Site icon Vistara News

Puneeth Rajkumar: ಬೆಂಗಳೂರಿನ ಪದ್ಮನಾಭನಗರದ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ

Puneeth Rajkumar

#image_title

ಬೆಂಗಳೂರು: ಕರ್ನಾಟಕ ರತ್ನ, ದಿವಂಗತ ನಟ ಪವರ್‌ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಸ್ಮರಣಾರ್ಥ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ರಿಂಗ್ ರಸ್ತೆಗೆ ಡಾ. ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ರಸ್ತೆಗೆ ಮಂಗಳವಾರ ಮರು ನಾಮಕರಣ ಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಅಪ್ಪು ಅಗಲಿದ ಬಳಿಕ ಹಲವಾರು ಕಾರ್ಯಕ್ರಮಗಳ ಮೂಲಕ ಅವರನ್ನು ಜೀವಂತವಾಗಿರಿಸಲಾಗಿದೆ. ಈಗ ನಗರದ ೧೨ ಕಿ.ಮಿ. ರಸ್ತೆಗೆ ಅಪ್ಪು ಹೆಸರನ್ನು ನಾಮಕರಣ ಮಾಡಲಾಗಿದೆ. ಈ ವೇಳೆ ಬಾನದಾರಿಯಲಿ ಪುನೀತ ನಮನ ಎಂಬ ಕಾರ್ಯಕ್ರಮ ಕೂಡ ಅಭಿಮಾನಿಗಳಿಗೆ ರಾಜರತ್ನನನ್ನು ನೆನಪಿಸಿತು.

ಇದೇ ವೇಳೆ ಪದ್ಮನಾಭನಗರದ ಗುರು ಶಂಕರ ಉದ್ಯಾನವನ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ, ನಟ ರಾಘವೇಂದ್ರ ರಾಜಕುಮಾರ್, ಅಭಿಷೇಕ್ ಅಂಬರೀಶ್ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.

ಅಪ್ಪು ಹೆಸರಿನಲ್ಲಿ ಅದ್ಭುತವಾದ ಸ್ಮಾರಕ ಮಾಡುತ್ತೇವೆ: ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ನಾನು ಅಪ್ಪುವನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ. ಅಪ್ಪು ಪ್ರತಿಭಾವಂತ ಯುವಕ, ಸದಾ ಹಸನ್ಮುಖಿಯಾಗಿದ್ದ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದ. ದೊಡ್ಡ ಸಾಧನೆ ಮಾಡಿ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ. ಅಪ್ಪು ತೀರಿ ಹೋದಾಗ ಜನ ಸಾಗರವೇ ಬಂತು. ಎಲ್ಲಾ ಜನರಲ್ಲಿ ಕಣ್ಣೀರು ನೋಡಿದಾಗ ಒಬ್ಬ ವ್ಯಕ್ತಿ ಎಷ್ಟು ಪ್ರೀತಿ ಗಳಿಸಬಹುದು ಎಂಬುವುದು ಅರ್ಥವಾಯಿತು. ಅದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಯಾವುದೇ ಭೇದ ಭಾವ ಇಲ್ಲದೇ ಪ್ರೀತಿ, ಆತ್ಮೀಯತೆ ತೋರಿಸುತ್ತಿದ್ದ ಅಪ್ಪು ಹೆಸರಿನಲ್ಲಿ ಅದ್ಭುತವಾದ ಸ್ಮಾರಕವನ್ನು ಕೂಡ ಮಾಡುತ್ತೇವೆ ಎಂದು ಹೇಳಿದರು.

ಆರ್ ಅಶೋಕ್ ಒಬ್ಬ ಛಲಗಾರ. ಏನಾದರೂ ಮನಸ್ಸು ಮಾಡಿದರೆ ಅದು ಈಡೆರುವವರೆಗೂ ವಿಶ್ರಮಿಸುವುದಿಲ್ಲ. ಅವರ ಶ್ರಮದಿಂದ ಪದ್ಮನಾಭನಗರ ಕ್ಷೇತ್ರ ಆಭಿವೃದ್ಧಿಯಾಗುತ್ತಿದೆ. ಅಶೋಕ್ ಹಿರಿಯ ಶಾಸಕ‌ರಾಗಿದ್ದಾರೆ. ಆರು ಬಾರಿ ಆಯ್ಕೆಯಾಗುವುದು ಸುಲಭದ ಮಾತಲ್ಲ. ಅವರು ಪದ್ಮನಾಭ ನಗರವನ್ನು ಬಹಳ ಪ್ರೀತಿಸುತ್ತಾರೆ. ಈ ತರಹದ ಜನ ಸಿಗುವುದು ಕಷ್ಟ. ಎರಡು ಪಾರ್ಕ್ ನಿರ್ಮಿಸಿರುವ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಳೆದ ವರ್ಷ ೬ ಸಾವಿರ ಕೋಟಿ ರೂ.ಗಳನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಟ್ಟಿದ್ದೆವು. ಪದ್ಮನಾಭನಗರ ಕ್ಷೇತ್ರಕ್ಕೆ ೩೦೦ ಕೋಟಿ ಅನುದಾನ ಕೊಟ್ಟಿದ್ದೇವೆ. ಎಲ್ಲ ಶಾಸಕರು‌, ಅವರವರ ಕ್ಷೇತ್ರದಲ್ಲಿ ಅದ್ಭುತವಾದ ಕೆಲಸ ಮಾಡಿದ್ದಾರೆ. ನಾವು ಬೆಂಗಳೂರಿನ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದೇವೆ ಎಂದರು.

ನನ್ಮ ಆತ್ಮೀಯ ಸ್ನೇಹಿತ ಅಂಬರೀಷ್ ಜತೆ ಒಂದು ಕಾಲದಲ್ಲಿ ವಾರ ಪೂರ್ತಿ ಇರುತ್ತಿದ್ದೆ. ಆ ಕೊಡುಗೈ ದಾನಿ ಅಪಾರ ಅಭಿಮಾನಿಗಳು ಹಾಗೂ ಸ್ನೇಹಿತರನ್ನು ಗಳಿಸಿದ್ದಾನೆ. ನನ್ನ ಸ್ನೇಹಿತನ ಸ್ಮಾರಕ ಮಾಡುವ ಸೌಭಾಗ್ಯ ಕೂಡ ನನ್ನದಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಅದು ಲೋಕಾರ್ಪಣೆಯಾಗಲಿದೆ. ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನವಿಗಳು ಬರುತ್ತಿವೆ. ಆ ಕೆಲಸವನ್ನೂ ಆದಷ್ಟು ಬೇಗ ಮಾಡುತ್ತೇವೆ ಎಂದರು.

ನಾವು ಅಪ್ಪು ಆಗೋಣ, ಎರಡು ದಿನವಾದರೂ ಅಪ್ಪು ಆಗಿ ಬದುಕೋಣ.

ನಟ ರಾಘವೇಂದ್ರ ರಾಜಕುಮಾರ್‌ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಡು ಸಾವು ಎರಡೂ ಬರುತ್ತದೆ. ಆದರೆ, ಬದುಕಿದ್ದಾಗ ಹೇಗಿರುತ್ತಾರೋ ಎಂಬುವುದು ಬಹಳ ಮುಖ್ಯ. ಅಪ್ಪಾಜಿ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಹಾಗೆಯೇ ಅಪ್ಪು ಕೂಡ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಭೂಮಿಗೆ ಏನೋ ಹೇಳಬೇಕು ಎಂದು ಬಂದಿದ್ದ. ಈಗ ಜವಾಬ್ದಾರಿ ನಮಗೆ ಬಿಟ್ಟು ಹೋಗಿದ್ದಾನೆ. ನಾನು ನನ್ನ ಸಿನಿಮಾ‌ ನೋಡಿ, ನನ್ನ ಮಗನನ್ನು ಬೆಳೆಸಿ ಎಂದು ಹೇಳುವುದಿಲ್ಲ. ಅಪ್ಪು ಪವರ್ ಇಲ್ಲೇ ಬಿಟ್ಟು ಸ್ಟಾರ್ ಆಗಿ ಮೇಲೆ ಹೋಗಿದ್ದಾನೆ. ನನ್ನ ಜೀವನದಲ್ಲಿ ಅಪ್ಪು ಆಗಿ ಇನ್ನೊಬ್ಬರಿಗಾಗಿ ಬದುಕಬೇಕು ಎಂದರು.

ಇದನ್ನೂ ಓದಿ | Actress Sridevi : ಚೀನಾದ 6000 ತೆರೆಗಳಲ್ಲಿ ಬಿಡುಗಡೆಯಾಗಲಿದೆ ಶ್ರೀದೇವಿಯ ʼಇಂಗ್ಲಿಷ್‌ ವಿಂಗ್ಲಿಷ್‌ʼ

ಅಪ್ಪು ಏನೋ ಮಾಡಬೇಕು ಎಂದು ಬಂದ, ಆದರೆ ಆಯಸ್ಸು ಸಾಕಾಗಿಲ್ಲ. ನಾವು ಅಪ್ಪು ಆಗೋಣ, ಎರಡು ದಿನವಾದರೂ ಅಪ್ಪು ಆಗಿ ಬದುಕೋಣ. ಅಕ್ಟೋಬರ್ ೨೯ ಅಪ್ಪು ಸತ್ತ ದಿನ ಅಲ್ಲ, ಅವನು ಹುಟ್ಟಿದ್ದ ದಿನ. ಅವತ್ತು ಒಂದು ಶಕ್ತಿ ಹುಟ್ಟಿದ ದಿನ. ಈ ರಾಜ್ಯ ಸರ್ಕಾರದಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಿದೆ. ನನ್ನ ತಂದೆಯ ಸ್ಮಾರಕ ನಿರ್ಮಾಣ ಕೂಡ ಆಗುತ್ತಿದೆ. ಈಗ ರಸ್ತೆಗೆ ಅಪ್ಪು ಅವರ ಕೂಡ ಹೆಸರು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನಾವು ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗ ಅಶೋಕ್ ಅವರು ಈ ರಸ್ತೆಗೆ ಅಪ್ಪು ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಹೇಳುತ್ತಿದ್ದರು. ಅಪ್ಪು ಕೇವಲ ನಟ ಅಷ್ಟೇ ಅಲ್ಲ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಮಹಾ ಪುರುಷ. ಅವರು ನಮ್ಮನ್ನು ಅಗಲಿದಾಗ ನಮ್ಮ ಮನೆಯವರೇ ದೂರವಾದರೂ ಎನಿಸಿತು. ಆದರೆ, ಅವರು ಶಾಶ್ವತವಾಗಿ ನಮ್ಮ ಜತೆ ಇರುತ್ತಾರೆ ಎಂದರು.

Exit mobile version