ಕಾರವಾರ: ಮುರ್ಡೇಶ್ವರದ ನೇತ್ರಾಣಿ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ಮಾಡಿ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಡಾಕ್ಯುಮೆಂಟರಿ ʼಗಂಧದಗುಡಿʼಯ ಪ್ರಚಾರ ಮಾಡಿರುವುದು ಅಪ್ಪು ಅಭಿಮಾನಿಗಳನ್ನು ಪುಳಕಗೊಳಿಸಿದೆ. ಸಮುದ್ರದಾಳದಲ್ಲಿ ಪುನೀತ್ ರಾಜ್‌ಕುಮಾರ್ ಇರುವ ಪೋಸ್ಟರ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್‌ನಿಂದ ನಡೆಯುವ ಸ್ಕೂಬಾ ಡೈವಿಂಗ್ ಮೂಲಕ ಈ ಸಾಹಸ ಮಾಡಲಾಗಿದೆ. ಈ ಮೂಲಕ ಕಡಲಾಳದ ಜೀವರಾಶಿಗಳ ನಡುವೆಯೂ ಅಪ್ಪು ಹವಾ ವ್ಯಾಪಿಸಿದೆ.
ʼಗಂಧದಗುಡಿʼ ಡಾಕ್ಯುಮೆಂಟರಿ ಶೂಟಿಂಗ್ ವೇಳೆ ಪುನೀತ್ ರಾಜ್‌ಕುಮಾರ್ ಇಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಸ್ಕೂಬಾ ಡೈವಿಂಗ್ ಮಾಡಿ ಖುಷಿಪಟ್ಟಿದ್ದರು.
2021ರ ಫೆಬ್ರುವರಿ ಮೊದಲ ವಾರ ಮುರ್ಡೇಶ್ವರಕ್ಕೆ ಪುನೀತ್ ಆಗಮಿಸಿ ಶೂಟಿಂಗ್ ನಡೆಸಿದ್ದರು. ಈಗ ಗಂಧದಗುಡಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ʼಅಪ್ಪುʼ ನೆನಪಿನಲ್ಲಿ ಮುರ್ಡೇಶ್ವರದಲ್ಲಿ ಗಂಧದಗುಡಿ ಪೋಸ್ಟರ್ ಹಿಡಿದು ಅವರ ಅಭಿಮಾನಿಗಳು ಸ್ಕೂಬಾ ಡೈವಿಂಗ್ ಮಾಡಿದ್ದಾರೆ.
ಮುರ್ಡೇಶ್ವರದ ನೇತ್ರಾಣಿ ದ್ವೀಪದ ಬಳಿ ನಡೆಸುವ ಸ್ಕೂಬಾ ಡೈವಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ದಿನವೂ ಇಲ್ಲಿ ನೂರಾರು ಪ್ರವಾಸಿಗರು ಸ್ಕೂಬಾ ಡೈವಿಂಗ್ ನಡೆಸಿ ಥ್ರಿಲ್ ಆಗುತ್ತಾರೆ.
ಪುನೀತ್ ರಾಜ್‌ಕುಮಾರ್ ಅವರು ಕೋವಿಡ್ ಅವಧಿಯಲ್ಲಿ ಸಿದ್ಧಪಡಿಸಿದ್ದ ಈ ಸಾಕ್ಷ್ಯ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಅ.28ರಂದು ಥಿಯೇಟರ್‌ಗಳಲ್ಲಿ ಇದು ಬಿಡುಗಡೆಯಾಗಲಿದೆ.
ಇದನ್ನೂ ಓದಿ| Puneeth Parva | ಗಂಧದ ಗುಡಿಗೆ ಅಮಿತಾಭ್ ಬಚ್ಚನ್ ಹಾರೈಕೆ, ಸಂಭ್ರಮದೊಂದಿಗೆ ʼಪುನೀತ ಪರ್ವʼ ಸಮಾರೋಪ