ಬೆಳಗಾವಿ: ಈಗ ರಾಜ್ಯಾದ್ಯಂತ ಪುನೀತ ಪರ್ವದ್ದೇ (Puneeth Parva) ಸುದ್ದಿ. ಇದರ ಅಂಗವಾಗಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ನಿಮ್ಮಿತ ಬೆಂಗಳೂರಿನಲ್ಲಿ ನಡೆಯಲಿರುವ ಪುನೀತ ಪರ್ವ ಕಾರ್ಯಕ್ರಮಕ್ಕೆ ಅಭಿಮಾನಿಗಳು ಈಗ ಒಂದೊಂದು ರೀತಿಯಲ್ಲಿ ಅಭಿಮಾನವನ್ನು ಅರ್ಪಿಸಲು ಮುಂದಾಗಿದ್ದಾರೆ. ಇದೇ ರೀತಿಯಾಗಿ ಅಪ್ಪುವಿನ ಕಟ್ಟಾ ಅಭಿಮಾನಿಯಾಗಿರುವ ಜಿಲ್ಲೆಯ ಗೋಕಾಕ ತಾಲೂಕಿನ ಅಕ್ಕತಂಗಿಯರಹಾಳ ನಿವಾಸಿ ಆನಂದ ಕೋಣಿ ಈಗ ಸೈಕಲ್ ಯಾತ್ರೆಯನ್ನು ಕೊಂಡಿದ್ದಾರೆ.
ಸತ್ಕರಿಸಿ ಬೀಳ್ಕೊಟ್ಟ ಗ್ರಾಮಸ್ಥರು
ಅಪ್ಪು ಅಭಿಮಾನಿ ಆನಂದ ಕೋಣಿ ಅವರ ಈ ತೀರ್ಮಾನಕ್ಕೆ ಗ್ರಾಮದ ಯುವಕರು ಬೆಂಬಲ ಸೂಚಿಸಿದ್ದು, ಅವರಿಗೆ ಗ್ರಾಮದಲ್ಲಿ ಸತ್ಕರಿಸಿ ಬೀಳ್ಕೊಟ್ಟಿದ್ದಾರೆ. ಇದಕ್ಕಾಗಿ ತನ್ನ ಸೈಕಲ್ ಅನ್ನು ಸಿಂಗರಿಸಿಕೊಂಡಿರುವ ಆನಂದ ಅವರು ಸೈಕಲ್ ಮುಂಬದಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಟ್ಟು, ಹೂವಿನ ಹಾರವನ್ನು ಹಾಕಿದ್ದಾರೆ.
ಇದನ್ನೂ ಓದಿ | ನ.1ರಂದು ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಇದಕ್ಕಾಗಿ ಸಕಲ ಸಿದ್ಧತೆ ಎಂದ ಬೊಮ್ಮಾಯಿ
ಏನಿದು ಪುನೀತ ಪರ್ವ?
ಅಗಲಿದ ನಾಯಕ ನಟ, ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ʼಪುನೀತ ಪರ್ವʼ ಕಾರ್ಯಕ್ರಮವು ಅಕ್ಟೋಬರ್ ೨೧ರಂದು ಸಂಜೆ ೬ ಗಂಟೆಗೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಪುನೀತ್ ನಟನೆಯ ಕೊನೆಯ ಸಿನಿಮಾ ʼಗಂಧದ ಗುಡಿʼ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಪುನೀತ್ ಕುಟುಂಬ ಹಾಗೂ ಸಿನಿಮಾ ತಂಡ ನಿರ್ಧರಿಸಿದೆ. ಇವೆಂಟ್‌ಗೆ ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ರಂಗದ ಖ್ಯಾತನಾಮರು ಆಗಮಿಸಲಿದ್ದಾರೆ.
ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಕಾಲಿವುಡ್ನಿಂದಲೂ ನಟ – ನಟಿಯರು ಆಗಮಿಸುತ್ತಿದ್ದಾರೆ. ಟಾಲಿವುಡ್‌ನಿಂದ ಬಾಲಯ್ಯ, ಕಾಲಿವುಡ್ ನಾಯಕ ಕಮಲ್ ಹಾಸನ್, ಸೂರ್ಯ, ಬಹುಭಾಷಾ ನಟ ಪ್ರಭುದೇವ, ರಾಣಾ ದಗ್ಗುಬಾಟಿ ಹೀಗೆ ಇನ್ನೂ ಅನೇಕರು ಈ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪುನೀತ ಪರ್ವಕ್ಕೆ ಚಂದನವನದ ಖ್ಯಾತನಾಮರು ಸಹ ಸಾಕ್ಷಿಯಾಗಲಿದ್ದಾರೆ. ಕಿಚ್ಚ ಸುದೀಪ್, ಯಶ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್, ರಮ್ಯಾ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಯರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಎಲ್ಲವೂ ಇರಲಿದೆ. ನಟ ಶಿವರಾಜ್ಕುಮಾರ್, ರಮ್ಯಾ ಸೇರಿದಂತೆ ಅನೇಕ ನಟ-ನಟಿಯರು ತಮ್ಮ ನೃತ್ಯದ ಮೂಲಕ ರಂಜಿಸಲಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದು, ಅಕ್ಟೋಬರ್ 28ಕ್ಕೆ ಬಿಡುಗಡೆ ಆಗಲಿದೆ.
ಕಾರ್ಯಕ್ರಮಕ್ಕೆ ಬಂದೋಬಸ್ತ್
ಕಾರ್ಯಕ್ರಮಕ್ಕೆ ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. 3 ಡಿಸಿಪಿ, 14 ಎಸಿಪಿ, 60 ಇನ್ಸ್‌ಪೆಕ್ಟರ್, 180 ಪಿಎಸ್ಐ ಹಾಗೂ 1400 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 KSRP ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ತಿಳಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಅವಕಾಶ. ಪ್ರತ್ಯೇಕವಾದ ಪಾರ್ಕಿಂಗ್ ನೀಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಇದನ್ನೂ ಓದಿ | Gandhada Gudi | ಡಾ. ರಾಜ್ ಗಂಧದ ಗುಡಿಗಿಂತಲೂ ಪುನೀತ್ ಸಿನಿಮಾ ಯಶಸ್ಸು ಕಾಣಲಿ: ಸೋದರತ್ತೆ ನಾಗಮ್ಮ ಹಾರೈಕೆ