Site icon Vistara News

R Dhruvanarayana : ಧ್ರುವನಾರಾಯಣ ಸರ್‌, ನೀವು ಮಾದರಿ ರಾಜಕಾರಣಕ್ಕೊಂದು ಅದ್ಭುತ ಪಾಠ, ಬದುಕಿನ ಮರೆಯಲಾಗದ ಅಧ್ಯಾಯ

Dhruvanarayana lekhana

#image_title

ಕುಸುಮಾ ಆಯರಹಳ್ಳಿ, ಬೆಂಗಳೂರು

ಅದು 1999! ಸಂತೆಮರಹಳ್ಳಿ ಕ್ಷೇತ್ರದಿಂದ ಧ್ರುವನಾರಾಯಣ್ ಅವರ ಮೊದಲ ಚುನಾವಣೆ ಸ್ಪರ್ಧೆ. ಸಂತೆಮರಹಳ್ಳಿಯಲ್ಲೆ ಶಾಲೆ ಓದುತ್ತಿದ್ದ ನನಗೆ ಆ ಭಾಗದ ರಾಜಕಾರಣಿಗಳೆಲ್ಲ ಮನೆಗೆ ಬಂದು ಹೋಗುತ್ತಾ ಪರಿಚಿತರು. ಧ್ರುವನಾರಾಯಣ್ ಕೂಡ ಮೊದಲಿಗೆ ಇತರೆ ರಾಜಕಾರಣಿಗಳೊಂದಿಗೆ ಓಡಾಡುತ್ತಾ ಅವತ್ತಿನ ಕಾಲಕ್ಕೆ ತಕ್ಕುದಾದ ಪ್ರಚಾರ ಇತ್ಯಾದಿ ಪ್ಲಾನು ಮಾಡುತ್ತಾ ಕಡೆಗೆ 1999ರಲ್ಲಿ ಸಂತೆಮರಹಳ್ಳಿಯಿಂದಲೇ ಸ್ಪರ್ಧಿಸಿದರು. ಸೋತರು. ನಂತರ 2004ರಲ್ಲಿ ಒಂದು ಓಟಿನಿಂದ ಗೆದ್ದ ರೋಚಕ ದಾಖಲೆ ಅವರದು.

ಧ್ರುವನಾರಾಯಣ್ ಅಂದ ಕೂಡಲೆ ನನಗೆ ನೆನಪಾಗುವ ಘಟನೆ ಇದು. ʻʻಧ್ರುವನಾರಾಯಣ್ ಬಂದ್ರೆ ಕೊಡುʼʼ ಅಂತ ಚಿಕ್ಕಪ್ಪ ಒಂದು ಲೆಟರ್ ಕೊಟ್ಟಿದ್ದರು. ಅದು ಯಾವುದೋ ಧಾರ್ಮಿಕ ಸಂಸ್ಥೆಯ ಪತ್ರ. ʻʻಇಂತಹ ಕ್ಷೇತ್ರದಿಂದ ಇಂತಹ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರೋ ನಿಮಗೆ ಗೆಲ್ಲುವ ಸಲುವಾಗಿ ನಾವು ಪೂಜೆ ಮಾಡುತ್ತೇವೆ‌, ಒಂದು ಸಾವಿರ ಕಳಿಸಿʼʼ ಅಂತ ಇತ್ತು. ನಾನದನ್ನು ಕೊಟ್ಟೆ. ಅದರಲ್ಲಿ ಅಭ್ಯರ್ಥಿಯ ಹೆಸರು, ಕ್ಷೇತ್ರ, ಇವೆಲ್ಲ ಪ್ರಿಂಟ್ ಆಗಿರಲ್ಲ‌. ಅದನ್ನು ಖಾಲಿ ಇಟ್ಟು ಕೈಲಿ ಬರ್ದಿದ್ದರು. ‘ಈ ಪತ್ರಾನ ಅವರು ಎದುರು ಪಕ್ಷದ ಅಭ್ಯರ್ಥಿಗೂ ಕಳಿಸಿರ್ತಾರೆ ನಾನ್ಸೆನ್ಸ್’ ಅಂದರು ಧ್ರುವನಾರಾಯಣ್.

‘ಇವ್ರು ಒಂದೇ ಪ್ರಾರ್ಥನೆ ಇಬ್ರಿಗೂ ಮಾಡಿದ್ರೆ ಪಾಪ ದೇವ್ರು ತಾನೇ ಯಾರಿಗೆ ತಥಾಸ್ತು ಅನ್ನಬೇಕು?’  ಅಂತ ನಕ್ಕಿದ್ದೆ. ಹರ್ದು ಬಿಸಾಕು ಅಂದಿದ್ದರು. ಆದರೆ ನಾನದನ್ನು ಬಹಳ ಕಾಲ ಜೋಪಾನವಾಗಿಟ್ಟುಕೊಂಡಿದ್ದೆ. ಮುಂದೊಮ್ಮೆ ಪತ್ರಕರ್ತೆಯಾಗಿ ಅದನ್ನು ಪ್ರಿಂಟು ಮಾಡೋ ಉದ್ದೇಶವಿತ್ತು ಒಳಗೊಳಗೇ. ಅವರು ಸ್ಕೂಲ್ ಹುಡುಗಿ ಜೊತೆ ಅಷ್ಟು ಗಂಭೀರವಾಗಿ ಮಾತಾಡ್ತಿದ್ದರಲ್ಲ ಅಂತ ಈಗ ನೆನಪಿಸಿಕೊಳ್ತಿದ್ದೇನೆ. ನಂತರ ಅಂತಹ ಹೇಳಿಕೊಳ್ಳೋ ಸಂಪರ್ಕವೇನೂ ಇರಲಿಲ್ಲ. ಆದರೆ 2015ರಲ್ಲಿ ನಾನು ವಿಜಯ ಕರ್ನಾಟಕ ಅಂಕಣ ಆರಂಭಿಸಿದಾಗ ಆ ಅವಳೇ ಈ ಇವಳು ಅಂತ ಊಹಿಸಿ, ಚಾಮರಾಜ ನಗರದ ವರದಿಗಾರರನ್ನು ಕೇಳಿ ಖಾತ್ರಿ ಮಾಡಿಕೊಂಡು ಫೋನ್‌ ಮಾಡಿದರು. ಆಮೇಲೆ ಆಗಾಗ ಮಾತಾಡುತ್ತಿದ್ದರು.

ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಧ್ರುವನಾರಾಯಣ್

ಅವರು ಫೋನ್‌ ಮಾಡುತ್ತಿದ್ದುದು ಅವರಿಗೆ ವ್ಯವಸ್ಥೆಯ ಬಗ್ಗೆ ಬೇಸರವಾದಾಗ, ಒಂದು ಸಣ್ಣ ಅಸಹಾಯಕತೆ ಕಾಡಿದಾಗ, ಎಷ್ಟು ಕೆಲಸ ಮಾಡಿದರೂ ಜಾತಿಯ ಕಾರಣಕ್ಕೆ , ಇನ್ಯಾವ್ದೋ ಕಾರಣಕ್ಕೆ ಕ್ಷೇತ್ರದ ಜನ ಅವರನ್ನು ಸಂಪೂರ್ಣ ಒಪ್ಪದಿದ್ದಾಗ, ಸ್ವಲ್ಪ ಹೆಚ್ಚೇ ಖಡಕ್ ಆಗಿರುವ ಚಾಮರಾಜನಗರದ ದಲಿತರನ್ನೂ ಅನಿವಾರ್ಯವಾಗಿ ಲಿಂಗಾಯತರನ್ನೂ ಹೊಂದಿಸಿಕೊಳ್ತಾ, ಒಮ್ಮೊಮ್ಮೆ ಇಬ್ಬರನ್ನೂ ಪೂರ್ಣ ಸಮಾಧಾನಿಸಲಾಗದೆ ಸದಾ ಒಂದು ಬಗೆಯ ಒದ್ದಾಟದಲ್ಲೇ ಇರುತ್ತಿದ್ದರು. ಫೋನಿನಲ್ಲಿ ಬೇಸರಿಸಿಕೊಳ್ಳುತ್ತಿದ್ದರು. ಅದರಿಂದ ಸಮಸ್ಯೆ ಏನೂ ಬಗೆಹರಿಯುತ್ತಿರಲಿಲ್ಲ. ಒಂದು ನಿಟ್ಟುಸಿರಿನ ಲಾಭವಷ್ಟೆ.  ಆದರೆ ಎಂದೂ ಜನರಿಗೆ ಒಳಿತು ಮಾಡಬೇಕೆಂಬ ಮೂಲ ಉದ್ದೇಶದಿಂದ ಹಿಂದೆ ಸರಿಯಲಿಲ್ಲ. ಒಳಿತು ಮಾಡಿದ ಜನರೇ ಉಲ್ಟಾ ಹೊಡೆದಾಗಲೂ ಸಮಾಧಾನ ಕಳೆದುಕೊಳ್ಳಲಿಲ್ಲ.  ಎಂತಹ  ಸಂದರ್ಭದಲ್ಲೂ ಸಾರ್ವಜನಿಕಾಗಿ ಕೆಟ್ಟದಾಗಿ ಮಾತಾಡಲಿಲ್ಲ. ಸಜ್ಜನಿಕೆ, ಮೆಲುಮಾತು ಅವರ ರಕ್ತಗತ ಗುಣವಾಗಿತ್ತು. ʻʻನೀವ್ ನನ್ನ ಚಿಕ್ಕ ಹುಡುಗಿಯಿಂದ ನೋಡಿದೀರ. ಈಗ ಹೊಸದಾಗಿ ನೀವು ತಾವು ಅನ್ಬೇಡಿ ಸರ್ʼ ಅಂತ ಎಷ್ಟು ಹೇಳಿದರೂ ʻಆಗ ಬೇರೆ ಈಗ ಬೇರೆʼ ಅಂತಿದ್ದರು.

ಕಡೆಯದಾಗಿ ಅವರು ಸಿಕ್ಕಿದ್ದು ರಾಹುಲ್ ಗಾಂಧಿಯ ಭಾರತ್ ಜೋಡೋ ಸಮಯದಲ್ಲಿ. ಯಾವ್ದೋ ವಿಷಯಕ್ಕೆ ಅವ್ರ ಮನೆಗೆ ಹೋಗಬೇಕಾದೋಳು, ಇಲ್ಲೆ ಸಿಕ್ತೀರಲ್ಲ ಆದ್ರೆ ಮಾತಾಡಣ ಅಂದಿದ್ದೆ.  ರಾಹುಲ್ ಬರುವುದು ಎರಡು ತಾಸು ತಡವಾದ್ದರಿಂದ ನಮಗೆ ಸಾಕಷ್ಟು ಸಮಯ ಸಿಕ್ಕಿತ್ತು.  ಮಲೆಮಹದೇಶ್ವರ ಬೆಟ್ಟ, ಹುಲಿ ಸಂರಕ್ಷಣೆ, ಚುನಾವಣೆ ಹೀಗೆ ಅನೇಕ ವಿಷಯಗಳನ್ನು ಮಾತಾಡಿದರು.

ವಿಸ್ತಾರ ನ್ಯೂಸ್ ಚಾನೆಲ್ ಸೇರುವ ಬಗ್ಗೆ ಹೇಳಿದೆ. ನೀವು ಹರಿಪ್ರಕಾಶ್ ಚಾನೆಲ್‌ಗೆ ಹೋಗಿ. ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸ ಇದೆ ಅವ್ರಿಗೆ ಅಂದಿದ್ದರು. ಅಷ್ಟು ಜನಜಂಗುಳಿಯ ನಡುವೆಯೂ ತಮ್ಮ ಕ್ಷೇತ್ರದ ಹತ್ತು ರೈತರನ್ನು ಕರೆಸಿ ರಾಹುಲ್ ಭೇಟಿ‌ ಮಾಡಿಸಿ ಮಾತಾಡಿದರು. ಯಾತ್ರೆಗೆ ಸಂಬಂಧಿಸಿದಂತೆ ಯಾರೂ ಸಂಪರ್ಕಕ್ಕೆ ಸಿಗದಿದ್ದರೆ ಧ್ರುವನಾರಾಯಣ್ ಅವ್ರು ಮಾತ್ರ ಸಿಗುತ್ತಿದ್ದರು. ಸರ್ ಒಂಚೂರು ಅವ್ರ ನಂಬರ್ ಬೇಕಲ್ಲ, ಇವ್ರ ನಂಬರ್ ಬೇಕಲ್ಲ ಅಂದರೆ ʻಕಳಿಸ್ತೀನಿರಿʼ ಅಂತಿದ್ದರು. ತಾನೊಬ್ಬ ಎಂಪಿ. ಪಕ್ಷದ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿ ಅನ್ನುವ ಭಾರಗಳೇ ಇರದ ವಿರಳಾತಿವಿರಳ ಸರಳಜೀವಿ ಧ್ರುವನಾರಾಯಣ.

ನಮ್ಮ ವಿಸ್ತಾರ ನ್ಯೂಸ್ ಲಾಂಚ್ ದಿನ ಬಂದವರನ್ನೆಲ್ಲ ಮಾತಾಡಿಸುವ ತರಾತುರಿಯ ನಡುವೆಯೂ ವೇದಿಕೆ ಇಳಿದು ತಮ್ಮಷ್ಟಕ್ಕೆ ಹೊರಡುತ್ತಿದ್ದವರನ್ನು ಹುಡುಕಿ ಹೋದೆ. ‘ಬೊಮ್ಮಾಯಿ ಅವರು ತಾವಾಗಿಯೇ ಕರೆದು ವಿಶ್ವಾಸದಿಂದ ಮಾತಾಡಿಸಿದ್ರು’ ಅಂತ ಹೇಳ್ತಾ ಬೇರೆ ಪಕ್ಷಗಳ ನಾಯಕರೂ ತಮ್ಮ ಬಗ್ಗೆ ವಿಶೇಷ ಪ್ರೀತಿ ತೋರಿಸುವ ಬಗ್ಗೆ ಖುಷಿಪಟ್ಟಿದ್ದರು.

ಬಹುಶಃ ಎರಡು ತಿಂಗಳ ಹಿಂದೆ ಫೋನು ಮಾಡಿದ್ದರು. ಚುನಾವಣೆಗೆ ನಿಜವಾಗಿಯೂ ಈ ಸೋಶಿಯಲ್ ಮೀಡಿಯಾಗಳು ಸಹಾಯ ಮಾಡ್ತವಾ? ನಮ್ ಹುಡುಗರು ಏನೇನೋ ಮಾಡ್ತವೆ. ನಮ್ ಕೆಲ್ಸ ನಮ್ ಫೋಟೋ ನಾವೇ ಹಾಕೊಳೋದಾ ಅಂತ ಕೇಳಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಪೇಜುಗಳನ್ನು ನಿರ್ವಹಿಸಲು ಟೀಮ್ ಗಳನ್ನೆ ಕಟ್ಟಿ ನಡೆಸುತ್ತಿರುವ ಚಾಲಾಕಿ ರಾಜಕಾರಣಿಗಳ ನಡುವೆ ʻಕೆಲ್ಸ ಮಾಡಿದ್ರೆ ಗೊತ್ತಾಗತ್ತಲ್ವೇನ್ರೀ ಜನಕ್ಕೆ? ಫೋಟೋ ಹಾಕಿದ್ರೇನಾಗತ್ತೆʼ ಅನ್ನುವ ಧ್ರುವನಾರಾಯಣ ಬಗ್ಗೆ ಅತ್ಯಂತ ಹೆಮ್ಮೆಯಾಗಿತ್ತು. ಆದರೂ ಅವರ ಮರಿಕಾರ್ಯಕರ್ತರು ಫೋನು ಮಾಡಿ ಅವರ ಪೇಜು ಮಾಡೋ ಬಗ್ಗೆ ಉತ್ಸಾಹ ತೋರಿದ್ದರು. ಅದೇನು ಹಾಕುತ್ತಿದ್ದರೋ ಗಮನಿಸಿರಲಿಲ್ಲ. ಈಗ ಆ ಪೇಜು ತೆರೆದು ಅಲ್ಲಿ ಶ್ರದ್ಧಾಂಜಲಿ ಬರಹಗಳನ್ನು ಹಾಕುವುದನ್ನು ನೋಡಲಾರದೇ ಸುಮ್ಮನಿದ್ದೇನೆ.

ಬೆಳಗ್ಗೆ ರೈಲಿನಲ್ಲಿ ಜಾತಿ ವ್ಯವಸ್ಥೆಯ ಕುರಿತ ಪುಸ್ತಕ ತೆರೆದು ಕೂತ ಹೊತ್ತಲ್ಲಿ ತಂಗಿ ಫೋನು ಮಾಡಿ ಈ ಕೆಟ್ಟ ಸುದ್ದಿ ಹೇಳಿ ನೊಂದುಕೊಂಡಳು. ರಾಜಕಾರಣ ದಿನೇದಿನೆ ಕಾಸು ಹೆಚ್ಚಿಸಿಕೊಳ್ತಾ ಮೌಲ್ಯ ಕಳೆದುಕೊಳ್ತಾ ಹೋಗ್ತಿರೋ ಈ ಸಮಯದಲ್ಲಿ, ಒಬ್ಬ ರಾಜಕಾರಣಿ ಹೀಗೂ ಇರಬಹುದು ಕಣ್ರಪ್ಪಾ ಅಂತ ಉದಾಹರಣೆಯಾಗಿ ತೋರಿಸಲು ಇದ್ದ ವ್ಯಕ್ತಿ ನಮ್ಮ‌ ಧ್ರುವನಾರಾಯಣ್ ಸರ್. ಅವರ ಸಾವು ವೈಯಕ್ತಿಕ ಆಘಾತದ ಜೊತೆಗೆ ಅನೇಕ ಪ್ರಶ್ನೆಗಳನ್ನೂ ಹುಟ್ಟಿಸಿತು. ಕೋವಿಡ್ ನಂತರ ಎಷ್ಟೊಂದು ಹೃದಯಾಘಾತಗಳಾಗುತ್ತಿವೆ. ಇದಕ್ಕೆ ಲಸಿಕೆ ಕಾರಣವೆಂದು ಕೆಲವು ದೇಶಗಳ ವರದಿಗಳು ಹೇಳುತ್ತಿವೆ. ಇಲ್ಲಿಯೂ ಹಾಗೇನಾದರೂ ಆಗುತ್ತಿದೆಯ? ಅಥವಾ ಇಷ್ಟೊಂದು ಹೃದಯಾಘಾತಗಳ ಹೆಚ್ಚಳಕ್ಕೆ ಕಾರಣವೇನು? ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.
ಅಮೂಲ್ಯ ಜೀವಗಳನ್ನು ಕಳೆದುಕೊಂಡಾಗ ಕಳವಳವಾಗುತ್ತದೆ.

ಧ್ರುವನಾರಾಯಣ್ ಸರ್, ಈ ದೇಶದಲ್ಲಿ ಯಾವ ಜಾತಿಯ ಮನೆಯಲ್ಲಿ ಹುಟ್ಟಿದ್ದೇವೆ ಎಂಬುದು ಸಾರ್ವಜನಿಕ ಜೀವನದಲ್ಲಿ, ಅದರಲ್ಲೂ ರಾಜಕಾರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅದೆಲ್ಲವನ್ನೂ ಮೀರಿ‌ ಮನುಷ್ಯರಾಗಿದ್ದವರು ನೀವು. ನಿಮ್ಮನ್ನು ನೋಯಿಸಿದವರನ್ನೂ ದ್ವೇಷಿಸದವರು. ಬುದ್ಧ ಅಂಬೇಡ್ಕರ್ ಮಾತನ್ನು ಬರಿಯ ಬಾಯಲ್ಲಿ ಆಡದವರು. ಮೊದಲು ಏನಾಗಿದ್ದಿರೋ ಕಡೆ ಉಸಿರಿನವರೆಗೂ ಅದೇ ಆಗಿದ್ದವರು. ನಿಮ್ಮ ಕ್ಷೇತ್ರ ಮತ್ತು ಕರ್ನಾಟಕದ ಇತಿಹಾಸದಲ್ಲಿ, ಮಾದರಿ‌ ರಾಜಕಾರಣಿಯಾಗಿ, ಮುಂದಿನ ಹಳವಂಡಗಳಿಗೆ ತೆರೆದು ತೋರಿಸಬಹುದಾದ ಒಳ್ಳೆಯ ಪಾಠವಾಗಿರುತ್ತೀರಿ. ನನ್ನ ನೆನಪಿನ ಪುಟಗಳಲ್ಲೂ ಒಂದು ಅಧ್ಯಾಯವಾಗಿ ಇರುತ್ತೀರಿ.
ನಮಸ್ಕಾರ ಸರ್. ಹೋಗಿ ಬನ್ನಿ..

ಇದನ್ನೂ ಓದಿ R Dhruvanarayana : ನನ್ನ ಮಾರ್ಗದರ್ಶಕ, ಸ್ನೇಹಿತ, ಹಿತೈಷಿಯಾಗಿದ್ದ ಧ್ರುವ ನಾರಾಯಣ; ಹರಿಪ್ರಕಾಶ್‌ ಕೋಣೆಮನೆ ಕಂಬನಿ

Exit mobile version