Site icon Vistara News

R Dhruvanarayana : ನನ್ನ ಮಾರ್ಗದರ್ಶಕ, ಸ್ನೇಹಿತ, ಹಿತೈಷಿಯಾಗಿದ್ದ ಧ್ರುವ ನಾರಾಯಣ; ಹರಿಪ್ರಕಾಶ್‌ ಕೋಣೆಮನೆ ಕಂಬನಿ

dhruva

#image_title

ಹರಿಪ್ರಕಾಶ್‌ ಕೋಣೆಮನೆ, ಸಿಇಒ ಮತ್ತು ಪ್ರಧಾನ ಸಂಪಾದಕ, ವಿಸ್ತಾರ ನ್ಯೂಸ್

ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು,
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲ ಸಂಗಮದೇವನೆಂತೊಲಿವನಯ್ಯ?

ಎಂಬ ಮಾತಿಗೆ ಅನುಗುಣವಾಗಿದ್ದವರು ಧ್ರುವ ನಾರಾಯಣ.
ಅವರೊಂದಿಗೆ ಅತ್ಯಂತ ಆಪ್ತ ಒಡನಾಟ ಹೊಂದಿದ್ದವನಾಗಿ ಈ ಮಾತನ್ನು ಖಡಾಖಂಡಿತವಾಗಿ ಹೇಳಬಲ್ಲೆ. ನನಗಿಂತ ವಯಸ್ಸಿನಲ್ಲಿ ಹಿರಿಯರಾದರೂ ಅತ್ಯಂತ ಸಹಜವಾಗಿ, ಯಾವ ಹಮ್ಮುಬಿಮ್ಮು ಇಲ್ಲದೇ ನನ್ನ ಜತೆಗೆ ಮುಕ್ತವಾಗಿ ಮಾತುಕತೆ ನಡೆಸುತ್ತಿದ್ದರು. ಅವರ ಜತೆಗೆ ಪ್ರತಿ ಬಾರಿ ಮಾತನಾಡಿದಾಗಲೂ ಇಂಥ ರಾಜಕಾರಣಿ ಇರುತ್ತಾರೆಯೇ ಎಂಬ ಅಚ್ಚರಿಯೂ, ಇರುವರಲ್ಲ ಎಂಬ ಸಮಾಧಾನವೂ ಉಂಟಾಗುತ್ತಿತ್ತು. ಅವರ ಪ್ರತಿ ಮಾತಿನಲ್ಲೂ ಸಮಾಜದೆಡೆಗೆ ವಿಪರೀತ ಕಾಳಜಿ, ತುಡಿತ ವ್ಯಕ್ತವಾಗುತ್ತಿತ್ತು.

ದಲಿತ ಸಮುದಾಯದಿಂದ ಬಂದಿದ್ದ ಧ್ರುವನಾರಾಯಣ್, ಆ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದ ಹೊತ್ತಲ್ಲೇ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೂ ಕನಸು ಕಾಣುತ್ತಿದ್ದರು, ದುಡಿಯುತ್ತಿದ್ದರು.

ಏಳಿಗೆಗೆ ಶಿಕ್ಷಣವನ್ನೇ ಮಂತ್ರ ಮಾಡಿಕೊಂಡವರು

ದಲಿತ ಸಮುದಾಯದ ಏಳಿಗೆಗೆ ʻಶಿಕ್ಷಣ ಸಂಘಟನೆ ಹೋರಾಟ” ಎಂಬುದು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ನೀಡಿದ ಮಂತ್ರ. ಈ ಪೈಕಿ ಧ್ರುವನಾರಾಯಣ ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣ. ಒಂದು ಸಮುದಾಯ ಸರಿಯಾಗಿ ಶಿಕ್ಷಣ ಪಡೆದರೆ, ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂಬ ವಿಶಾಲ ಆಲೋಚನೆಯನ್ನು ಮೈಗೂಡಿಸಿಕೊಂಡಿದ್ದರು. ಹಾಗಾಗಿಯೇ ಅವರು ಹಳೆ ಮೈಸೂರು ಭಾಗದಲ್ಲಿ ದಲಿತ ನಾಯಕ ಎಂಬ ಹಣೆಪಟ್ಟಿ ಮೀರಿ, ಲಿಂಗಾಯತರೂ ಸೇರಿದಂತೆ ಎಲ್ಲ ಸಮಾಜದ ನಾಯಕರಾಗಿ ಬೆಳೆಯುತ್ತಿದ್ದರು.

ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್ ಬಳಿಕ ಮೈಸೂರು ಭಾಗದಲ್ಲಿ ಪ್ರಗತಿಪರ ರಾಜಕಾರಣಿಯಾಗುವ ಭರವಸೆ ಮೂಡಿಸಿದ್ದರು. ದೇವರಾಜ ಅರಸು ಅವರ ಒಳಗೊಳ್ಳುವಿಕೆ, ರಾಜಶೇಖರಮೂರ್ತಿ ಅವರ ಪ್ರಾಮಾಣಿಕತೆ, ರಾಚಯ್ಯ ಅವರ ಸಜ್ಜನಿಕೆ- ಎಲ್ಲವನ್ನೂ ಹದವಾಗಿ ಮೈಗೂಡಿಸಿಕೊಂಡಿದ್ದ ಧ್ರುವನಾರಾಯಣ್, ಜನನಾಯಕರಾಗಿ ರೂಪುಗೊಳ್ಳುತ್ತಿದ್ದರು.

ಸ್ವತಃ ಕೃಷಿ ಪದವೀಧರರಾಗಿದ್ದ ಧ್ರುವ ನಾರಾಯಣ, ಸಹಜವಾಗಿಯೇ ರೈತರ ಸಮಸ್ಯೆಗಳ ಕುರಿತು ಅಪಾರ ಕಾಳಜಿ ಹೊಂದಿದ್ದರು. ಡಾ. ಬಿ.ಆರ್. ಅಂಬೇಡ್ಕರರು ದಲಿತ ಸಮುದಾಯದವರಾದರೂ, ಅವರಿಗೆ ಸಂವಿಧಾನ ರಚನೆಯ ಅವಕಾಶ ಲಭಿಸಿದಾಗ ಅವರು ಇಡೀ ಭಾರತದ, ಎಲ್ಲ ಭಾರತೀಯರ ಕಲ್ಯಾಣಕ್ಕಾಗಿ ಸಂವಿಧಾನ ರಚಿಸಿದರು. ಅಂತೆಯೇ ಅಧಿಕಾರಕ್ಕೆ ಬರುವ ಮುನ್ನವೂ, ನಂತರವೂ ಎಲ್ಲ ಸಮುದಾಯಗಳ ಏಳಿಗೆಯನ್ನೇ ಬಯಸಿದವರು ಧ್ರುವ ನಾರಾಯಣ.

ಮಾತು ಮೃದುವಾದರೂ ನಿರ್ಧಾರಗಳು ಮಾತ್ರ ದೃಢ

ಇಂದು ಎದುರಾಳಿ ರಾಜಕಾರಣಿಗಳನ್ನು ವಾಚಾಮಗೋಚರವಾಗಿ ನಿಂದಿಸುವ, ಅವರನ್ನು ರಾಕ್ಷಸನಿಂದ ನೀಚನವರೆಗೆ ಮನಬಂದಂತೆ ಹೋಲಿಕೆ ಮಾಡುವುದು ನೋಡುತ್ತಿದ್ದೇವೆ. ಒಮ್ಮೆ ಮಾತಿಗೆ ಬೆಲೆ ನೀಡುತ್ತಿದ್ದ ಭಾರತದ ರಾಜಕಾರಣದಲ್ಲಿ ಮಾತು ತನ್ನ ಮೌಲ್ಯವನ್ನೇ ಕಳೆದುಕೊಂಡಿದೆ. ಆದರೆ ಇದಕ್ಕೆ ಅಪವಾದದಂತಿದ್ದವರು ಧ್ರುವ ನಾರಾಯಣ.

ರಾಜ್ಯದಲ್ಲಿ ಚುನಾವಣೆ ಕಾವು ಏರಿ ವಾಗ್ದಾಳಿಗಳು ನಡೆಯುತ್ತಿದ್ದರೂ ಒಮ್ಮೆಯೂ ಧ್ರುವ ನಾರಾಯಣ ಅವರ ಬಾಯಿಂದ ಅಂತಹ ಮಾತನ್ನು ಕೇಳಲು ಸಾಧ್ಯವಿರಲಿಲ್ಲ. ರಾಜಕಾರಣವನ್ನು ಶುದ್ಧಗೊಳಿಸಬೇಕು, ಸಭ್ಯರು ರಾಜಕಾರಣಕ್ಕೆ ಬರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದನ್ನು ಎಲ್ಲಿಂದ ಆರಂಭಿಸಬೇಕು? ಧ್ರುವ ನಾರಾಯಣ ಅಂಥವರು ಶುದ್ಧ ರಾಜಕಾರಣದ ಅಭಿಯಾನದ ಆರಂಭದ ಬಿಂದುವಾಗಿ ನಮಗೆ ಲಭಿಸುತ್ತಿದ್ದರು. ಮಾತು ಎಷ್ಟು ಮೃದುವಾಗಿರುತ್ತಿತ್ತು. ಆದರೆ ಅವರ ನಿರ್ಧಾರಗಳು ಮಾತ್ರ ಅಷ್ಟೇ ಕಠಿಣವಾಗಿರುತ್ತಿದ್ದವು. ಹಾಗೆಯೇ ಅವರ ನಿರ್ಧಾರಗಳಲ್ಲಿ ಕಲ್ಮಷ, ಪೂರ್ವಾಗ್ರಹ ಲವಲೇಶವೂ ಇರುತ್ತಿರಲಿಲ್ಲ.

ಎಲ್ಲ ನಾಯಕರಿಗೆ ಸಲಹೆಗಾರ ಇವರು

ಇದೇ ಕಾರಣಕ್ಕೆ, ಕಾಂಗ್ರೆಸ್ ಪಕ್ಷವಷ್ಟೆ ಅಲ್ಲದೆ ಬೇರೆ ಪಕ್ಷದ ನಾಯಕರು, ಮುಖಂಡರೂ ಅವರಲ್ಲಿ ಸಲಹೆಗಳನ್ನು ಕೇಳುತ್ತಿದ್ದರು. ಚುನಾವಣೆಯಲ್ಲಿ ಜಯ ಗಳಿಸುವುದರಿಂದ, ಯೋಜನೆಯ ಅನುಷ್ಠಾನದವರೆಗೆ ಧ್ರುವ ನಾರಾಯಣ ಅವರಿಂದ ಸಲಹೆ ಪಡೆಯುತ್ತಿದ್ದರು. ವಿಧಾನಮಂಡಲದಲ್ಲಿ ಬೇರೆ ಪಕ್ಷದ ನಾಯಕರು ರೈತರ ಕುರಿತು, ಸಮಾಜದ ಕುರಿತು ಕಾಳಜಿಯಿಂದ ಮಾತನಾಡಿದರೆ ದೂರವಾಣಿ ಕರೆ ಮಾಡಿ, ಎದುರಿಗೆ ಸಿಕ್ಕಾಗ ಮನಃಪೂರ್ವಕವಾಗಿ ಅಭಿನಂದಿಸುತ್ತಿದ್ದರು.

1983ರಲ್ಲಿ ಅಂದರೆ ನಾಲ್ಕು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾದವರು ಎಂದಿಗೂ ಪಕ್ಷಕ್ಕೆ ನಿಷ್ಠರಾಗಿದ್ದವರು. ಇತ್ತೀಚಿನ ಸಮಯದಲ್ಲಂತೂ ಕರ್ನಾಟಕ ಕಾಂಗ್ರೆಸಿನ ಅತ್ಯಂತ ಸದೃಢ ಸ್ತಂಭದಂತೆ ಅವರು ತಮ್ಮನ್ನು ತಾವು ರೂಪಿಸಿಕೊಂಡಿದ್ದರು. ಶುದ್ಧಹಸ್ತ, ಕಳಂಕರಹಿತ ರಾಜಕಾರಣಿ, ಸಜ್ಜನ ರಾಜಕಾರಣಿ, ಸರಳ ವ್ಯಕ್ತಿತ್ವ… ಹೀಗೆ ಯಾವುದೇ ಉತ್ತಮ ಸಂಗತಿಗಳನ್ನು ಪ್ರಸ್ತಾಪಿಸಿದರೂ ಅದು ಧ್ರುವ ನಾರಾಯಣ ಅವರಿಗೆ ಒಪ್ಪುವಂತಿತ್ತು.

ಅಂಕಣಗಳನ್ನು ಓದಿ ಪ್ರತಿಕ್ರಿಯಿಸುತ್ತಿದ್ದರು, ಲೈವ್‌ ಬಂದಿದ್ದರು

ರಾಜಕಾರಣದ ಒತ್ತಡಗಳ ನಡುವೆಯೂ ನನ್ನ ಅಂಕಣಗಳನ್ನು ಓದಿ ಪ್ರತಿಕ್ರಿಯಿಸುತ್ತಿದ್ದರು. ಮೆಚ್ಚಿದ್ದೂ ಉಂಟು, ಚರ್ಚಿಸಿದ್ದು , ವಾದಿಸಿದ್ದು, ಸಲಹೆ ಕೊಟ್ಟದ್ದೂ ಉಂಟು. ಪ್ರಜಾಪ್ರಭುತ್ವಕ್ಕೆ ಯಾವುದೇ ಕಾರಣಕ್ಕೂ ಯಾರಿಂದಲೂ ಚ್ಯುತಿ ಬರಬಾರದು ಎಂಬ ನನ್ನ ಗಟ್ಟಿನಿಲುವು ಅವರದೂ ಆಗಿತ್ತು. ಅದೇ ಕಾರಣಕ್ಕೆ ಅವರು ನನ್ನ ಪಾಲಿನ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು. ನಾನು ವಿಸ್ತಾರ ಚಾನೆಲ್ ಆರಂಭಿಸುವ ಮಾತಾಡಿದಾಗ ಅತ್ಯಂತ ಸಂತೋಷಪಟ್ಟಿದ್ದರು. ಬಂದು ಹಾರೈಸಿದರು. ಚಾನೆಲ್ ನಲ್ಲಿ ಕೂಡ ಅನೇಕ ಸಲ ಲೈವ್ ಬಂದಿದ್ದರು.

ಅವರ ಸಜ್ಜನಿಕೆ, ಪ್ರಜಾಪ್ರಭುತ್ವವಾದಿ ನಡೆ, ಶುದ್ಧ ರಾಜಕಾರಣ ಮಾದರಿಯಾಗಲಿ

ಪತ್ರಕರ್ತನಾಗಿ ನನ್ನ ಎರಡು ದಶಕಗಳ ಅನುಭವದಲ್ಲಿ ಅನೇಕ ರಾಜಕಾರಣಿಗಳು‌ ಮತ್ತು ಅವರ ರಾಜಕೀಯ ಪ್ರಯಾಣವನ್ನೂ ಕಂಡಿದ್ದೇನೆ. ಆರಂಭದಲ್ಲಿದ್ದ ಶುದ್ಧ ರಾಜಕಾರಣದ, ಆದರ್ಶ ನಿಲುವುಗಳನ್ನು ಕಡೆಯ ಕ್ಷಣದವರೆಗೂ ನಿಷ್ಠೆ ಮತ್ತು ಗಟ್ಟಿಯಾಗಿ ಉಳಿಸಿಕೊಂಡು ಬಂದ ಕೆಲವು ರಾಜಕಾರಣಿಗಳನ್ನು ಕಂಡಿದ್ದೇನೆ. ಅದರಲ್ಲಿ ಧ್ರುವನಾರಾಯಣ ಅತ್ಯಂತ ಪ್ರಮುಖರು. ನಂಜನಗೂಡಿನಿಂದ ಚುನಾವಣಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು.

ಇತ್ತೀಚೆಗೆ ನಡೆದ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಧ್ರುವ ನಾರಾಯಣ ಮತ್ತು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಜತೆಗಿದ್ದರು.

ಇಷ್ಟು ಬೇಗ ಅವರ ಕುರಿತು ಶ್ರದ್ಧಾಂಜಲಿ ಲೇಖನವೊಂದನ್ನು ಬರೆಯುತ್ತೇನೆ ಎಂದು ಊಹಿಸಿರಲಿಲ್ಲ. ವಿಧಿಯು ಧ್ರುವ ನಾರಾಯಣ ಅವರನ್ನು ಕಸಿದುಕೊಂಡಿದೆ. ಅವರು ಬಿಟ್ಟು ಹೋದ ಸಜ್ಜನಿಕೆ, ಪ್ರಜಾಪ್ರಭುತ್ವ ಪರವಾದ ನಡೆ, ಶುದ್ಧ ರಾಜಕಾರಣದ ಉದಾಹರಣೆಯಾಗಿ ನಮ್ಮನ್ನೆಲ್ಲ ಮುನ್ನಡೆಸಲಿ. ಅದರಲ್ಲೂ ಚುನಾವಣೆಯ ಸಮಯದಲ್ಲಿ ಧ್ರುವ ನಾರಾಯಣ ಅವರ ವ್ಯಕ್ತಿತ್ವ, ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಅಗತ್ಯವಾದದ್ದು. ಅಂತಹದ್ದು ಭವಿಷ್ಯದಲ್ಲಿ ಸಾಧ್ಯವಾಗಲಿ, ಮತ್ತಷ್ಟು ಚರ್ಚೆಗಳು ಬಾಕಿ ಇರುವಾಗಲೇ ಅಗಲಿದ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಕಡೆಯದಾಗಿ ಸುತ್ತೂರು ಜಾತ್ರೆಯಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. “ಚಾನೆಲ್ ಚೆನ್ನಾಗಿ ಬರುತ್ತಿದೆ. ಬೇರೆಯವರ ಪ್ರತಿಕ್ರಿಯೆ ಹೇಗಿದೆ? ನಿಮ್ಮಂಥವರ ಪ್ರಯತ್ನಗಳು ಯಶಸ್ವಿಯಾಗಬೇಕು. ನಾನು ಕಚೇರಿಗೆ ಬರುವೆ…,’ ಎಂದು ಶುಭ ಹಾರೈಸಿದ್ದರು. ಆದರೆ, ಅದೆಲ್ಲದಕ್ಕೂ ಮುನ್ನವೇ ನಿರ್ಗಮಿಸಿದ್ದಾರೆ. ಸಜ್ಜನ ರಾಜಕಾರಣಿಯೊಬ್ಬರ ಅಕಾಲಿಕ ನಿರ್ಗಮನ ನಿಜಕ್ಕೂ ಶೂನ್ಯವೇ. ಧ್ರುವನಾರಾಯಣ ಅವರ ನಡವಳಿಕೆ, ಆದರ್ಶ ಈಗಿನ ರಾಜಕಾರಣಿಗಳಿಗೆ ಮಾದರಿಯಾಗಲಿ.

ಇದನ್ನೂ ಓದಿ : R Dhruvanarayana : ಸಭ್ಯತೆಯ ಸವ್ಯಸಾಚಿ, ಶುದ್ಧ- ಮೌಲ್ಯಾಧರಿತ ರಾಜಕಾರಣದ ʻಧ್ರುವʼ ನಕ್ಷತ್ರ ಕಣ್ಮರೆ

Exit mobile version