ಬೆಂಗಳೂರು: ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ‘ಗಂಧದಗುಡಿ’ ಪ್ರಿ ರಿಲೀಸ್ ಇವೆಂಟ್ ‘ಪುನೀತ ಪರ್ವ’ಕ್ಕೆ ಅರಮನೆ ಮೈದಾನ ಸಿದ್ಧಗೊಂಡಿರುವ ಬೆನ್ನಲ್ಲೇ ನವೆಂಬರ್ ೧ರಂದು ಪುನೀತ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ ಪ್ರಶಸ್ತಿ’ ಪ್ರದಾನ ಮಾಡಲು ರಾಜ್ಯ ಸರ್ಕಾರ ಕೂಡ ಸಿದ್ಧತೆ ನಡೆಸುತ್ತಿದೆ. “ಕರ್ನಾಟಕ ರಾಜ್ಯೋತ್ಸವ ದಿನದಂದು ಸಂಜೆ ೪ ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯೋತ್ಸವ ದಿನದಂದು ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಈ ಹಿಂದೆಯೇ ಬೊಮ್ಮಾಯಿ ತಿಳಿಸಿದ್ದರು. ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಧಾನಸೌಧದ ಮುಖ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗುತ್ತದೆ ಎನ್ನುವುದನ್ನು ʼವಿಸ್ತಾರ ನ್ಯೂಸ್ʼ ಮೊದಲಿಗೆ ಸೆಪ್ಟೆಂಬರ್ 9ರಂದು ವರದಿ ಮಾಡಿತ್ತು. (ವಿಧಾನಸೌಧದಲ್ಲಿ ʼಅಪ್ಪುʼಗೆ ಕರ್ನಾಟಕ ರತ್ನ ಪ್ರದಾನ: ಮೊದಲ ಬಾರಿ ಕಲಾಕ್ಷೇತ್ರದಿಂದ ಹೊರಗೆ ರಾಜ್ಯೋತ್ಸವ.)
ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, “ಪುನೀತ್ ರಾಜಕುಮಾರ್ ಅವರು ದೊಡ್ಡ ಸಾಧನೆ ಮಾಡುವ ಮೂಲಕ ಎಲ್ಲರ ಮನದಲ್ಲೂ ಚಿರಸ್ಥಾಯಿಯಾಗಿದ್ದಾರೆ. ಅವರು ಯಾವಾಗಲೂ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಅವರ ಪ್ರೇರಣೆಯು ಸದಾಕಾಲ ಇರಲಿ ಎಂಬ ದೃಷ್ಟಿಯಿಂದ ನ.೧ರಂದು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿಕಾಸಸೌಧದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಿದ್ಧತೆ ನಡೆಯುತ್ತಿದೆ” ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
“ಪೂರ್ವ ಸಿದ್ಧತೆ ಸಭೆಯಲ್ಲಿ ಪುನೀತ್ ರಾಜಕುಮಾರ್ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. 2009ರ ನಂತರ ಯಾರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿರಲಿಲ್ಲ. ಈಗ 8 ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲಾಗಿದೆ. ಅದರಲ್ಲೂ, ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ನಿಜವಾಗಿಯೂ ಕರ್ನಾಟಕ ರತ್ನ. ಕಾರ್ಯಕ್ರಮದಲ್ಲಿ ಸಾಹಿತಿಗಳು, ವಿಶೇಷ ಅತಿಥಿಗಳು, ನಟರು, ಸಚಿವರು, ಶಾಸಕರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಬೆಂಗಳೂರಿನ ವಿವಿಧೆಡೆ ಗೌರವ
ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕೆಂಬ ಅಭಿಮಾನಿಗಳ ಬೇಡಿಕೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ನವೆಂಬರ್ 1 ರ ನಂತರ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಒಟ್ಟು 3 ಕಾರ್ಯಕ್ರಮಗಳನ್ನು ಸುಮಾರು10 ದಿನಗಳ ಕಾಲ ಆಯೋಜಿಸಲಾಗುವುದು ಎಂದು ತಿಳಿಸಿದರು.
ರಜನಿಕಾಂತ್‌ಗೆ ಆಹ್ವಾನ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿ ಹಲವು ಪರಭಾಷಾ ನಟರನ್ನು ಆಹ್ವಾನಿಸುವ ಕುರಿತು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಹಾಗೆಯೇ, ನಟಿಯರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಪೈಕಿ ಒಬ್ಬರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದೆ. ಆದರೆ, ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
ಇದನ್ನೂ ಓದಿ | Gandhada Gudi | ‘ಪುನೀತ್ ಪರ್ವ’ಕ್ಕೆ ಬಾಲಯ್ಯ, ಸೂರ್ಯ, ಕಮಲ್ ಹಾಸನ್ ಆಗಮನ!