ಬೆಂಗಳೂರು: ನಟ ಪುನೀತ್ ರಾಜಕುಮಾರ್ ನಿಧನರಾಗಿ ಒಂದು ವರ್ಷ ಕಳೆದರೂ ಅವರ ಹೆಸರು ಮಾತ್ರ ಅಭಿಮಾನಿಗಳ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಇದೀಗ ಅಪ್ಪು ಕೀರ್ತಿಯನ್ನು(Appu Namana) ಆಗಸದ ಎತ್ತರಕ್ಕೆ ಹಾರಿಸಲು ವಿದ್ಯಾರ್ಥಿಗಳ ತಂಡ ಸಿದ್ಧವಾಗಿದೆ. ಮಿನುಗುತಾರೆಯಾಗಿ ಮಿಂಚಿದ ಅಪ್ಪು, ಬಾಹ್ಯಾಕಾಶದಲ್ಲೂ ಸ್ಥಾನ ಪಡೆಯೋ ಕಾಲ ಹತ್ತಿರವಾಗುತ್ತಿದ್ದು, ಸರ್ಕಾರಿ ಶಾಲಾ ಮಕ್ಕಳಿಂದ ತಯಾರಾಗಿರುವ ಪುನೀತ್ ಸ್ಯಾಟಲೈಟ್ ಗಗನಕ್ಕೆ ಹಾರಲು ಸಜ್ಜಾಗಿದೆ.
ಬೆಂಗಳೂರಿನ ಸರ್ಕಾರಿ ಶಾಲೆಗಳ ಸಮಾರು 200 ವಿದ್ಯಾರ್ಥಿಗಳು ತಯಾರಿಸಿದ ಸ್ಯಾಟಲೈಟ್ಗೆ ಪುನೀತ್ ಎಂದು ಹೆಸರಿಡಲಾಗಿದೆ. ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಅಪ್ಪು ಪುಣ್ಯಸ್ಮರಣೆ ದಿನದಂದು(ಅ.೨೯) ಸಿಎಂ ಬಸವರಾಜ ಬೊಮ್ಮಾಯಿ ಅವರು, ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಅನ್ನು ಉದ್ಘಾಟಿಸಿದ್ದರು.
ಉಪಗ್ರಹವನ್ನು ಡಿಸೆಂಬರ್ ಅಂತ್ಯಕ್ಕೆ ಅಂತರಿಕ್ಷಕ್ಕೆ ಹಾರಿಸಲು ಇಸ್ರೋ ಸಹಕಾರ ನೀಡುತ್ತಿದೆ. ಈ ಉಪಗ್ರಹ ಶಿಕ್ಷಣ, ಅಂತರ್ಜಾಲ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಅಂತರಿಕ್ಷಕ್ಕೆ ಹಾರಲು ಸಜ್ಜಾಗಿರುವ ಈ ಉಪಗ್ರಹದ ತಯಾರಿಕೆ ಬಳಿಕ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ನೊಳಗೆ ಆಂಧ್ರದ ಶ್ರೀಹರಿಕೋಟದಿಂದ ಪುನೀತ್ ಸ್ಯಾಟಲೈಟ್ ಅಂತರಿಕ್ಷಕ್ಕೆ ಹಾರಲಿದೆ.
ಹೇಗಿದೆ ಅಪ್ಪು ಸ್ಯಾಟ್‌ಲೈಟ್?
2022ರ ಜುಲೈ 11ರಂದು ಉಪಗ್ರಹ ತಯಾರಿಗೆ ಮುಂದಾದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪುನೀತ್ ಉಪಗ್ರಹವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುನೀತ್ ಉಪಗ್ರಹ 10 ಸೆಂ.ಮೀ. ಉದ್ದ, 10 ಸೆಂ.ಮೀ. ಅಗಲ ಹಾಗೂ 10 10 ಸೆಂ.ಮೀ. ಎತ್ತರವಾಗಿದೆ ವಿದ್ಯಾರ್ಥಿಗಳಿಂದ ಸಿದ್ಧವಾದ ಈ ನ್ಯಾನೋ ಸ್ಯಾಟಲೈಟ್, 2.5 ಕೆ.ಜಿ ತೂಕವಿದ್ದು, ಇದರ ನಿರ್ಮಾಣಕ್ಕೆ 1.90 ಕೋಟಿ ರೂಪಾಯಿ ವೆಚ್ಚ ತಗುಲಿದೆ.
ನ.15ರಿಂದ ಡಿ.31ರೊಳಗೆ ಉಡಾವಣೆ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎ ಕೆಜಿಎಸ್3 (A KGS3) ಎಂಬ ಉಪಗ್ರಹ ನಿರ್ಮಿಸಿದ್ದರು. ನಟ ಪುನೀತ್ ರಾಜಕುಮಾರ್ ಅವರು ಚಲನಚಿತ್ರ ಹಾಗೂ ಸಮಾಜ ಸೇವಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಲು ರಾಜ್ಯ ಸರ್ಕಾರ, ವಿದ್ಯಾರ್ಥಿ ಉಪಗ್ರಹಕ್ಕೆ ʼಪುನೀತ್ ರಾಜಕುಮಾರ್ʼ ಹೆಸರನ್ನು ಮರುನಾಮಕರಣ ಮಾಡಿದೆ. ಈ ಉಪಗ್ರಹವನ್ನು ನ.15ರಿಂದ ಡಿ.31ರೊಳಗೆ ಆಂಧ್ರಪ್ರದೇಶದ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ರಾಜ್ಯದ ಸುಮಾರು 1000 ವಿದ್ಯಾರ್ಥಿಗಳಿಗೆ ಉಪಗ್ರಹ ಉಡಾವಣೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ | Puneeth Rajkumar | ಮಲ್ಲೇಶ್ವರದಲ್ಲಿ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ