Site icon Vistara News

Puttige Sri: ಉಡುಪಿ ಶ್ರೀಕಷ್ಣನಿಗೆ ಸ್ವರ್ಣ ರಥ ಸಮರ್ಪಣೆ; ಸುಗುಣೇಂದ್ರ ತೀರ್ಥ ಶ್ರೀಪಾದರ ನಿರ್ಧಾರ

Puttige Shree Interview with Hariprakash Konemane

ಬೆಂಗಳೂರು: ಚತುರ್ಥ ಪರ್ಯಾಯದ ಅಂಗವಾಗಿ ಶ್ರೀಮಠ ಉಡುಪಿಯಲ್ಲಿ ಕೋಟಿ ಗೀತ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸಲುವಾಗಿ ಭಗವಂತ ಶ್ರೀಕಷ್ಣನಿಗೆ (Lord Sri Krishna) ಸ್ವರ್ಣ ರಥವನ್ನು (Golden Chariot) ಒಪ್ಪಿಸುವ ತೀರ್ಮಾನವನ್ನು ನಾವು ಮಾಡಿದ್ದೇವೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು (Shri Sugunendra Theertha Swamiji) ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ (Hariprakash Koonemane) ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನದಲ್ಲಿ ಹೇಳಿದರು. ಅಲ್ಲದೆ, ಕೋಟಿ ಗೀತ ಲೇಖನ ಯಜ್ಞದ ಉದ್ದೇಶವನ್ನು ಪುತ್ತಿಗೆ ಶ್ರೀಗಳು (Puttige Sri) ವಿವರಿಸಿದರು.

“ಪಾರ್ಥಸಾರಥಿ ಸುವರ್ಣ ರಥ” ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ. ಭಗವಾನ್‌ ಶ್ರೀ ಕೃಷ್ಣನು ಭಗವದ್ಗೀತೆ ಉಪದೇಶವನ್ನು ಮಾಡುವಾಗ ಯಾವ ಮಾದರಿಯಲ್ಲಿ ಇದ್ದನೋ ಅದೇ ಮಾದರಿಯ ಚಿನ್ನದ ರಥವನ್ನು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಲಾಗುವುದು. ಆ ಮೂಲಕ ಕೋಟಿ ಗೀತ ಯಜ್ಞದ ಒಂದು ಸ್ಮರಣಿಕೆಯಾಗಿ ಅದು ಇರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಸ್ವಾಮೀಜಿಯಾಗಿ 50ನೇ ವರ್ಷಕ್ಕೆ ಪದಾರ್ಪಣೆ

ನಮ್ಮ ಎರಡನೇ ಪರ್ಯಾಯದಲ್ಲಿ ಗೀತಾ ಮಂದಿರವನ್ನು ನಿರ್ಮಾಣ ಮಾಡಿದ್ದೆವು. ಈ ಗೀತಾ ಮಂದಿರದಲ್ಲಿ ಭಗವದ್ಗೀತೆಯನ್ನು ಸಂಪೂರ್ಣವಾಗಿ ಕಲ್ಲಿನಲ್ಲೇ ಕೆತ್ತಿಸಲಾಗಿತ್ತು. ಹಾಗೂ ಚಿತ್ರದ ಮೂಲಕ ಕಟ್ಟಿಕೊಡಲಾಗಿತ್ತು. ಈಗ ನಾಲ್ಕನೇ ಪರ್ಯಾಯದ ಸಂದರ್ಭ ಹಾಗೂ ನಾವು ಸ್ವಾಮಿಗಳಾಗಿ 50 ವರ್ಷವಾಗುತ್ತಿರುವುದರ ಕೃತಜ್ಞತೆಗಾಗಿಯೂ ಈ ಬಾರಿ ಸ್ವರ್ಣ ರಥವನ್ನು ನೀಡುತ್ತಿದ್ದೇವೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

Puthige Sri Interview with Hariprakash Konemane

ಜಗತ್ತಿಗೆ ಬೇಕು ಆಧ್ಯಾತ್ಮಿಕ ಜಾಗೃತಿ

ಚತುರ್ಥ ಪರ್ಯಾಯದ ಅಂಗವಾಗಿ ವಿಶ್ವಾದ್ಯಂತ ಧಾರ್ಮಿಕ, ಆಧ್ಯಾತ್ಮಿಕವಾದ ಜಾಗೃತಿ ಆಗಬೇಕು ಎಂಬುದು ಮೂಲ ಉದ್ದೇಶವಾಗಿದೆ. ಪರ್ಯಾಯವೆಂದರೆ ಉಡುಪಿ ಮಠದಲ್ಲಿ ಶ್ರೀಕೃಷ್ಣನಿಗೆ ಮಾತ್ರ ಸೀಮಿತವಾಗಿರಬಾರದು. ಜಗತ್ತಿನಾದ್ಯಂತ ವಿಸ್ತರಣೆಯಾಗಬೇಕು. ಈ ನಿಟ್ಟಿನಲ್ಲಿ ನಾವು ಕೋಟಿ ಗೀತ ಲೇಖನ ಯಜ್ಞ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅಷ್ಟೋತ್ತರ ಭವನ ನಿರ್ಮಾಣ ಗುರಿ

ಶ್ರೀಮಠಕ್ಕೆ ಬರುವ ಯಾತ್ರಾರ್ಥಿಗಳಿಗೆ ವಸತಿ ಸೌಲಭ್ಯ ಬಹಳ ಕಡಿಮೆ ಇದೆ. ಅದಕ್ಕಾಗಿ 108 ಕೊಠಡಿಗಳುಳ್ಳ ವಸತಿ ಗೃಹವನ್ನು (ಅಷ್ಟೋತ್ತರ ಭವನ) ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಉಡುಪಿ ಕೃಷ್ಣ ಮಠದ ಪ್ರವೇಶ ದ್ವಾರವಾಗಿರುವ ಪೂರ್ವ ದ್ವಾರದಲ್ಲಿ ಪ್ರವೇಶ ಗೋಪುರವನ್ನು ನಿರ್ಮಾಣ ಮಾಡಬೇಕು. ಜತೆಗೆ ಮದ್ವಾಚಾರ್ಯರು ಕೃಷ್ಣನನ್ನು ಎತ್ತಿಕೊಂಡು ಬಂದಿರುವ ಜಾಗ ಅದಾಗಿದೆ. ಹೀಗಾಗಿ ಮದ್ವಾಚಾರ್ಯರು ಕೃಷ್ಣನನ್ನು ಎತ್ತಿಕೊಂಡು ಬಂದ ಪ್ರತಿಮೆಯನ್ನು ಅಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಗೀತೆಯ ಪ್ರಚಾರ ಎಲ್ಲೆಡೆ ಆಗಬೇಕು

ಕೃಷ್ಣನ ಪೂಜೆ ಎಂದರೆ ಬರೀ ಧೂಪ, ನೈವೇದ್ಯ, ಪೂಜೆ ಸೇರಿದಂತೆ ಇಷ್ಟಕ್ಕೆ ಸೀಮಿತವಾಗದೆ, ಆಂತರಿಕವಾದಂತಹ ಬದಲಾವಣೆ ಆಗಬೇಕು. ಜಗತ್ತಿನಾದ್ಯಂತ ಭಕ್ತರು ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಜಗತ್ತಿನಲ್ಲಿ ಶ್ರೀಕೃಷ್ಣನ ಆರಾಧನೆಯನ್ನು ಮಾಡಬೇಕು ಎಂಬ ಹಂಬಲ ಹಾಗೂ ಗೀತೆಯ ಪ್ರಚಾರ ಎಲ್ಲೆಡೆ ಆಗಬೇಕು ಎಂಬ ಉದ್ದೇಶವೇ ನಮ್ಮ ಚತುರ್ಥ ಪರ್ಯಾಯದ ಮುಖ್ಯ ಥೀಮ್‌ ಆಗಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಶ್ರೀಕೃಷ್ಣನ ಭಗವದ್ಗೀತೆ ಅತ್ಯಂತ ಶ್ರೇಷ್ಠ ಗ್ರಂಥ

ಆಂತರಿಕವಾದ ನಿಲುವು ಸ್ಪಷ್ಟವಾಗಿದ್ದರೆ ನಮ್ಮ ಆಚರಣೆಗಳು ಫಲಪ್ರದವಾಗಿರುತ್ತದೆ. ಧಾರ್ಮಿಕ ಆಚರಣೆಗಳು ಇಂದು ಸ್ವಲ್ಪ ಮಟ್ಟಿಗೆ ಇದೆಯಾದರೂ ಅದರ ಹಿಂದೆ ಆಂತರಿಕ ನಿಲುವು ಶಿಥಿಲವಾಗುತ್ತಾ ಬರುತ್ತಿವೆ. ಅದನ್ನು ಬಲಪಡಿಸಬೇಕು. ಹೀಗಾಗಿ ಗ್ರಂಥದ ಮೂಲಕ ಧಾರ್ಮಿಕ ಜಾಗೃತಿಯನ್ನು ಮೂಡಿಸಬೇಕು. ಇನ್ನು ಅತ್ಯಂತ ಶ್ರೇಷ್ಠ ಗ್ರಂಥ ಯಾವುದೆಂದರೆ ಅದೇ ಶ್ರೀಕೃಷ್ಣನ ಭಗವದ್ಗೀತೆಯಾಗಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಭಗವದ್ಗೀತೆಯ ಜಾಗೃತಿ

ವ್ಯಕ್ತಿಯ ಬದಲಾವಣೆ ಆಗದೇ ಸಮಾಜದ ಬದಲಾವಣೆ ಆಗಲು ಸಾಧ್ಯವಿಲ್ಲ. ವ್ಯಕ್ತಿಯ ಬದಲಾವಣೆ ಆಗಬೇಕಾದರೆ ಅವನ ನಿಲುವುಗಳಲ್ಲಿ ಸ್ಪಷ್ಟತೆ ಇರಬೇಕು. ಜೀವನ-ದೃಷ್ಟಿಕೋನ ಎಲ್ಲವುಗಳಲ್ಲೂ ಬದಲಾವಣೆ ಆಗಬೇಕು. ಇವೆಲ್ಲವೂ ಸರಿಯಾಗಿದ್ದರೆ ಆ ವ್ಯಕ್ತಿ ಒಂದು ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿದೆ. ಹಾಗಾಗಿ ಶ್ರೀಕೃಷ್ಣನ ಪೂಜೆಯನ್ನು ನಿಮಿತ್ತವಾಗಿಟ್ಟುಕೊಂಡು ಭಗವದ್ಗೀತೆಯ ಜಾಗೃತಿಯನ್ನು ಮಾಡುತ್ತಿದ್ದೇವೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಮನುಷ್ಯನ ಆಂತರಿಕ ಸಬಲಕ್ಕೋಸ್ಕರ ಕಾರ್ಯಕ್ರಮ

ನಾವು ವಿಶ್ವಾದ್ಯಂತ ಸಂಚಾರ ಮಾಡುವಾಗ ಜನರ ದೃಷ್ಟಿಕೋನವನ್ನು ಗಮನಿಸುತ್ತಾ ಬಂದಿದ್ದೇವೆ. ಇಂದಿನ ಜನತೆಯಲ್ಲಿ ಮನಃಶಾಂತಿಯ ಕೊರತೆಗಳು ಎದ್ದು ಕಾಣುತ್ತಿವೆ. ಭೌತಿಕವಾಗಿ ಮತ್ತು ಲೌಕಿಕವಾಗಿ ನಾವು ಅಭಿವೃದ್ಧಿಯನ್ನು ಹೊಂದಿದ್ದರೂ ಸಹ ಆಂತರಿಕವಾದಂತಹ ಅಭಿರುಚಿ ಕುಂಠಿತವಾಗುತ್ತಿದೆ. ಹೀಗಾಗಿ ಯಾವಾಗಲೂ ಜೀವನದ ಸಾರ್ಥಕತೆ, ಮನಃಶಾಂತಿಯು ನಮ್ಮ ಆಧ್ಯಾತ್ಮಿಕ ನಿಲುವಿನ ಮೇಲೆ ಅವಲಂಬಿತವಾಗಿರುತ್ತದೆ. ಅದಕ್ಕೋಸ್ಕರ ಭಗವದ್ಗೀತೆಯಿಂದ ಪ್ರತಿಯೊಬ್ಬ ವ್ಯಕ್ತಿಯನ್ನು ಸಹ ಆಂತರಿಕವಾಗಿ ಸಬಲಗೊಳಿಸಬಹುದು ಎಂಬ ದೃಷ್ಟಿಯಲ್ಲಿ ಈ ವಿಶ್ವ ಗೀತ ಪರ್ಯಾಯ ಉತ್ಸವವನ್ನು ಹಾಕಿಕೊಂಡಿದ್ದೇವೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಕೋಟಿ ಗೀತ ಯಜ್ಞಕ್ಕೆ ವಿದೇಶದಿಂದಲೂ ಸ್ಪಂದನೆ

ವಿದೇಶಗಳಲ್ಲಿ ಇಂದು ಆಧ್ಯಾತ್ಮಿಕ ಹಸಿವು ಹೆಚ್ಚಾಗಿದೆ. ಈ ಹಿಂದೆ ಭೌತಿಕವಾದ ಸಮೃದ್ಧಿ ಎಂಬ ಕಲ್ಪನೆ ಇತ್ತು. ಇಂದು ಅದನ್ನೆಲ್ಲ ಪಡೆದ ಮೇಲೆ ಇಷ್ಟೇ ಎಂಬ ಭಾವನೆ ಬಂದಿದೆ. ಹೀಗಾಗಿ ಇದಕ್ಕಿಂತ ಆಚೆ ಇರುವ ಆಧ್ಯಾತ್ಮಿಕತೆ ಬಗ್ಗೆ ಇಂದು ಒಲವು ಜಾಸ್ತಿಯಾಗಿದೆ. ಹಾಗಾಗಿ ನಮ್ಮ ಕೋಟಿ ಗೀತ ಯಜ್ಞಕ್ಕೆ ಭಾರತ ಹೊರಗೂ ಸಹ ವಿಶೇಷವಾದಂತಹ ಸ್ಪಂದನೆಯು ನಮಗೆ ದೊರೆತಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಎರಡು ವರ್ಷ ನಿರಂತರ ಭಗವದ್ಗೀತಾ ಪಾರಾಯಣ

ನಾವು ಪ್ರಮುಖವಾಗಿ ಐದು ಪ್ರಧಾನ ಯೋಜನೆಯನ್ನು ಇಟ್ಟುಕೊಂಡಿದ್ದೇವೆ. ಅದರಲ್ಲಿ ಮುಖ್ಯವಾದದ್ದು ಭಗವದ್ಗೀತೆ ಪ್ರಚಾರವಾಗಿದೆ. ಅದಕ್ಕೋಸ್ಕರ ಒಂದು ಕೋಟಿ ಗೀತ ಯಜ್ಞವನ್ನು ನಡೆಸಲಾಗುತ್ತದೆ. ಎರಡನೆಯದಾಗಿ ಎರಡು ವರ್ಷ ನಿರಂತರವಾಗಿ ಭಗವದ್ಗೀತಾ ಪಾರಾಯಣವನ್ನು ನಡೆಸಲಾಗುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಗೀತಾ ಮಂದಿರದಲ್ಲಿ ಅಖಂಡ ಗೀತ ಪಾರಾಯಣ ನಡೆಯಲಿದೆ. ಈ ಮೂಲಕ ದೇವಸ್ಥಾನದ ವಾತಾವರಣ ಗೀತಮಯವಾಗಿರಲಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

ಭಗವದ್ಗೀತೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ

ಶ್ರೀಮದ್‌ಭಗವದ್ಗೀತೆ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ಬೇರೆ ಬೇರೆ ಕಡೆಯ ವಿದ್ವಾಂಸರನ್ನು ಕರೆಸಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಪರ್ಯಾಯದ ಕೊನೆಯಲ್ಲಿ ಮಾಡಲಾಗುವುದು. ಭಗವದ್ಗೀತಾ ಯಾಗವನ್ನು ಸಹ ಈ ವೇಳೆ ನಡೆಸಲಾಗುತ್ತದೆ. ಇಂದು ವೇದ ಮಂತ್ರಗಳ ಮೂಲಕ ಯಾಗವನ್ನು ನೆರವೇರಿಸಲಾಗುತ್ತದೆ. ಅದೇ ನಾವೀಗ ಭಗವದ್ಗೀತೆಯ ಶ್ಲೋಕಗಳಿಂದ ಭಗವಂತನಿಗೆ ಆಹುತಿಯನ್ನು ಕೊಟ್ಟರೆ ಅದು ಹೆಚ್ಚು ರೀತಿಯಲ್ಲಿ ಫಲಪ್ರದವಾಗಲಿದೆ. ಹೀಗಾಗಿ 701 ಶ್ಲೋಕಗಳಿಂದ ಆಹುತಿಯನ್ನು ಕೊಡುವ ಮಹಾಯಾಗವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

Exit mobile version