ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗು ಪಡೆದುಕೊಂಡಿದೆ. ಚುನಾವಣೆಗೆ ಇನ್ನು ಐದೇ ದಿನ ಬಾಕಿ ಇದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಇದೇ ವೇಳೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಅಬ್ಬರದ ಪ್ರಚಾರ ನಡೆಯುತ್ತಿದೆ. ಈಗ ಅವರಿಗೆ ಕಾಂಗ್ರೆಸ್ ನಾಯಕಿ ಭವ್ಯಾ ನರಸಿಂಹಮೂರ್ತಿ ಸಾಥ್ ನೀಡಿದ್ದು, ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.
ರಾಜಾಜಿನಗರ ಕ್ಷೇತ್ರದಲ್ಲಿ ಈ ಬಾರಿ ಶತಾಯಗತಾಯ ಗೆಲ್ಲುವ ಪಣತೊಟ್ಟಿರುವ ಪುಟ್ಟಣ್ಣ, ಈ ನಿಟ್ಟಿನಲ್ಲಿ ಸರ್ವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅಲ್ಲದೆ, ಪ್ರಚಾರದ ವೇಳೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬಾರಿ ಅವಕಾಶ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.
ಶುಕ್ರವಾರ ದಯಾನಂದ ನಗರ ವಾರ್ಡ್‌ನಲ್ಲಿ ನಡೆದ ಕರುಮಾರಿಯಮ್ಮನ ಜಾತ್ರೆ ಮಹೋತ್ಸವದಲ್ಲಿ ಪುಟ್ಟಣ್ಣ ಭಾಗಿಯಾಗಿದ್ದರು. ಈ ವೇಳೆ ದೇವಿಯ ದರ್ಶನ ಪಡೆದ ಪುಟ್ಟಣ್ಣ ಅವರು ವಾರ್ಡ್‌ನ ಮತದಾರರ ಬಳಿ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು, ಸ್ಥಳೀಯರು ಪುಟ್ಟಣ್ಣನಿಗೆ ಸಾಥ್ ನೀಡಿದರು.
ಪ್ರಚಾರದ ವೇಳೆ ಅಭಿಮಾನಿಗಳು ಸಹ ಪುಟ್ಟಣ್ಣ ಜತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ವಾರ್ಡ್‌ನ ನಾಗರಿಕರು ಅಲ್ಲಿಯ ಕುಂದುಕೊರತೆಗಳನ್ನು ಹಂಚಿಕೊಂಡರು. ಸಮಸ್ಯೆಗಳನ್ನು ಕೇಳಿದ ಬಳಿಕ ಮಾತನಾಡಿದ ಪುಟ್ಟಣ್ಣ, ನಿಮ್ಮೊಂದಿಗೆ ನಾನಿದ್ದೇನೆ, ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಸ್ಟ್ರೆಚರ್ ಮೇಲೆಯೇ ಬಂದು ಪ್ರಚಾರ ಮಾಡಿದ ಬಾಬುರಾವ್ ಚಿಂಚನಸೂರ್; ಸೆರಗೊಡ್ಡಿ ಮತ ಬೇಡಿದ ಪತ್ನಿ!
ಭವ್ಯಾ ನರಸಿಂಹಮೂರ್ತಿ ಬೆಂಬಲ
ಈ ಹಿಂದೆ ರಾಜಾಜಿನಗರ ಕ್ಷೇತ್ರದಿಂದ ಭವ್ಯಾ ನರಸಿಂಹಮೂರ್ತಿ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪುಟ್ಟಣ್ಣ ಅವರಿಗೆ ವರಿಷ್ಠರು ಟಿಕೆಟ್ ನೀಡಿದ್ದರು. ಈಗ ಪುಟ್ಟಣ್ಣ ಅವರ ದೂರದೃಷ್ಟಿ, ನಡೆ-ನುಡಿ ಕೆಲಸಗಳನ್ನು ಮೆಚ್ಚಿದ ಭವ್ಯ ನರಸಿಂಹಮೂರ್ತಿ ಅವರು ಬೆಂಬಲಕ್ಕೆ ನಿಂತಿದ್ದಾರೆ.