ಹೊಸಪೇಟೆ: ವಿಜಯನಗರದ ಕ್ಷೇತ್ರದಲ್ಲಿ ಒಣ ಬೇಸಾಯ (Dry farming) ಹೊಂದಿದ ಬಳ್ಳಾರಿ ರಸ್ತೆಯ ರೈತರ ಹೊಲಗಳಿಗೆ ಏತ ನೀರಾವರಿ ಯೋಜನೆಯಡಿ ಶೀಘ್ರ ನೀರು (Quick water) ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಭರವಸೆ ನೀಡಿದರು.
ನಗರದ 25ನೇ ವಾರ್ಡಿನ ಚಿತ್ರಕೇರಿಯಲ್ಲಿ ಶನಿವಾರ ಮತಯಾಚನೆ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆನಂದ ಸಿಂಗ್ ಅವರು ಅಂದಿನ ಸಮ್ಮಿಶ್ರ ಸರ್ಕಾರಕ್ಕೆ ಎರಡು ಬೇಡಿಕೆಗಳನ್ನು ಈಡೇರಿಸಲು ಕೇಳಿಕೊಂಡಿದ್ದರು. ಆದರೆ, 14 ತಿಂಗಳು ಕಾದರೂ ಯಾವೊಬ್ಬ ನಾಯಕರೂ ಸ್ಪಂದಿಸಿರಲಿಲ್ಲ. ಹೀಗೇ ಸುಮ್ಮನೆ ಕುಳಿತರೆ ಕ್ಷೇತ್ರದ ಜನರ ನಂಬಿಕೆಗೆ ದ್ರೋಹ ಬಗೆದಂತಾಗುತ್ತದೆ ಎಂಬ ವಿಚಾರದಿಂದಾಗಿ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದರು ಎಂದು ಹೇಳಿದರು.
ಇದನ್ನೂ ಓದಿ: Modi In Karnataka: ಕಾಂಗ್ರೆಸ್ ಗ್ಯಾರಂಟಿ ಸುಳ್ಳು, ನಂಬಿದರೆ ಮುಳ್ಳು; ಬೊಮ್ಮಾಯಿ ತವರಲ್ಲಿ ಮೋದಿ ಅಬ್ಬರ
ಬಳಿಕ ನಡೆಯುವ ಮರು ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಗೆಲುವು ಸಾಧಿಸುವುದಲ್ಲದೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪನವರು ಆನಂದ್ ಸಿಂಗ್ ಅವರ ಎರಡು ಬೇಡಿಕೆಗಳಾದ ವಿಜಯನಗರ ಜಿಲ್ಲಾ ಘೋಷಣೆ ಹಾಗೂ ಏತ ನೀರಾವರಿ ಯೋಜನೆಗೆ ಸ್ಪಂದಿಸಿ ಅನುದಾನವನ್ನು ಬಿಡುಗಡೆ ಮಾಡಿದ್ದರು. ದಶಕಗಳ ಬಹುಜನರ ಬೇಡಿಕೆಯಾಗಿದ್ದ ವಿಜಯನಗರ ಜಿಲ್ಲಾ ಘೋಷಣೆ ಒಂದು ಐತಿಹಾಸಿಕ ನಿರ್ಣಯವಾದರೆ ಇನ್ನೊಂದು ಯೋಜನೆಯಾದ 250 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾದಿಂದ 22 ಕೆರೆಗಳಿಗೆ ನೀರು ತುಂಬಿಸುವ ಮತ್ತು ಈ ಕೆರೆಗಳಿಂದ ಒಣ ಬೇಸಾಯದ ಹೊಲಗಳಿಗೆ ಕಾಲುವೆ, ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಅಡಿಗಲ್ಲು ಹಾಕುವುದು ಅವಿಸ್ಮರಣೀಯ ಕಾರ್ಯವಾಯಿತು.
ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಮೊದಲ ಹಂತ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಬಾಕಿ ಇದ್ದು, ನಿಮ್ಮೆಲ್ಲರ ಮತದ ಆಶೀರ್ವಾದದ ಬಳಿಕ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಿ ಕಾಲುವೆ ಮೂಲಕ ರೈತರ ಹೊಲಗಳಿಗೆ ಶೀಘ್ರ ನೀರನ್ನು ಹರಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: NEET Exam 2023: ಮೇ 7ಕ್ಕೆ ನೀಟ್ ಪರೀಕ್ಷೆ; ಎಷ್ಟು ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿರಬೇಕು?
ಮುಖಂಡ ಭರಮಪ್ಪ ಮಾತನಾಡಿ, ಆನಂದ್ ಸಿಂಗ್ ಅವರು 2005ರ ಮೊದಲೇ ಅಂದರೆ ಚುನಾವಣೆಗೆ ಸ್ಪರ್ಧಿಸುವ ಮುನ್ನವೇ ಸಮಾಜ ಸೇವೆ ಆರಂಭಿಸಿ ಸಮಾಜಮುಖಿಯಾಗಿ ಜನಮಾನಸದಲ್ಲಿ ಸಾಗಿದವರು. ಅವರೆಂದೂ ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಆರೋಗ್ಯ, ಶಿಕ್ಷಣಕ್ಕಾಗಿ ಸಹಾಯಹಸ್ತ ನೀಡಿ ಬಡವರ, ನೊಂದವರ ಮನೆಯ ಬೆಳಕಾದವರು. ಇವರ ಮಗನಾದ ಸಿದ್ದಾರ್ಥ ಸಿಂಗ್‌ರನ್ನು ಗೆಲ್ಲಿಸುವುದರಿಂದ ಕ್ಷೇತ್ರದ ಜನತೆ ನೆಮ್ಮದಿಯ ಜೀವನ ಕಳೆಯಬಹುದು ಎಂದರು.
ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ
ಬಹಿರಂಗ ಸಭೆಗೂ ಮುನ್ನ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಇಲ್ಲಿನ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಗರಸಭೆ ಸದಸ್ಯ ಜಗದೀಶ ಕಾಮಟಿ, ಮುಖಂಡರಾದ ಬಿಸಾಟಿ ತಾಯಪ್ಪ, ಪೂಜಾರಿ ನಾಗಪ್ಪ, ಗುಜ್ಜಲ ಚಂದ್ರಣ್ಣ ಹಾಗೂ ಇತರರಿದ್ದರು.
ಸಿದ್ದಾರ್ಥಸಿಂಗ್‌ಗೆ ವಿಶೇಷ ಸ್ವಾಗತ
ಕ್ಷೇತ್ರದ ವಾಲ್ಮೀಕಿ ವೃತ್ತದ ಬಳಿಯ ತಳವಾರ ಕೇರಿಗೆ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ತೆರಳಿದಾಗ ಅಲ್ಲಿನ ಅಭಿಮಾನಿ ಬಳಗ ಹಾಗೂ ಮತದಾರರು, ಮತಯಾಚನೆಗೆ ಬರುವ ಮುಖ್ಯರಸ್ತೆಯಿಂದ ತಳವಾರ ಕೇರಿ ಮಾರೆಮ್ಮ ದೇವಸ್ಥಾನವರೆಗೂ ನೆಲಕ್ಕೆ ಕಾರ್ಪೆಟ್ ಹಾಸಿದ್ದರಲ್ಲದೆ ಪ್ರತಿ ಮನೆಯವರೆಲ್ಲ ಪುಷ್ಪಾರ್ಚನೆಯೊಂದಿಗೆ ವಿಶೇಷವಾಗಿ ಬರ ಮಾಡಿಕೊಂಡರು. ಆನಂದ್ ಸಿಂಗ್ ಸಹೋದರ ಈಶ್ವರ ಸಿಂಗ್, ತಾರಿಹಳ್ಳಿ ಜಂಬುನಾಥ ಮುಖಂಡರಾದ ಈರಪ್ಪ, ಪಂಪಾಪತಿ, ಪ್ರಕಾಶ ಹಾಗೂ ಇತರರಿದ್ದರು.
ಇದನ್ನೂ ಓದಿ: Weather Report: ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
ಮಲ್ಲಮ್ಮ ಗುಡಿ ಪ್ರದೇಶ ಸೇರಿದಂತೆ ಅನೇಕ ಭಾಗದ ಜನರ ವಸತಿ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುವೆ ಎಂದು ಇದೇ ವೇಳೆ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ತಿಳಿಸಿದರು.