ಚಾಮರಾಜನಗರ: ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ (R Dhruvanarayana) ಅಂತ್ಯಸಂಸ್ಕಾರ, ಸ್ವಗ್ರಾಮವಾದ ತಾಲೂಕಿನ ಹೆಗ್ಗವಾಡಿಯಲ್ಲಿ ಭಾನುವಾರ ಮಧ್ಯಾಹ್ನ ಕುಟುಂಬಸ್ಥರು, ಬೆಂಬಲಿಗರು, ಕಾಂಗ್ರೆಸ್ ನಾಯಕರು ಹಾಗೂ ಸಾವಿರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿತು.
ಹೆಗ್ಗವಾಡಿ ತೋಟದಲ್ಲಿ ತಂದೆ, ತಾಯಿ ಸಮಾಧಿ ಪಕ್ಕದಲ್ಲೇ ಧ್ರುವನಾರಾಯಣ ಅವರ ಸಮಾಧಿ ಮಾಡಲಾಯಿತು. ಹಿಂದು ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿತು. ಈ ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಇದನ್ನೂ ಓದಿ | R Dhruvanarayana : ಹೃದಯಾಘಾತವೊಂದೇ ಅಲ್ಲ, ಅಜಾತಶತ್ರುವಿಗೆ ಮಾರಣಾಂತಿಕವಾಗಿದ್ದು ಅಲ್ಸರ್!
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕರಾದ ಡಾ.ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಅನಿಲ್ ಚಿಕ್ಕಮಾದು, ಶಾಮನೂರು ಶಿವಶಂಕರಪ್ಪ, ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಅಂತಿಮ ದರ್ಶನಕ್ಕೆ ಜನಸಾಗರ
ನೆಚ್ಚಿನ ನಾಯಕ ಧ್ರುವನಾರಾಯಣ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು. ಶನಿವಾರ ರಾತ್ರಿ ಸ್ವಗ್ರಾಮ ಹೆಗ್ಗವಾಡಿಗೆ ಪಾರ್ಥಿವ ಶರೀರ ಆಗಮಿಸಿದ್ದು, ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಸೇರಿದಂತೆ ಭಾನುವಾರ (ಮಾ. 12) ಮುಂಜಾನೆಯಿಂದಲೇ ಸಾಗರೋಪಾದಿಯಲ್ಲಿ ನಾಗರಿಕರು ಹಾಗೂ ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಅಂತಿಮ ದರ್ಶನದ ವೇಳೆ ಕೆಲವು ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.