Site icon Vistara News

R Dhruvanarayana : ಧ್ರುವನಾರಾಯಣ ಪುತ್ರ ದರ್ಶನ್‌ಗೆ ನಂಜನಗೂಡು ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಫಿಕ್ಸ್

Darshan

#image_title

ಮೈಸೂರು‌: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ (R Dhruvanarayana) ಅವರ ನಿಧನದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ದಲಿತ ನಾಯಕನಾಗಿದ್ದರೂ ಲಿಂಗಾಯತರೂ ಸೇರಿದಂತೆ ಎಲ್ಲ ವರ್ಗಗಳ ಪ್ರೀತಿಗೆ ಪಾತ್ರರಾಗಿದ್ದ ಸಜ್ಜನ ನಾಯಕ ಧ್ರುವ ನಾರಾಯಣ ನಿರ್ಗಮನ ಕಾಂಗ್ರೆಸ್‌ ಪಕ್ಷದಲ್ಲಿ ನಿರ್ವಾತವನ್ನು ಸೃಷ್ಟಿಸಿದೆ. ಈ ನಡುವೆ, ಅವರದ್ದೇ ಶಕ್ತಿಯ ಇನ್ನೊಬ್ಬ ನಾಯಕನ ಹುಡುಕಾಟ ನಡೆಯುತ್ತಿದೆ. ಹಾಗಿದ್ದರೆ ಅವರ ಪುತ್ರ ದರ್ಶನ್‌ ಈ ಜಾಗಕ್ಕೆ ಬರಲಿದ್ದಾರಾ ಎಂಬ ಪ್ರಶ್ನೆ ಓಡಾಡುತ್ತಿದೆ.

ಧ್ರುವನಾರಾಯಣ ಅವರ ಸಾವಿನಿಂದ ಚಾಮರಾಜನಗರದ 7-8 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಅವರ ಸಾವಿನಿಂದ ದಿನ ಬೆಳಗಾಗುವುದರೊಳಗೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ರಾಜಕೀಯ ಚಿತ್ರಣವೇ ಬದಲಾಗಿದೆ. ಧ್ರುವನಾರಾಯಣ ಅವರು ಕೊಳ್ಳೇಗಾಲ, ಚಾಮರಾಜ ನಗರ, ಗುಂಡ್ಲುಪೇಟೆ, ಹನೂರು, ಎಚ್.ಡಿ.ಕೋಟೆ, ನಂಜನಗೂಡು, ವರುಣ, ತಿ.ನರಸೀಪುರ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್‌ನ್ನು ಮುನ್ನಡೆಸುವ ನಾಯಕ ಯಾರು ಎನ್ನುವುದು ಪ್ರಶ್ನೆಯಾಗಿದೆ. ಬಹುತೇಕರು ಧ್ರುವನಾರಾಯಣ ಪುತ್ರ ದರ್ಶನ್‌ ಈ ಜಾಗ ತುಂಬಹುದು ಎಂಬ ಮಾತನ್ನು ಹೇಳುತ್ತಿದ್ದಾರೆ.

ದರ್ಶನ್‌ ಅವರು ತಮ್ಮ ತಂದೆ ಧ್ರುವನಾರಾಯಣ ಅವರಿಂದಲೇ ರಾಜಕೀಯದ ಹಲವು ಪಟ್ಟುಗಳನ್ನು ಕಲಿತುಕೊಂಡಿದ್ದಾರೆ ಎನ್ನಲಾಗಿದೆ. ಅವರು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ದರ್ಶನ್‌ ರಾಜಕೀಯದ ದೂರಗಾಮಿ ಚಿಂತನೆಯಲ್ಲಿದ್ದರು. ಇದೀಗ ತಂದೆಯ ನಿಧನದಿಂದಾಗಿ ದರ್ಶನ್‌ ರಾಜಕೀಯಕ್ಕೆ ನೇರ ಪ್ರವೇಶ ಪಡೆಯುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ.

ಈ ನಡುವೆ ಧ್ರುವ ನಾರಾಯಣ ಅವರ ನಿಧನದ ದಿನವೇ ಅಂತಿಮ ದರ್ಶನ ನಡೆಯುತ್ತಿದ್ದ ನಡುವೆಯೇ ದರ್ಶನ್‌ ಅವರಿಗೆ ನಂಜನಗೂಡು ಕ್ಷೇತ್ರದ ಟಿಕೆಟ್‌ ನೀಡಬೇಕು ಎಂಬ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಲಾಗಿತ್ತು. ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇನ್ನೊಬ್ಬ ನಾಯಕರಾದ ಎಚ್‌.ಸಿ. ಮಹದೇವಪ್ಪ ಅವರು ಕೂಡಾ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಅವರಿಬ್ಬರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ನಿಜವೆಂದರೆ, ಟಿಕೆಟ್‌ ಗೊಂದಲವೂ, ಟಿಕೆಟ್‌ ಸಿಗುವುದಿಲ್ಲ ಎಂಬ ಆತಂಕವೂ ಆರ್‌ ಧ್ರುವನಾರಾಯಣ ಅಕಾಲಿಕ ನಿಧನಕ್ಕೆ ಕಾರಣ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ದರ್ಶನ್‌ ಅವರಿಗೆ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ.

ಇದೀಗ ದರ್ಶನ್‌ ಅವರಿಗೆ ನಂಜನಗೂಡು ಟಿಕೆಟ್‌ ಕೊಡಲೇಬೇಕು ಎಂಬ ಬೇಡಿಕೆ ಜೋರಾಗಿದ್ದರಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತಿತರ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಡಾ. ಮಹದೇವಪ್ಪ ಅವರಿಗೆ ಟಿಕೆಟ್‌ ನೀಡಬೇಕು ಎಂದು ಬಯಸಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಅವರು ದರ್ಶನ್‌ ಬೆನ್ನಿಗೆ ನಿಲ್ಲಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ. ತಾವೇ ಮುಂದೆ ನಿಂತು ದರ್ಶನ್ ಸ್ಪರ್ಧೆಗೆ ಅವಕಾಶ ನೀಡಬೇಕಾದ ಇಕ್ಕಟ್ಟಿಗೆ ಸಿದ್ದರಾಮಯ್ಯ ಮತ್ತು ಡಾ.ಮಹದೇವಪ್ಪ ಸಿಲುಕಿದ್ದಾರೆ. ಒಂದೊಮ್ಮೆ ಟಿಕೆಟ್‌ ಕೊಡದೆ ಹೋದರೆ ಚಾಮರಾಜನಗರ, ಮೈಸೂರು ಜಿಲ್ಲೆಯ ಜನ, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುವ ಭಯ ಅವರಿಗೆ.

ಇದನ್ನೂ ಓದಿ : R Dhruvanarayana : ನನ್ನ ಮಾರ್ಗದರ್ಶಕ, ಸ್ನೇಹಿತ, ಹಿತೈಷಿಯಾಗಿದ್ದ ಧ್ರುವ ನಾರಾಯಣ; ಹರಿಪ್ರಕಾಶ್‌ ಕೋಣೆಮನೆ ಕಂಬನಿ

Exit mobile version