

ದಿನಾಂಕ: 30.03.2023 ರಂದು ನಡೆಯುವ ಗಣಿತ ವಿಷಯದ ಮೌಲ್ಯಾಂಕನದ ಅವಧಿಯನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1230 ರವರೆಗೆ ನಿಗದಿಪಡಿಸಲಾಗಿದೆ ಹಾಗೂ ಉಳಿದ ಎಲ್ಲಾ ದಿನಗಳ ಮೌಲ್ಯಾಂಕನವು ಮಧ್ಯಾಹ್ನ 2.30 ರಿಂದ 430 ರವರೆಗೆ ನಡೆಯಲಿದೆ. ಈ ವಿಷಯವನ್ನು ಶಾಲಾ ಮುಖ್ಯ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸುವುದು.

ಪ್ರಶ್ನೆಪತ್ರಿಕೆ ಸ್ವರೂಪ ಹೀಗಿರುತ್ತದೆ..

• 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುತ್ತಿದೆ. • ಪ್ರತಿ ವಿಷಯದ ಮೌಲ್ಯಾಂಕನಕ್ಕೆ 2 ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ.

• ತರಗತಿವಾರು ಪ್ರತಿ ವಿಷಯಕ್ಕೆ 40 ಅಂಕಗಳ ಲಿಖಿತ ಮೌಲ್ಯಾಂಕನಕ್ಕೆ 28 ಪ್ರಶ್ನೆಗಳನ್ನೊಳಗೊಂಡ (1 ಅಂಕದ 20 ಬಹುಆಯ್ಕೆ ಪ್ರಶ್ನೆಗಳು, 2 ಅಂಕಗಳ 5, 3 ಅಂಕಗಳ 2 ಹಾಗೂ 4 ಅಂಕಗಳ 1 ವಿವರಣಾತ್ಮಕ ಪ್ರಶ್ನೆಗಳು) ಪ್ರತ್ಯೇಕ ಪ್ರಶೋತ್ತರ ಪತ್ರಿಕೆಯನ್ನು ನೀಡಲಾಗುತ್ತದೆ.

• 10 ಅಂಕಗಳ ಮೌಖಿಕ ಮೌಲ್ಯಾಂಕನವನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ತಿಳಿಸಲಾಗಿದೆ.

• 40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸುವುದು.

ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಸಿದ್ಧಗೊಳಿಸಲು ಮಾದರಿ ಪ್ರಶೋತ್ತರ ಪತ್ರಿಕೆಗಳನ್ನು ಮತ್ತು ಮೌಲ್ಯಾಂಕನಕ್ಕೆ ಒಳಪಡಿಸಿರುವ ಪಠ್ಯಪುಸ್ತಕದಲ್ಲಿನ ಘಟಕಗಳ ವಿವರಗಳನ್ನು ಮಂಡಲಿಯ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.

ಇದನ್ನೂ ಓದಿ : Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್, ಮಾರ್ಚ್‌ 27ರಿಂದ ಎಕ್ಸಾಂ ನಡೆಸಲು ಸೂಚನೆ

Exit mobile version