Site icon Vistara News

Puneeth Rajkumar: ನಾಯಂಡಳ್ಳಿ-ಬನ್ನೇರುಘಟ್ಟ ರಸ್ತೆಗೆ ಪುನೀತ್‌ ಹೆಸರು; ಫೆ.7ಕ್ಕೆ ನಾಮಕರಣ: ಇದು ಅತಿ ಉದ್ದದ ರಸ್ತೆ!

Puneeth

ಬೆಂಗಳೂರು: ನಗರದ ನಾಯಂಡಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆವರೆಗಿನ ೧೨ ಕಿ.ಮೀ. ಉದ್ದದ ವರ್ತುಲ ರಸ್ತೆಗೆ ಮಂಗಳವಾರ (ಫೆ. ೭) ಕರ್ನಾಟಕ ರತ್ನ ಪುನೀತ್ ರಾಜಕುಮಾರ್ (Puneeth Rajkumar) ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದ್ದು, ಪದ್ಮನಾಭನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು ಉದ್ಘಾಟಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು.‌

ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರಿನ ಇತಿಹಾಸದಲ್ಲಿಯೇ ಇಷ್ಟು ಉದ್ದದ ರಸ್ತೆಗೆ ನಟರೊಬ್ಬರ ಹೆಸರನ್ನು ನಾಮಕರಣ ಮಾಡುತ್ತಿರುವುದು ಇದೇ ಮೊದಲಾಗಿದೆ. ಈ ರಸ್ತೆಗೆ ಪುನೀತ್‌ ಹೆಸರನ್ನು ನಾಮಕರಣ ಮಾಡಲಿರುವ ಸಿಎಂ ಬೊಮ್ಮಾಯಿ ಅವರು ಅಲ್ಲಿರುವ ಪಾರ್ಕ್‌ ಅನ್ನು ಸಹ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಮಂಗಳವಾರದ ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅವರ ಕುಟುಂಬದವರು ಉಪಸ್ಥಿತರಿರಲಿದ್ದಾರೆ. ಚಿತ್ರರಂಗದ ಹಿನ್ನಲೆ ಗಾಯಕರು ಬರಲಿದ್ದಾರೆ. ವಿಜಯ್ ಪ್ರಕಾಶ್, ರಘು ದೀಕ್ಷಿತ್, ಸಾಧು ಕೋಕಿಲ ಸೇರಿದಂತೆ 17 ಪ್ರತಿಷ್ಠಿತ ಗಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್:‌ ಈ ಬಾರಿಯೂ ಆಗಲಿದೆ ಉತ್ತಮ ಮಳೆ-ಬೆಳೆ ಎಂದು ನುಡಿದ ಕಾರಣಿಕ

ಪುನೀತ್ ರಾಜಕುಮಾರ್ ಇಂದು ನಮ್ಮ ನಡುವೆ ಇಲ್ಲ. ಅಪ್ಪು ಅವರ ಭಾವಚಿತ್ರ ಫೋಟೊಗಳು ಇನ್ನೂ ರಸ್ತೆಗಳಲ್ಲಿ ಕಂಡುಬರುತ್ತವೆ. ಅಷ್ಟರಮಟ್ಟಿಗೆ ಜನ ಹಾಗೂ ಅವರ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಲೇ ಇದ್ದಾರೆ. ಪುನೀತ್‌ ಅವರ ಸಾಧನೆ ಗುರುತಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿತರಣೆ ಮಾಡಲಾಗಿತ್ತು. ಅಂದು ನಮಗೆ ಆಶೀರ್ವಾದ ರೂಪದಲ್ಲಿ ಮಳೆ ಸಹ ಬಂದಿತ್ತು ಎಂದು ಅಶೋಕ್‌ ಸ್ಮರಿಸಿದರು.

ಹಿಂದಿ ಚಿತ್ರರಂಗದವರು ಗುಟ್ಕಾ ಜಾಹೀರಾತಿಗೆ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಆದರೆ, ಪುನೀತ್ ಅವರು ಹಾಲಿನ ಜಾಹೀರಾತಿಗೆ ಒಂದು ರೂಪಾಯಿಯನ್ನೂ ಪಡೆಯದೇ ರಾಯಭಾರಿ ಆಗಿದ್ದರು. ಅವರು ಅಷ್ಟು ಸರಳ ವ್ಯಕ್ತಿಯಾಗಿದ್ದು, ಎಲ್ಲರಿಗೂ ಮಾದರಿಯಾಗಿ ಬದುಕಿ ತೋರಿಸಿದರು.

ರಾಜಕುಮಾರ್‌ ಸಂಘದ ಅಧ್ಯಕ್ಷನಾಗಿದ್ದೆ- ಅಶೋಕ್

ನಾನು ಚಿಕ್ಕವನಿದ್ದಾಗ ‌ವರನಟ ಡಾ. ರಾಜಕುಮಾರ್ ಸಂಘದ ಅಧ್ಯಕ್ಷನಾಗಿದ್ದೆ. ಅವರು ನಮ್ಮ ಮನೆಗೂ ಸಹ ಬಂದಿದ್ದರು. ನಾನು ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಆಪರೇಷನ್ ಡೈಮಂಡ್ ರಾಕೆಟ್ ಫಸ್ಟ್ ಡೇ ಫಸ್ಟ್ ಶೋ ನೋಡಿದ್ದೆ. ಪಾರ್ವತಮ್ಮ ರಾಜಕುಮಾರ್ ಅವರು ಭಾಷಣ ಮಾಡುವ ಸಂದರ್ಭದಲ್ಲಿ ನನಗೆ ಯಾವುದಾದರೊಂದು ಪಾತ್ರವನ್ನು ಕೊಟ್ಟು ನಟಿಸುವಂತೆ ಮಾಡುತ್ತೇನೆ ಎಂದು ಹೇಳಿದ್ದರು. ಆಗ ರಾಜಕಾರಣ ಇಲ್ಲ ಸಿನಿಮಾ ಯಾವುದಾದರೂ ಒಂದರಲ್ಲಿ ಮಾಡಬೇಕು. ಆದರೆ, ನನಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದೆ ಎಂದು ಅಶೋಕ್‌ ಹಳೇ ನೆನಪುಗಳನ್ನು ಹಂಚಿಕೊಂಡರು.

ಇದನ್ನೂ ಓದಿ: PM Modi in Karnataka : ರಾಜ್ಯದ ವರ್ಗಾವಣೆ ದಂಧೆ ಬಗ್ಗೆ ಮಾತಾಡಲ್ಲ; ಇದು ಮೋದಿ ಗ್ಯಾರಂಟಿ ಎಂದು ಗೇಲಿ ಮಾಡಿದ ಕಾಂಗ್ರೆಸ್‌

ಕೆಂಪೇಗೌಡ ಸಿನಿಮಾದಲ್ಲಿ ನಟಿಸಬೇಕಿತ್ತು

ಸ್ಯಾಂಡಲ್‌ವುಡ್‌ ನಾಯಕ ನಟ ಸುದೀಪ್ ಅವರು ಕೆಂಪೇಗೌಡ ಸಿನಿಮಾದಲ್ಲಿ ನನಗೆ ನಟಿಸಲು ಹೇಳಿದ್ದರು. ಸುದೀಪ್ ಹೇಳಿದರು ಎಂಬ ಕಾರಣಕ್ಕೆ ನಟಿಸಲು ನಾನೂ ಸಹ ಒಪ್ಪಿಕೊಂಡಿದ್ದೆ. ನಟಿಸಲು ಡ್ರೆಸ್ ಎಲ್ಲ ಹಾಕಿ ರೆಡಿ ಆಗಿದ್ದೆ. ಆಗ ಯಡಿಯೂರಪ್ಪ ಅವರು ಕರೆ ಮಾಡಿ, “ಹೋಂ ಮಿನಿಸ್ಟರ್ ಆಗುತ್ತಿದ್ದೀಯಾ, ನೀನು ಎಲ್ಲಿದ್ದೀಯಾ” ಎಂದು ಕೇಳಿದ್ದರು. ಅದೇ ಸಮಯದಲ್ಲಿ ಸುದೀಪ್ ಸಹ ಕರೆ ಮಾಡಿದ್ದರು. ಕೊನೆಗೆ ನಟಿಸಲು ಆಗಲಿಲ್ಲ ಎಂದು ಅಶೋಕ್‌ ಹೇಳಿಕೊಂಡರು.

ರಾಕ್‌ಲೈನ್ ವೆಂಕಟೇಶ್, ಅಶೋಕ್ ಕಶ್ಯಪ್, ಉಮೇಶ್ ಬಣಕಾರ್‌, ಫಿಲ್ಮ್‌ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್ ಉಪಸ್ಥಿತರಿದ್ದರು.

Exit mobile version