Site icon Vistara News

Karnataka Election 2023: ಡಿಕೆಶಿ ಭದ್ರಕೋಟೆ ಕನಕಪುರದಲ್ಲಿ ಆರ್‌.ಅಶೋಕ್‌ ಭಾಷಣಕ್ಕೆ ವಿರೋಧ

R Ashok Speech in kanakapura constituency. Karnataka Election updates.

R Ashok

ಕನಕಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣ ಕ್ಷೇತ್ರದಲ್ಲಿ ಎರಡು ದಿನಗಳ ಹಿಂದಷ್ಟೇ ಸಂಸದ ಪ್ರತಾಪ್‌ ಸಿಂಹ ಅವರನ್ನು ಸಿದ್ದರಾಮಯ್ಯ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಏಕೆ, ವರುಣದಲ್ಲಿಯೇ ಸಚಿವ ವಿ.ಸೋಮಣ್ಣ ಅವರ ಕಾರಿಗೂ ಜನ ಮುತ್ತಿಗೆ ಹಾಕಿದ್ದರು. ಇದರ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಕ್ಷೇತ್ರವಾದ ಕನಕಪುರದಲ್ಲಿ (Karnataka Election 2023) ಬಿಜೆಪಿ ಅಭ್ಯರ್ಥಿ, ಸಚಿವ ಆರ್‌. ಅಶೋಕ್‌ ಅವರ ಭಾಷಣಕ್ಕೆ ವಿರೋಧ ವ್ಯಕ್ತವಾಗಿದೆ.

ಡಿಕೆಶಿ ಕೋಟೆಯನ್ನು ಭೇದಿಸಲು ಕನಕಪುರದಲ್ಲಿ ಕಣಕ್ಕಿಳಿದಿರುವ ಆರ್‌.ಅಶೋಕ್‌ ಅಬ್ಬರದ ಪ್ರಚಾರ ಕೈಗೊಂಡರು. ಡಿಕೆಶಿ ವಿರುದ್ಧ ಭಾರಿ ಭಾಷಣ ಮಾಡುತ್ತಿದ್ದರು. ಭಾಷಣದ ಮಧ್ಯೆಯೇ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕನಕಪುರ ಕಾಂಗ್ರೆಸ್‌ನವರ ಮನೆ. ನೀವು ಇಲ್ಲಿಗೆ ಬಂದು ಡಿಕೆಶಿ ಬಗ್ಗೆ ಮಾತನಾಡಬೇಡಿ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಕಿತ್ತುಕೊಂಡಿರಿ. ಅದನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿರಿ. ಬಿಜೆಪಿಯವರು ಮಾತೆತ್ತಿದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತೀರಿ. ನೀವು ಡಿಕೆಶಿ ಬಗ್ಗೆ ಮಾತನಾಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ಮತದಾನದ ಆತಂಕವಿದೆ ಎಂದ ಅಶೋಕ್‌

ಕನಕಪುರದಲ್ಲಿ ಪ್ರಚಾರ ಕೈಗೊಂಡ ಆರ್‌.ಅಶೋಕ್‌, ಕ್ಷೇತ್ರದಲ್ಲಿ ನಕಲಿ ಮತದಾನದ ಆತಂಕವಿದೆ ಎಂದು ಆರೋಪಿಸಿದರು. “ಕನಕಪುರದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಮತದಾನದ ಸಮಯದಲ್ಲಿ ಪವರ್‌ ಕಟ್‌ ಮಾಡಿಸುತ್ತಾರೆ. ಈ ಕುರಿತು ಜೆಡಿಎಸ್‌ ನಾಯಕರೇ ನನಗೆ ಹೇಳಿದ್ದಾರೆ. ನಾವು ಪ್ರಬಲ ಪೈಪೋಟಿ ನೀಡುತ್ತಿರುವುದಕ್ಕೆ ದಬ್ಬಾಳಿಕೆ ಎನ್ನುತ್ತಾರೆ” ಎಂದು ಟಿ.ಬೇಕುಪ್ಪೆ ಗ್ರಾಮದಲ್ಲಿ ಹೇಳಿದರು.

ದೊಡ್ಡಹಾಲಹಳ್ಳಿಯಲ್ಲಿ ಎರಡೇ ನಿಮಿಷ ಪ್ರಚಾರ

ಭಾನುವಾರ ಬೆಳಗ್ಗೆಯಿಂದಲೇ ಕನಕಪುರದಲ್ಲಿ ಪ್ರಚಾರ ನಡೆಸಿದ ಆರ್‌.ಅಶೋಕ್‌, ಬಳಿಕ ಡಿಕೆಶಿ ಹುಟ್ಟೂರಾದ ದೊಡ್ಡಹಾಲಹಳ್ಳಿಯಲ್ಲಿ ಪ್ರಚಾರ ಕೈಗೊಂಡರು. ಅಶೋಕ್‌ ಅವರನ್ನು ಸ್ವಾಗತಿಸಲು ನೂರಾರು ಕಾರ್ಯಕರ್ತರು ಸೇರಿದ್ದರು. ಆದರೆ, ಅಬ್ಬರದ ಭಾಷಣವೂ ಇಲ್ಲದೆ, ಪ್ರಚಾರವನ್ನೂ ಕೈಗೊಳ್ಳದೆ, ಎರಡೇ ನಿಮಿಷದಲ್ಲಿ ಅಶೋಕ್‌ ಅಲ್ಲಿಂದ ತೆರಳಿದರು. ಇದರಿಂದ ಕಾರ್ಯಕರ್ತರಿಗೆ ನಿರಾಸೆಯಾಯಿತು. ಆದಾಗ್ಯೂ, ಕನಕಪುರದ ಬಹುತೇಕ ಗ್ರಾಮಗಳಲ್ಲಿ ಆರ್‌.ಅಶೋಕ್‌ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು.

Also read this : https://vistaranews.com/karnataka/karnataka-election-siddaramaiah-tweets-sends-shockwaves-in-bjp-supporters/301335.html

Exit mobile version