ಕೋಲಾರ: ಜಿಲ್ಲೆಯ ಮಾಲೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ (Vijay Sankalpa Yatre) ಭಾನುವಾರ ಅದ್ಧೂರಿ ಸ್ವಾಗತ ದೊರೆಯಿತು. ಬೆಂಗಳೂರಿನ ರಸ್ತೆಯ ಇರಪ್ಪನಹಳ್ಳಿ ಗೇಟ್‌ನಿಂದ ಆರಂಭವಾದ ಯಾತ್ರೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕಂದಾಯ ಸಚಿವ ಆರ್. ಅಶೋಕ್ ಮತ್ತು ಆರೋಗ್ಯ ಡಾ.ಸುಧಾಕರ್ ಭಾಗಿಯಾಗಿದ್ದರು. ಮಾಲೂರು ಆಕಾಂಕ್ಷಿಗಳಾದ ಹೂಡಿ ವಿಜಯಕುಮಾರ್ ಮತ್ತು ಮಾಜಿ ಶಾಸಕ ಮಂಜುನಾಥ್ ಗೌಡ ಮತ್ತಿತರರು ಜತೆಗಿದ್ದರು.
ಈ ವೇಳೆ ಸಚಿವ ಆರ್. ಅಶೋಕ್ ಮಾತನಾಡಿ, ಈ ಹಿಂದಿನ ಎಚ್‌ಡಿಕೆ ಮೈತ್ರಿ ಸರ್ಕಾರ 14 ತಿಂಗಳಿಗೆ ನೆಗೆದುಬಿದ್ದು ನೆಲ್ಲಿಕಾಯಿ ಆಗಿಯೋಯಿತು. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್, ಜೆಡಿಎಸ್ ಅಧಿಕಾರಕ್ಕೆ ಬರಲ್ಲ. ಗುಮಾಸ್ತನ ಹಾಗೆ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಡೆಸಿಕೊಂಡರು. ದೆಹಲಿ ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಎಟಿಎಂ ಇದ್ದಂತೆ, ಅದು ಆಗಬಾರದು. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದು ಅಷ್ಟೇ ಸತ್ಯ ಎಂದು ಹೇಳಿದರು.
ಮಾಲೂರು ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದ ಬಳಿಕ ಸಂಜೆ ಕೋಲಾರದ ಬೈರೇಗೌಡ ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶವನ್ನು ನಡೆಸಲಿದ್ದು, ನಂತರ ಬಂಗಾರಪೇಟೆಯಲ್ಲಿ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ.
ಬಿರಿಯಾನಿಗೆ ಮುಗಿಬಿದ್ದ ಜನ
6 ಸಾವಿರ ಮಂದಿಗೆ ಬಿರಿಯಾನಿ, ಕಬಾಬ್; ಮುಗಿಬಿದ್ದ ಜನ
ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಹೂಡಿ ವಿಜಯಕುಮಾರ್, ಮಾಜಿ ಶಾಸಕ ಮಂಜುನಾಥ್ ಗೌಡ ಬಣಗಳ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವರ ಮುಂದೆ ಆಕಾಂಕ್ಷಿಗಳು ಬಲ ಪ್ರದರ್ಶನ ಮಾಡಿದ್ದಾರೆ. ಇಬ್ಬರು ಮುಖಂಡರ ಬೆಂಬಲಿಗರು, ರಸ್ತೆ ಇಕ್ಕೆಲಗಳಲ್ಲಿ ರಥಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಹಾಕಿಸಿದ್ದರು. ಮತ್ತೊಂದೆಡೆ ಮಾಜಿ ಶಾಸಕ ಮಂಜುನಾಥ್ ಗೌಡ, ಸುಮಾರು 6 ಸಾವಿರ ಮಂದಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಿದ್ದರು. ಬಿರಿಯಾನಿ, ಕಬಾಬ್‌ಗಾಗಿ ಯಾತ್ರೆಗೆ ಬಂದಿದ್ದ ಜನರು ಮುಗಿಬಿದ್ದಿದ್ದು ಕಂಡುಬಂತು.