Site icon Vistara News

Cheetah In India | ಭಾರತಕ್ಕೆ 8 ಚೀತಾ ತರುವುದರ ಹಿಂದಿದೆ ಪುತ್ತೂರು ವೈದ್ಯ ಸನತ್‌ಕೃಷ್ಣ ಪರಿಶ್ರಮ!

Cheetah Feature

ಪುತ್ತೂರು: ನಮೀಬಿಯಾದಿಂದ ಹತ್ತಾರು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿದ ಎಂಟು ಚೀತಾಗಳು ಮಧ್ಯಪ್ರದೇಶ (Cheetah In India) ತಲುಪಿವೆ. ಅವುಗಳನ್ನು ಅರಣ್ಯಕ್ಕೂ ಬಿಡಲಾಗಿದೆ. ಹೀಗೆ, ನಮೀಬಿಯಾದಿಂದ ಎಂಟು ಚೀತಾಗಳನ್ನು ಸುರಕ್ಷಿತವಾಗಿ ಕರೆತರುವ ನಿಯೋಗದಲ್ಲಿದ್ದ ಮೂವರು ಪಶುವೈದ್ಯರಲ್ಲಿ ಕರ್ನಾಟಕದ ಪುತ್ತೂರಿನವರಾದ ಡಾ. ಸನತ್‌ಕೃಷ್ಣ ಮುಳಿಯ ಅವರೂ ಒಬ್ಬರು ಎಂಬುದು ವಿಶೇಷವಾಗಿದೆ.

ಎಂಟು ಚೀತಾಗಳನ್ನು ವಿಮಾನದಲ್ಲಿ ಕರೆತರುವ ನಿಯೋಗದಲ್ಲಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ತಲಾ ಒಬ್ಬರು ಹಾಗೂ ದಕ್ಷಿಣ ಕನ್ನಡದ ಡಾ. ಸನತ್‌ಕೃಷ್ಣ ಮುಳಿಯ ಅವರು ಇದ್ದರು. “ನಮೀಬಿಯಾದಿಂದ ಭಾರತಕ್ಕೆ ವಿಮಾನದಲ್ಲಿ ೧೦ ಗಂಟೆ ಪ್ರಯಾಣ ಬೆಳೆಸಲಾಗಿದೆ. ಚೀತಾಗಳನ್ನು ವಿಮಾನ ಹತ್ತಿಸುವ ಮೊದಲು ಆರೋಗ್ಯ ತಪಾಸಣೆ, ವಿಮಾನದಲ್ಲಿ ಗಂಟೆಗೊಮ್ಮೆ ಪರಿಶೀಲನೆ ಹಾಗೂ ಗ್ವಾಲಿಯರ್‌ ತಲುಪಿದ ಬಳಿಕ ತಪಾಸಣೆ ಮಾಡಲಾಗಿದೆ” ಎಂದು ಸನತ್‌ಕೃಷ್ಣ ತಿಳಿಸಿದ್ದಾರೆ.

ಚೀತಾಗಳನ್ನು ಕರೆತಂದ ಬಳಿಕ ಡಾ. ಸನತ್‌ಕೃಷ್ಣ ಅವರಿಂದ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ.

ಯಾರಿದು ಸನತ್‌ ಕೃಷ್ಣ?

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ಸನತ್‌ಕೃಷ್ಣ, ಬೆಂಗಳೂರಿನ ವೆಟರ್ನರಿ ಕಾಲೇಜಿನಲ್ಲಿ ಪಶುವೈದ್ಯಕೀಯ ಕೋರ್ಸ್‌ ಮಾಡಿದ್ದಾರೆ. ಸದ್ಯ ದೆಹಲಿಯಲ್ಲಿರುವ ನ್ಯಾಷನಲ್‌ ಜೂಲಾಜಿಕಲ್‌ ಪಾರ್ಕ್‌ನಲ್ಲಿ ಅಸಿಸ್ಟೆಂಟ್ ವೆಟರ್ನರಿ ಆಫೀಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಳಿಯ ಕೇಶವ ಭಟ್‌ ಹಾಗೂ ಉಷಾ ಅವರ ಪುತ್ರರಾದ ಸನತ್‌‌ ಕೃಷ್ಣ, ಅರಿವಳಿಕೆ ತಜ್ಞರೂ ಆಗಿದ್ದಾರೆ.

ವೈದ್ಯಕೀಯ ನಿಯೋಗದ ಜತೆ ಪುತ್ತೂರು ವೈದ್ಯ.

ಹುಲಿ ಹಿಡಿಯುವ ಕಾರ್ಯಾಚರಣೆಯ ನೇತೃತ್ವ

ಶಾರ್ಪ್‌ಶೂಟರ್‌ ಕೂಡ ಆಗಿರುವ ಸನತ್‌ಕೃಷ್ಣ, ಡೆಹ್ರಾಡೂನ್‌ನಲ್ಲಿ ವೈಲ್ಡ್‌ ಲೈಫ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ಪ್ರಾಜೆಕ್ಟ್‌ ವೆಟರಿನೇರಿಯನ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಅರಿವಳಿಕೆ ತಜ್ಞರಾದ ಕಾರಣ ಪುತ್ತೂರು ಹಾಗೂ ತುಮಕೂರಿನಲ್ಲಿ ಹುಲಿಗಳನ್ನು ಹಿಡಿಯುವ ಕಾರ್ಯಚರಣೆಯ ನೇತೃತ್ವವನ್ನೂ ವಹಿಸಿದ್ದರು.

೨೦೨೦ರಲ್ಲಿ ಶ್ರೀಮಂಗಲ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸುವೊಂದನ್ನು ಬಲಿ ಪಡೆದ ಹುಲಿಯ ಕಾರ್ಯಾಚರಣೆಯಲ್ಲಿ ಸನತ್‌ಕೃಷ್ಣ ನೇತೃತ್ವ ವಹಿಸಿದ್ದರು. ಹಾಗೆಯೇ, ತುಮಕೂರಿನಲ್ಲಿ ನಾಲ್ವರನ್ನು ಬಲಿ ಪಡೆದು, ಸುತ್ತಮುತ್ತಲಿನ ಜನರಿಗೆ ಭೀತಿ ಹುಟ್ಟಿಸಿದ್ದ ಹುಲಿಯನ್ನು ಹಿಡಿಯುವಲ್ಲಿಯೂ ಸನತ್‌ಕೃಷ್ಣ ಅವರ ತಂಡವೇ ನಿರ್ಣಾಯಕ ಪಾತ್ರ ನಿರ್ವಹಿಸಿತ್ತು.

ಇದನ್ನೂ ಓದಿ | Madhya Pradesh : ಚಿರತೆಗೂ ಚೀತಾಗೂ ಏನ್ ಡಿಫರೆನ್ಸ್

Exit mobile version