ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ (R Dhruvanarayana) ಅವರು ಮಣ್ಣಲ್ಲಿ ಮಣ್ಣಾದರು. ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಅವರನ್ನು ಕಳೆದೆರಡು ದಿನಗಳಿಂದ ಸಹಸ್ರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದುಕೊಂಡರು. ಇದೇ ವೇಳೆ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ನಾಯಕರ ಎದುರು ಧ್ರುವನಾರಾಯಣ ಅಭಿಮಾನಿಗಳು ಕಣ್ಣೀರಿಟ್ಟಿದ್ದು, ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದರು.
ಅಂತ್ಯಕ್ರಿಯೆಗೂ ಮುನ್ನ ರಾಜ್ಯ ಕಾಂಗ್ರೆಸ್ ನಾಯಕರ ಮುಂದೆ ಅಭಿಮಾನಿಗಳು ಕಣ್ಣೀರಿಟ್ಟು ಒತ್ತಾಯ ಮಾಡಿದಾಗ ಅಲ್ಲಿಯೇ ಇದ್ದ ಸಿದ್ದರಾಮಯ್ಯ, “ಆಯ್ತು ಸುಮ್ಮನಿರಿ ನಾನಿದ್ದೇನೆ ಎಂದು ಸಮಾಧಾನಪಡಿಸಿದರು. ಇನ್ನೊಂದು ಕಡೆ ಧ್ರುವನಾರಾಯಣ ಭಾವಚಿತ್ರದ ಪೇಪರ್ ತೋರಿಸಿ ಡಿ.ಕೆ. ಶಿವಕುಮಾರ್ ಹೊರಟರು.
ಮೈಸೂರು ಭಾಗದ ದಲಿತ ಸಮುದಾಯದ ಮೇಲೆ ಧ್ರುವನಾರಾಯಣ ಹಿಡಿತ ಸಾಧಿಸಿದ್ದರು. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಧ್ರುವನಾರಾಯಣ ಕುಟುಂಬವನ್ನು ಕೈ ಬಿಡುವುದಿಲ್ಲ ಎಂದು ಹೇಳಿದ್ದರು. ದರ್ಶನ್ ಧ್ರುವನಾರಾಯಣ ಸದ್ಯ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಪ್ರಾಕ್ಟಿಸ್ ಮಾಡುತ್ತಿದ್ದಾರೆ.
ಟಿಕೆಟ್ ಬಗ್ಗೆ ನೋ ಕಮೆಂಟ್ಸ್- ದರ್ಶನ್
ತಂದೆಯ ಅಂತ್ಯಕ್ರಿಯೆಗೆ ರಾಜ್ಯದ ಎಲ್ಲ ಕಡೆಯಿಂದ ಅಭಿಮಾನಿಗಳು, ಕಾರ್ಯಕರ್ತರು ಬಂದಿದ್ದಾರೆ. ಅಂತ್ಯಕ್ರಿಯೆಗೆ ಎಲ್ಲರೂ ಸಹಕಾರವನ್ನು ನೀಡಿದ್ದೀರಿ. ಎಲ್ಲೂ ಗೊಂದಲವಾಗದಂತೆ ನೋಡಿಕೊಂಡಿದ್ದೀರಿ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ಮುಂದೆ ಏನು ಹೇಳಬೇಕೆಂದು ನನಗೆ ಗೊತ್ತಾಗುತ್ತಿಲ್ಲ ಎಂದು ಧ್ರುವನಾರಾಯಣ ಪುತ್ರ ದರ್ಶನ್ ಹೇಳಿದರು.
ಇದನ್ನೂ ಓದಿ: Modi in Karnataka: ಮೋದಿ, ಮೋದಿ, ಮೋದಿ! 26 ಬಾರಿ ಮೋದಿ ಹೆಸರು ಹೇಳಿದ ಬೊಮ್ಮಾಯಿ!!
ದರ್ಶನ್‌ಗೆ ಟಿಕೆಟ್ ಕೊಡುವಂತೆ ಅಭಿಮಾನಿಗಳ ಬೇಡಿಕೆ
ನಂಜನಗೂಡಿನಿಂದ ತಮಗೆ ಟಿಕೆಟ್ ನೀಡುವಂತೆ ಅಭಿಮಾನಿಗಳ ಒತ್ತಾಯ ಮಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು, ನೋ ಕಮೆಂಟ್ಸ್ ಎಂದಷ್ಟೇ ಉತ್ತರಿಸಿದರು.