| ಗಾಯತ್ರಿ ರಾಜ್
ನಮ್ಮದು ದಾವಣಗೆರೆ. ಅಲ್ಲಿಯ ಪೊಲೀಸ್ ಕ್ವಾರ್ಟರ್ಸ್‌ನಲ್ಲೇ ನಾನು ಹುಟ್ಟಿ ಬೆಳೆದಿದ್ದು. ಮೊದಲ ಸಾಲು ಆಫೀಸರ್ ಮನೆಗಳು. ಆ ಮನೆಗಳ ಹಿಂದೆ ಹೆಡ್ ಕಾನ್ಸ್‌ಟೆಬಲ್, ಅದರ ಹಿಂದೆ ಪಿಸಿ, ಡ್ರೈವರ್ ಮನೆಗಳು ಅಂತ ಒಂದು ಮೂನ್ನೂರು ಕೆಂಪಂಚಿನ ಮನೆಗಳಿದ್ದವು. ಅದಕ್ಕೆಲ್ಲ ಸೇರಿ ಒಂದು ದೊಡ್ಡ ಕಾಂಪೌಂಡು… ಅದರ ಎದುರಿಗೆ ಮೇನ್ ರೋಡ್. ಮೇನ್ ರೋಡ್ ಆಚೆ ಅರುಣಾ ಟಾಕೀಸು. ನಮ್ಮ ಮನೆ ಮೊದಲ ಸಾಲಿನಲ್ಲೇ ಇದ್ದುದರಿಂದ ಟಾಕೀಸು ನಮಗೆ ಚೆನ್ನಾಗೇ ಕಾಣಿಸುತ್ತಿತ್ತು. ಅದರಲ್ಲಿ ಬರುವ ಸಿನಿಮಾಗಳ ಪೋಸ್ಟರ್‌ಗಳು, ಅದರ ಕಟೌಟುಗಳು! ಆ ಕಟೌಟುಗಳಿಗೆ ಹಾಕಿದ ದೊಡ್ಡ ದೊಡ್ಡ ಹಾರಗಳು! ಎಲ್ಲವೂ!
ಆದರೂ ಸಿನಿಮಾ ನೋಡುವುದು ನಮಗೆ ಸುಲಭ ಲಭ್ಯವಾಗಿರಲಿಲ್ಲ. ಅಪ್ಪ, ಕೇವಲ ರಾಜ್ ಕುಮಾರ್ ಸಿನಿಮಾಗಳನ್ನು ಮಾತ್ರ ನೋಡೋಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅದೂ ಎಲ್ಲರೂ ಚೆನ್ನಾಗಿದೆ ಅಂದ್ಮೇಲೇನೆ. ನಾನೋ ಆ ಬಣ್ಣದ ಪರದೆಯ ಹುಚ್ಚು ಹಚ್ಚಿಕೊಂಡಿದ್ದೋಳು. ಒಂದೈದು ವರ್ಷಗಳಿರಬಹುದು ನನಗಾಗ. ಟಿವಿ ಇರ್ಲಿಲ್ಲ. ಹಾಗಾಗಿ ಸಿನಿಮಾ ನಟರನ್ನು ದೇವರೆಂದು ಆರಾಧಿಸುವಷ್ಟು ಭಾವುಕತೆ ಮತ್ತು ಬಣ್ಣದ ಪರದೆಯ ಗೀಳು ಇಂದಿಗಿಂತ ತುಸು ಹೆಚ್ಚೇ ಇತ್ತು ಜನರಲ್ಲಿ. ಅದರಲ್ಲೂ ನಮ್ಮ ಹಿಂದಿನ ಸಾಲಿನ ಸಿದ್ದೇಗೌಡನ ಕುಟುಂಬದಲ್ಲಿ.
ಮೊದಲ ದಿನ ಮೊದಲ ಶೋ ಅವರೆಷ್ಟು ಮಜವಾಗಿ ನೋಡ್ತಿದ್ರೂ ಅಂದ್ರೆ… ಡ್ರೈವರ್ ಆಗಿದ್ದ ಆತ ಅದ್ಹೇಗೋ ಸುಲಭವಾಗಿ ಟಿಕೆಟು ಗಳಿಸಿ ಬಿಡ್ತಿದ್ದ. ಅದಷ್ಟೇ ಸಾಲದೆಂಬಂತೆ ನಮ್ಮ ಮನೆ ಮುಂದೆ (ಮೊದಲ ಸಾಲಲ್ಲಿತ್ತು ನಮ್ಮನೆ ಅನ್ನೋದು ಬೇರೆ) ಅವನ ಪೂರ್ತಿ ಕುಟುಂಬವನ್ನು ಕರೆದುಕೊಂಡು, ಬೆಳ್ಳಂಬೆಳಗ್ಗಿನ ಅವನ ತಿಳಿ ಷರ್ಟಿನ ಜೇಬಿನಲ್ಲಿ ಗುಲಾಬಿ ಬಣ್ಣದ ಟಿಕೆಟುಗಳನ್ನು ಬೇಕಂತಲೇ ಅದರ ಕಿವಿಯನ್ನು ಒಂದಿಷ್ಟು ಹೊರಗೆ ಕಾಣುವ ಹಾಗೆ ಇಟ್ಟುಕೊಂಡು ಮೀಸೆ ತಿರುವುತ್ತಾ ಯಾವುದೋ ಮದುವೆ ದಿಬ್ಬಿಣಕ್ಕೆ ಹೋದ ಹಾಗೆ ಹೋಗ್ತಿದ್ದ.
ಅಂದು ಬೆಳಗ್ಗೆ ನಾನೂ ಥೀಯೇಟರ್ ಫುಲ್ ಗಲಾಟೆಯಾಗ್ತಿದ್ದದ್ದು ನೋಡಿದ್ದೆ. ರಾಜಕುಮಾರ್ ಅವರ ದೊಡ್ಡ ದೊಡ್ಡ ಕಟೌಟುಗಳು ರಾರಾಜಿಸುತ್ತಿದ್ದವು. ಸಿನಿಮಾ ಮಂದಿರದ ಒಳಗೆ ನೂಕು ನುಗ್ಗಲು… ಕ್ಯೂನಲ್ಲಿ ನಿಂತು ಟಿಕೆಟು ತೆಗೆದುಕೊಳ್ಳುವಾಗ ದಬ್ಬಾಟಗಳಂತೂ ಮಾಮೂಲೇ, ಒಮ್ಮೊಮ್ಮೆ ಗಲಾಟೆಗಳೂ ಆಗಿ ಬಿಡುತ್ತಿದ್ದವು. ಆ ಹೊಡೆದಾಟ… ನಂತರ ಕ್ಯೂನಲ್ಲಿ ಟಿಕೆಟ್ ಪಡೆದು ಹೊರಬಂದಾಗ ಆ ಜನರ ಮುಖದಲ್ಲಿನ ವಿಜಯೋತ್ಸಾಹ… ಅವನ ಮನೆಯವರ ಬೆನ್ನು ತಟ್ಟುವಿಕೆ ಓಹ್… ಒಂದು ಯುದ್ಧದ ವಾತಾವರಣವೇ ಅಲ್ಲಿರ್ತಿತ್ತು. ಅದೆಲ್ಲಾ ಒಂದರ್ಧ ಗಂಟೆ ಮಾತ್ರ. ಆಮೇಲೆ ಪಿನ್‌ಡ್ರಾಪ್ ಸೈಲೆಂಟು. ಏರು ಧ್ವನಿಯ ಸಿನಿಮಾ ಡೈಲಾಗುಗಳು, ಡಿಶುಂಡಿಶುಂಗಳು ಮತ್ತು ಆ ಹಾಡು, “ನಗುತಾ… ನಗುತಾ… ಬಾಳು ನೀನು” ಅದೆಲ್ಲಿದ್ರೂ ಆ ಹಾಡಿಗೆ ಮುಂದಿನ ಪಡಸಾಲೆಗೆ ಬಂದು ಕಿವಿಯಾಗಿಬಿಡುತ್ತಿದ್ದೆ. ಅದು “ಪರಶುರಾಮ” ಸಿನಿಮಾವಾಗಿತ್ತು.
ನೂರು ದಿನಗಳ ಭರ್ಜರಿ ಪ್ರದರ್ಶನವನ್ನೂ ಕಂಡು ಬಿಟ್ಟಿತು. ಅದೇ ಸಮಯಕ್ಕೆ ರಾಜಕುಮಾರ್ ಕುಟುಂಬ ಮತ್ತೆ ಸಿನಿಮಾದ ಬೇರೆ ಬೇರೆಯವರೆಲ್ಲಾ ಸಂಭ್ರಮಾಚರಣೆಗಾಗಿ ದಾವಣಗೆರೆಯಲ್ಲಿ ಒಂದು ಲಾರಿ ಮೆರವಣಿಗೆ ಮಾಡಬೇಕು ಎಂದು ಬಂದು ಬಿಟ್ಟರು. ಅವತ್ತು ಪೊಲೀಸ್ ಬಂದೋಬಸ್ತಿಗೆ ಅಪ್ಪನೇ ಡ್ಯೂಟಿ ಆಫೀಸರ್. ನಾನು ಅಪ್ಪನಿಗೆ ಎಷ್ಟು ಮುದ್ದು ಅಂದ್ರೆ ಒಂದೊಂದ್ಸಾರಿ ಅವರ ಜೀಪಿನಲ್ಲಿ ನನ್ನನ್ನೂ ಕರ್ಕೊಂಡ್ ಹೋಗಿ ಬಿಡೋರು… ಆದರೆ ಅವತ್ತು ಗಲಾಟೆಯಾಗ್ಬಹುದು ಅಂತ ನನ್ನ ಕರ್ಕೊಂಡ್ ಹೋಗಿರ್ಲಿಲ್ಲ. ಡ್ರೈವರ್ ಸಿದ್ದೇಗೌಡ ಮಧ್ಯಾಹ್ನ ಊಟ ತೆಗೆದುಕೊಂಡು ಹೋಗಲು ಮನೆಗೆ ಬಂದಾಗ, ʼಅಪ್ಪ ಬೇಕುʼ ಅಂತ ನಾನು ಅಳ್ತಾ ಕೂತೆ. ಅವನು ಅಮ್ಮನಿಗೆ ನಾನೆಲ್ಲಾ ನೋಡ್ಕೋತ್ತಿನಿ ಸುಮ್ನಿರಕ್ಕ ಅಂತ ಎತ್ತುಕೊಂಡು ಹೋಗೇ ಬಿಟ್ಟಿದ್ದ.
ನನಗಿನ್ನೂ ಚೆನ್ನಾಗಿ ನೆನಪಿದೆ. ಅದೊಂದು ಜಾತ್ರೆಯಂತ್ತಿತ್ತು. ಲಾರಿಯಲ್ಲಿ ರಾಜಕುಮಾರ್ ಯಾರೂ ಅಂತಾನೇ ನಂಗೆ ಗುರುತು ಸಿಕ್ಕಿರ್ಲಿಲ್ಲ. ಆದರೆ, ಅವನು ಮಾತ್ರ ಗುರುತು ಸಿಕ್ಕಿ ಬಿಟ್ಟಿದ್ದ. ಅವನನ್ನು ಪೋಸ್ಟರ್‌ನಲ್ಲಿ ನೋಡಿ, ನೋಡಿ ಗುರುತು ಹಿಡಿದು ಬಿಟ್ಟಿದ್ದೆ. “ಲೋಹಿತ್” ಅಂತ ಚಪ್ಪಾಳೆ ಹಾಕಿ ಕೂಗಿದ್ದೆ. ಸಿದ್ದೇಗೌಡ ಮಾತಾಡಿಸ್ಬೇಕಾ ಅಂತ ಕೇಳಿ, ನಾನು ಹ್ಞಾಂ… ಹ್ಞೂಂ… ಅನ್ನುವುದರೊಳಗೆ ನನ್ನನ್ನೂ ಆ ಲಾರಿಯ ಮೇಲೆ ಏರಿಸಿಬಿಟ್ಟಿದ್ದ ಆ ಅಪ್ಪಟ ಕನ್ನಡ ಸಿನಿಮಾ ಅಭಿಮಾನಿ!
ಇದನ್ನೂ ಓದಿ: Puneeth Rajkumar: ಪುನೀತ್ ಅಭಿನಯದ ಟಾಪ್ 10 ಚಿತ್ರಗಳಿವು
ಲಾರಿಯಲ್ಲಿ ಜನರು ತುಂಬಿದ್ದರೂ, ನನ್ನನ್ನು ಹತ್ತಿಸಿದವರು ಪೊಲೀಸ್ ಎಂದು ಗಮನಿಸಿದವರೇ ಯಾರೂ ಏನೂ ಅನ್ನಲಿಲ್ಲ. ಎಲ್ಲರೂ ಜನರತ್ತ ಕೈ ಬೀಸುವುದರಲ್ಲೇ ಮಗ್ನರು. ನಾನೋ ತಬ್ಬಿಬ್ಬು…. ಕೆಳಗೆ ಕಣ್ಣಾಡಿಸಿದರೆ ನನ್ನ ಹತ್ತಿಸಿದ ಸಿದ್ದೇಗೌಡ ಮಾಯ! ಅಥವಾ ಅಲ್ಲೇ ಇದ್ರೂ ಆ ಜನಜಂಗುಳಿಯಲ್ಲಿ ನಂಗೆ ಕಾಣಿಸಿರಲಿಲ್ಲ. ಭಯವಾಗಿ ನನ್ನ ಗುಲಾಬಿ ಬಣ್ಣದ ಫ್ರಾಕು ಗಟ್ಟಿ ಹಿಡ್ಕೊಂಡು ಅಪ್ಪನಿಗಾಗಿ ಹುಡುಕ್ತಿದ್ದೆ. ಬಹಳ ಇಕ್ಕಟ್ಟು… ಜೊತೆಗೆ ಚಲಿಸುವ ಗಾಡಿ… ಜನರ ಕೂಗಾಟ… ಅಷ್ಟರಲ್ಲಿ ಹಿಂದಿಂದ ಯಾರದ್ದೋ ಕೈತಾಕಿ ಜೋಲಿ ತಪ್ಪಿ ಇನ್ನೇನು ಬೀಳಬೇಕು ಅವನು ನನ್ನ ಕೈ ಹಿಡಿದು ಎಳೆದುಕೊಂಡಿದ್ದ! “ಭಯ ಪಡಬೇಡ ನಾನಿದ್ದೇನೆ” ಎನ್ನುವ ಹಾಗೆ, ಅದೇ ನಿಷ್ಕಲ್ಮಶ ನಗುವಿನೊಂದಿಗೆ. ನಂಗೆ ಭಯವೇ ಮರೆತುಹೋಗಿ ನಿರುಮ್ಮಳಳಾಗಿ ನಿಂತು ಬಿಟ್ಟೆ. ಅಷ್ಟು ಸಾಲದೆಂಬಂತೆ ಅವನೇ ನನ್ನನ್ನು ಎತ್ತುಕೊಂಡು ನಿಂತ. ರಾಜಕುಮಾರ್ ಅವರು ಒಮ್ಮೆ ತಿರುಗಿ ʼಹಾ… ಹಾʼ ಅಂತ ನನ್ನ ಕೆನ್ನೆ ತಟ್ಟಿ ನಕ್ಕು ಸುಮ್ಮನಾಗಿದ್ದರು. ಅಲ್ಲಿಂದ ಗಡಿಯಾರದ ಕಂಬದ ಸರ್ಕಲ್ ಬರುವವರೆಗೂ ನನ್ನ ಎತ್ತುಕೊಂಡಿದ್ದು, ಕೊನೆಗೆ ಲಾರಿಯಲ್ಲಿ ಇಳಿಸಿದರೂ ನನ್ನ ಕೈ ಮಾತ್ರ ಗಟ್ಟಿಯಾಗಿ ಹಿಡಿದುಕೊಂಡೇ ನಿಂತಿದ್ದ. ಕೆಳಗಿಳಿಯುವಾಗ ನನ್ನ ಕೈಯಲ್ಲಿ ಬಾರ್ಬರೋನ್ ಬಿಸ್ಕಿಟ್ ಪ್ಯಾಕೆಟ್ ಕೊಟ್ಟು ಕೆನ್ನೆ ತಟ್ಟಿದ್ದ ಆ ಲೋಹಿತ್…. ಆ ಪುನೀತ್… ಆ ಅಪ್ಪು… ನನ್ನ ಮನಸ್ಸಲ್ಲಿ ಇನ್ನೂ ಅಚ್ಚಳಿಯದೆ ಕೂತಿದ್ದಾನೆ. ಇನ್ನೂ “ನಗುತಾ… ನಗುತಾ…ಬಾಳು ನೀನು ನೂರು ವರುಷಾ” ಅಂತ ತನ್ನ ಝೊಂಪೆ ಕೂದಲನ್ನು ಹಾರಿಸಿ, ಹಾರಿಸಿ ಕುಣಿಯುತ್ತಲೇ ಇದ್ದಾನೆ.
ಅದರ ನಂತರದಲ್ಲಿ ಲೋಹಿತ್ ಪುನೀತ್ ಆಗಿ ತೆರೆಯ ಮೇಲೆ ಬಂದ…. ಅಪ್ಪುವಾಗಿ ಎಲ್ಲರ ಮನಸೂರೆಗೊಂಡ. ತೆರೆಯ ಮೇಲಿನ ಅಪ್ಪು, ಅಂದು ನನ್ನ ಕೈಹಿಡಿದು ಲಾರಿಯಲ್ಲಿ ನಿಂತ್ತಿದ್ದ ಅಪ್ಪು, ನನಗೆ ಬೇರೆ-ಬೇರೆ ಅಂತ ಅನ್ನಿಸುತ್ತಲೇ ಇರಲಿಲ್ಲ. ತೆರೆಯ ಮೇಲೆ ಅವನೊಬ್ಬ ಅಪ್ಪಟ ಪ್ರೇಮಿ ಎನಿಸಿದರೆ ನನಗದು ಹೌದು ಅನ್ನಿಸ್ತಿತ್ತು. ಅವನೊಬ್ಬ ಕರುಣಾಮಯಿ ಅಂದ್ರೆ ಹೌದಲ್ಲ ಅನ್ನಿಸ್ತಿತ್ತು. ಹೀಗೆ ಅವನನ್ನು ನಿಜವಾದ ಹೀರೋ ಎಂದೇ ಸಿನಿಮಾದ ಆಚೆ ನಂಬಿದ್ದೆ… ಅವನ ಜೀವನ್ಮುಖಿ ಸಮಾಜ ಸೇವೆಯನ್ನ… ಮತ್ತದೇ ನಿಷ್ಕಲ್ಮಶ ನಗುವನ್ನ ನೋಡಿಕೊಂಡೇ ಬೆಳೆದವಳು ನಾನು. ಹೀಗೆ ಇದ್ದಕ್ಕಿದ್ದಂತೆ ಒಂದು ದಿನ ಇಲ್ಲ ಅಂದರೆ ಹೇಗೆ ನಂಬಲಿ? ಹೇಗೆ ಮರೆಯಲಿ ಆ ನಗುವನ್ನಾ… ಆ ಆಪ್ತತೆಯನ್ನಾ…. ನಿಗರ್ವಿ ಹೀರೋ… ನಿಜದ ದೇವ ಮಾನವನನ್ನ. ನೆನಪಿಸಿಕೊಂಡರೆ ಸಾಕು ಈಗಲೂ ಅಂಗೈಯಲ್ಲಿ ಅವನ ಬಿಸುಪಿದೆ. “ಜೊತೆಗಿರದ ಜೀವ ಎಂದಿಗೂ ಜೀವಂತ” ಅನ್ನೋ ಪರಮಾತ್ಮ ಸಿನಿಮಾದ ಈ ಡೈಲಾಗ್ ಅವನಿಗೆಂತಲೇ ಬರೆದಿದ್ದಾ?