ಮೈಸೂರು: ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬ ಮಾತಿಗೆ ಪೂರಕವೋ ಎಂಬಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ (R Dhruvanarayana) ಒಳ್ಳೆಯತನಗಳು ಸಾವಿನ ಬಳಿಕ ಇನ್ನಷ್ಟು ಗಾಢವಾಗಿ ಗೋಚರಿಸಲು ಆರಂಭಿಸಿವೆ. ಪಕ್ಷದ ಒಳಗೂ ಹೊರಗೂ ಅಜಾತಶತ್ರುವಾಗಿ ಮೆರೆದಿದ್ದ ಅವರಿಗೆ ಪ್ರತಿಪಕ್ಷಗಳಲ್ಲೂ ಅಪಾರ ಅಭಿಮಾನಿಗಳಿದ್ದರು. ಪ್ರತಿಪಕ್ಷದ ನಾಯಕರು ಆಡಿದ ಪ್ರತಿ ಮಾತಿನಲ್ಲೂ ಅಪಾರವಾದ ಭಾವನೆಗಳು ತುಂಬಿದ್ದವು. ಕಾಂಗ್ರೆಸ್ ಪಕ್ಷದ ಪಾಲಿಗಂತೂ ಅವರ ನಿಧನ ನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟವಾಗಿ ಪರಿಣಮಿಸಿರುವುದು ಸುಳ್ಳಲ್ಲ.
ಮೈಸೂರಿನಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ಸಂದರ್ಭದಲ್ಲಿ ಸಂಸದ ಪ್ರತಾಪಸಿಂಹ ಅವರು ಆಡಿತ ಒಂದೊಂದು ಮಾತೂ ಧ್ರುವನಾರಾಯಣ ಅವರ ಸಜ್ಜನಿಕೆ, ಸ್ನೇಹಪರತೆಗೆ ಸಾಕ್ಷಿಯಾಗಿತ್ತು. ಧ್ರುವನಾರಾಯಣ್ ಸಾವಿನ ಸುದ್ದಿ ಮನಸಿಗೆ ಬೇಸರವಾಯಿತು ಎಂದು ಹೇಳುತ್ತಲೇ ಸಂಸದ ಪ್ರತಾಪ್ ಸಿಂಹ ಕಣ್ಣೀರಿಟ್ಟರು. ʻʻಧ್ರುವನಾರಾಯಣ್ ಅವರು ಹಲವು ಬಾರಿ ನನಗೆ ಗೈಡ್ ಮಾಡಿದ್ದಾರೆ. ನಾನು ಬೇರೆ ಪಕ್ಷದವನು ಎಂದು ನನ್ನನ್ನು ಟ್ರೀಟ್ ಮಾಡಲೇ ಇಲ್ಲ. ಮೊದಲ ಬಾರಿ ಸಂಸದನಾದಾಗ ನನ್ನನ್ನು ಕರೆದು ಸಂಸದೀಯ ನಡಾವಳಿಗಳು, ಸಭೆಗಳನ್ನು ನಡೆಸುವ ರೀತಿ ಎಲ್ಲವನ್ನು ವಿವರಿಸಿದ್ದರು. ದಿಶಾ ಸಭೆಗಳನ್ನು ಹೇಗೆ ನಡೆಸಬೇಕು, ಅನುದಾನ ತರುವುದು ಹೇಗೆ, ಅದರ ಹಂಚಿಕೆ ಹೇಗೆ ಎಂದೆಲ್ಲ ಹೇಳಿಕೊಟ್ಟಿದ್ದರು ಎಂದು ಕಣ್ಣೀರು ಹಾಕುತ್ತಲೇ ಹೇಳಿದರು.
ಅದೊಂದು ಸಾರಿ ಕಾರಿನಲ್ಲಿ ಹೋಗುತ್ತಿದ್ದಾಗ ನಿಲ್ಲಿಸಿ ನನ್ನ ಹತ್ತಿರ ಬಂದು ಒಳ್ಳೆಯ ಕೆಲಸ ಮಾಡುತ್ತಿದೀಯಾ ಎಂದು ಬೆನ್ನು ತಟ್ಟಿದ್ದರು. ನಿಜವೆಂದರೆ ನನ್ನ ಪಕ್ಷದವರು ಕೂಡಾ ಈ ರೀತಿ ಪ್ರೋತ್ಸಾಹಿಸಿರಲಿಲ್ಲ. ಇವತ್ತು ಚಾಮರಾಜನಗರ ಭಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ವಸತಿ ಶಾಲೆಗಳು ಬಂದಿವೆ ಎಂದರೆ ಅದಕ್ಕೆ ಕಾರಣ ಧ್ರುವನಾರಾಯಣ ಸಾಹೇಬರು ಎಂದು ಹೇಳಿದರು ಪ್ರತಾಪ್ ಸಿಂಹ.
ವಿಧಿಯ ಮುಂದೆ ನಾವು ಏನೂ ಅಲ್ಲ ಎಂದ ಸೋಮಣ್ಣ
ವಿಧಿಯ ತೀರ್ಮಾನದ ಮುಂದೆ ನಮ್ಮ ತೀರ್ಮಾನ ಏನಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಈ ಸುದ್ದಿ ಕೇಳಿ ನಮಗೆಲ್ಲ ಅಘಾತವಾಯಿತು ಎಂದು ಬೇಸರಿಸಿದರು ಚಾಮರಾಜನಗರ ಉಸ್ತುವಾರಿ ಸಚಿವ ವಿ. ಸೋಮಣ್ಣ. ನಮಗೂ ಮತ್ತು ಧ್ರುವನಾರಾಯಣ್ ಇಬ್ಬರಿಗೂ ಅವಿನಾಭಾವ ಸಂಬಂಧ ಎಂದು ಹೇಳಿದರು.
ಇದನ್ನೂ ಓದಿ : R Dhruvanarayana : ಹೃದಯಾಘಾತವೊಂದೇ ಅಲ್ಲ, ಅಜಾತಶತ್ರುವಿಗೆ ಮಾರಣಾಂತಿಕವಾಗಿದ್ದು ಅಲ್ಸರ್!