Site icon Vistara News

R Dhruvanarayana : ಸಭ್ಯತೆಯ ಸವ್ಯಸಾಚಿ, ಶುದ್ಧ- ಮೌಲ್ಯಾಧರಿತ ರಾಜಕಾರಣದ ʻಧ್ರುವʼ ನಕ್ಷತ್ರ ಕಣ್ಮರೆ

#image_title

ಬೆಂಗಳೂರು: ಪರಿಶುದ್ಧ ರಾಜಕಾರಣ, ಸಭ್ಯ ನಡೆ-ನುಡಿಗಳಿಗೆ ಹೆಸರಾಗಿದ್ದ ಚಾಮರಾಜ ನಗರದ ಕಾಂಗ್ರೆಸ್‌ ನಾಯಕ ಆರ್‌. ಧ್ರುವ ನಾರಾಯಣ(62) ಕಣ್ಮರೆಯಾಗಿದ್ದಾರೆ (R Dhruvanarayana). ಈ ಮೂಲಕ ಶುದ್ಧ-ಮೌಲ್ಯಾಧರಿತ ರಾಜಕೀಯದ ಧ್ರುವ ನಕ್ಷತ್ರವೊಂದು ಕಳಚಿಬಿದ್ದಂತಾಗಿದೆ.

ವಿದ್ಯಾರ್ಥಿ ನಾಯಕರಾಗಿ ನಾಯಕತ್ವದ ಪಟ್ಟುಗಳನ್ನು ಬೆಳೆಸಿಕೊಂಡು ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕಾರಣವನ್ನು ಪ್ರವೇಶಿಸಿದ ಧ್ರುವನಾರಾಯಣ ಅವರು ಎರಡು ಸೋಲು ಮತ್ತು ನಾಲ್ಕು ಗೆಲುವುಗಳ ನಡುವೆ ಜೀಕಿದವರು. ಎರಡು ಬಾರಿ ವಿಧಾನಸಭೆಗೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾದವರು. ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಕಾರ್ಯಾಧ್ಯಕ್ಷರಾಗಿ ತಂತ್ರಗಾರಿಕೆ ಹೆಣೆಯುತ್ತಿರುವ ಹೊತ್ತಿನಲ್ಲೇ ಹೃದಯಾಘಾತದಿಂದ ಕಾಲವಶರಾಗಿದ್ದಾರೆ. 2004ರಲ್ಲಿ ಕೇವಲ ಒಂದೇ ಒಂದು ಮತದಿಂದ ಗೆಲ್ಲುವ ಮೂಲಕ ಇಡೀ ದೇಶದಲ್ಲಿ ಗಮನ ಸೆಳೆದ ಧ್ರುವನಾರಾಯಣ ಅವರು ತಮ್ಮ ಉತ್ತಮ ನಡವಳಿಕೆಗಳ ಮೂಲಕವೂ ಜನಮಾನದಲ್ಲಿ ಶಾಶ್ವತ ನೆನಪುಗಳನ್ನು ಬಿಟ್ಟುಹೋಗಿರುವ ನಾಯಕ.

ಕಾಂಗ್ರೆಸ್‌ ಪ್ರಚಾರ ಕಾರ್ಯಕ್ರಮದಲ್ಲಿ

ಯಾವತ್ತೂ ವಿರೋಧಿಗಳ ಬಗ್ಗೆ ಕೆಟ್ಟ ಮಾತುಗಳನ್ನು ಆಡದೆ, ಕುತಂತ್ರಗಳನ್ನು ಮಾಡದೆ ನೇರ ರಾಜಕೀಯದ ಮೂಲಕವೇ ತಮ್ಮ ದಿಟ್ಟ ಹೆಜ್ಜೆಗಳನ್ನು ಇಟ್ಟವರು ಧ್ರುವನಾರಾಯಣ ಎನ್ನುವುದು ಇಡೀ ರಾಜಕೀಯ ವಲಯದಲ್ಲಿ ಒಪ್ಪುವಂತ ಮಾತು. ಯಾವತ್ತೂ ತಾಳ್ಮೆ ಕಳೆದುಕೊಳ್ಳದೆ, ಸೋತರೂ ದ್ವೇಷ ಸಾಧಿಸದೆ ಪಕ್ಷದೊಳಗೆ ಮಾತ್ರವಲ್ಲ ವಿರೋಧ ಪಕ್ಷದಲ್ಲೂ ಗೌರವವನ್ನು ಪಡೆದುಕೊಂಡಿದ್ದ ಸಜ್ಜನಿಕೆಯ ವ್ಯಕ್ತಿತ್ವ ಧ್ರುವನಾರಾಯಣ ಅವರದು.

ಕೃಷಿ ಪದವೀಧರ ರಂಗಸ್ವಾಮಿ ಧ್ರುವನಾರಾಯಣ

ಚಾಮರಾಜ ನಗರ ಜಿಲ್ಲೆಯ ಹಗ್ಗವಾಡಿ ಗ್ರಾಮದಲ್ಲಿ 1961ರ ಜುಲೈ 31ರಂದು ಜನಿಸಿದ ಧ್ರುವ ನಾರಾಯಣ ಅವರು ಕೇವಲ ರಾಜಕಾರಣಿಯಲ್ಲ. ಅವರೊಬ್ಬ ಕೃಷಿ ವಿಜ್ಞಾನಿ ಕೂಡಾ. ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃಷಿಯಲ್ಲಿ ಬಿಎಸ್‌ಸಿ ಮತ್ತು ಎಂಎಸ್‌ಸಿ ಪದವಿಯನ್ನು ಪಡೆದಿದ್ದ ಅವರು ಕಾಲೇಜು ಜೀವನದಲ್ಲೇ ನಾಯಕತ್ವದ ಗುಣಗಳನ್ನು ತೋರಿಸಿದ್ದರು. ಕೃಷಿಯ ವಿಚಾರದಲ್ಲೂ ಅಪಾರ ಜ್ಞಾನವನ್ನು ಹೊಂದಿದ್ದರು.

ದೇವರ ಮುಂದೆ ಧ್ರುವನಾರಾಯಣ

1983ರಲ್ಲಿ ರಾಜಕೀಯ ಪ್ರವೇಶ

1983ರಲ್ಲಿ ಕಾಂಗ್ರೆಸ್‌ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸೇರಿದ್ದರು. 1984ರಲ್ಲಿ ಹೆಬ್ಬಾಳದ ಕೃಷಿ ವಿವಿಯ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ ಅವರು ಮುಂದೆ ಅದೇ ವರ್ಷ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐನ ಬೆಂಗಳೂರು ನಗರಾಧ್ಯಕ್ಷರಾಗಿ ಆಯ್ಕೆಯಾದರು.

1986ರಲ್ಲಿ ಅವರು ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟರು.

ಅವರ ಚುನಾವಣಾ ರಾಜಕೀಯ ಆರಂಭವಾಗಿದ್ದು 1999ರಲ್ಲಿ ಸಂತೇಮಾರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು ಜೆಡಿಯು ಅಭ್ಯರ್ಥಿ ಎ.ಆರ್‌. ಕೃಷ್ಣಮೂರ್ತಿ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದರು. ಆದರೆ, ಅದೇ ಕ್ಷೇತ್ರ ಮತ್ತು ಅದೇ ಕೃಷ್ಣಮೂರ್ತಿ ಅವರ ವಿರುದ್ಧ 2004ರ ಚುನಾವಣೆಯಲ್ಲಿ ಒಂದು ಮತದಿಂದ ಗೆಲುವು ಸಾಧಿಸಿದ್ದು ಚರಿತ್ರೆಯಾಗಿ ದಾಖಲಾಯಿತು.

ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಅಭಿವೃದ್ಧಿಗಾಗಿ ಮನವಿ

2008ರಲ್ಲಿ ಅವರು ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 11,800 ಮತಗಳಿಂದ ಗೆದ್ದರು. 2009ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ 4020 ಮತಗಳಿಂದ ಗೆದ್ದ ಅವರು 2014ರ ಹೊತ್ತಿಗೆ ಗೆಲುವಿನ ಅಂತರವನ್ನು 1,41,182 ಮತಗಳಿಗೆ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು. ಅದರೆ, 2019ರ ಚುನಾವಣೆಯಲ್ಲಿ ಅವರು ಬಿಜೆಪಿಯ ಶ್ರೀನಿವಾಸ್‌ ಪ್ರಸಾದ್‌ ಅವರ ವಿರುದ್ಧ ಸೋಲು ಕಾಣಬೇಕಾಯಿತು. ಆದರೆ, ಪ್ರಬಲ ಮೋದಿ ಅಲೆಯ ನಡುವೆಯೂ ಅವರು ಸೋತಿದ್ದು ಕೇವಲ 12,716 ಮತಗಳಿಂದ ಎಂಬುದು ವಿಶೇಷ.

ಇವತ್ತು ಧ್ರುವ ನಾರಾಯಣ ಅವರದು ಕಾಂಗ್ರೆಸ್‌ನಲ್ಲಿ ದೊಡ್ಡ ಹೆಸರು. ಯಾವುದೆ ಕಾರ್ಯತಂತ್ರಗಳಲ್ಲಿ ಅವರಿಗೆ ಮುಂಚೂಣಿ ಸ್ಥಾನ. ದಾಖಲೆಗಳೊಂದಿಗೆ ಮಾತನಾಡಬಲ್ಲ ಈ ಶಕ್ತಿವಂತ ರಾಜಕಾರಣಿ, ವಿರೋಧ ಪಕ್ಷದವರನ್ನೂ ಗೌರವದಿಂದಲೇ ಕಾಣುವ ಗುಣವನ್ನು ಹೊಂದಿದ್ದಾರೆ. ಹೀಗಾಗಿ ಅವರು ಎಲ್ಲ ಪಕ್ಷ, ರಾಜಕಾರಣಿಗಳ ನಡುವೆ ಒಂದು ರೀತಿಯ ಅಜಾತಶತ್ರು.

ಕೇಂದ್ರದಲ್ಲಿ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವರಿಗೆ ಮನವಿ ಸಲ್ಲಿಕೆ

ಅತ್ಯುತ್ತಮ ಕೆಲಸಗಾರ ಧ್ರುವನಾರಾಯಣ

ಧ್ರುವ ನಾರಾಯಣ ಅವರು ಕೇವಲ ಸಭ್ಯ ರಾಜಕಾರಣಿಯಾಗಿ ಮಾತ್ರವಲ್ಲ ಉತ್ತಮ ಕೆಲಸಗಾರನಾಗಿಯೂ ಗಮನ ಸೆಳೆದವರು. ಅವರು ಶಾಸಕರಾಗಿ ಮತ್ತು ಲೋಕಸಭಾ ಸದಸ್ಯರಾಗಿ ಅತ್ಯುತ್ತಮ ಕೆಲಸ ಮಾಡಿದವರು. ಸಂಸದರ ನಿಧಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡ ಹೆಗ್ಗಳಿಕೆ.

ಸೋಲು ಮತ್ತು ಗೆಲುವುಗಳ ನಡುವೆ

ಧ್ರುವನಾರಾಯಣ ಅವರ ಚುನಾವಣಾ ರಾಜಕೀಯ ಆದಿ ಮತ್ತು ಅಂತ್ಯದ ಎರಡು ಸೋಲು ಮತ್ತು ನಡುವಿನ ನಾಲ್ಕು ಗೆಲುವುಗಳ ನಡುವೆ ಜೀಕಾಡಿದೆ.

1999: ವಿಧಾನಸಭಾ ಚುನಾವಣೆ- ಸಂತೇಮಾರಹಳ್ಳಿಯಲ್ಲಿ ಎ.ಆರ್‌. ಕೃಷ್ಣಮೂರ್ತಿ ವಿರುದ್ಧ ಸೋಲು
2004: ವಿಧಾನಸಭಾ ಚುನಾವಣೆ-ಸಂತೇಮಾರಹಳ್ಳಿಯಲ್ಲಿ ಎ.ಆರ್‌. ಕೃಷ್ಣಮೂರ್ತಿ ವಿರುದ್ಧ 1 ಮತದ ಗೆಲುವು
2008: ವಿಧಾನಸಭಾ ಚುನಾವಣೆ-ಕೊಳ್ಳೇಗಾಲ ಕ್ಷೇತ್ರದಲ್ಲಿ 11,800 ಮತಗಳಿಂದ ಗೆಲುವು
2009: ಲೋಕಸಭಾ ಚುನಾವಣೆ- ಚಾಮರಾಜ ನಗರದ ಕ್ಷೇತ್ರದಲ್ಲಿ 4080 ಮತಗಳಿಂದ ಗೆಲುವು
2014: ಲೋಕಸಭಾ ಚುನಾವಣೆ- ಚಾಮರಾಜ ನಗರದ ಕ್ಷೇತ್ರದಲ್ಲಿ 1,41,182 ಮತಗಳಿಂದ ಗೆಲುವು
2019: ಲೋಕಸಭಾ ಚುನಾವಣೆ- ಚಾಮರಾಜ ನಗರದ ಕ್ಷೇತ್ರದಲ್ಲಿ 12,716 ಮತಗಳಿಂದ ಸೋಲು

ಇದನ್ನೂ ಓದಿ : R Dhruvanarayan: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೃದಯಾಘಾತದಿಂದ ನಿಧನ

Exit mobile version