ದಾಸರಹಳ್ಳಿ(ಬೆಂಗಳೂರು): ಈ ಬಾರಿ ಚುನಾವಣೆಯಲ್ಲಿ (Karnataka Election) ಶಾಸಕನಾಗಿ ಆರಿಸಿ ಬಂದ ಕೂಡಲೇ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ತಲೆನೋವಾಗಿ ಪರಿಣಮಿಸಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವುದೇ ನನ್ನ ಮೊದಲ ಕೆಲಸ ಆಗಿರುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಆರ್.ಮಂಜುನಾಥ್ ಉದ್ಯಮಿಗಳಿಗೆ ಭರವಸೆ ನೀಡಿದರು.
ಪೀಣ್ಯ ಕೈಗಾರಿಕಾ ಸಂಘದಿಂದ ಆಯೋಜಿಸಲಾಗಿದ್ದ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಐದು ವರ್ಷ ಆಯ್ತು, ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆ ಸಮಯದಲ್ಲಿ ನಾನು ಬಿಬಿಎಂಪಿ ಅಧಿಕಾರಿಗಳನ್ನು ಕರೆದು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದೆ. ಅಷ್ಟೊತ್ತಿಗೆ ವಿಶ್ವದಾದ್ಯಂತ ಮಹಾಮಾರಿ ಕೋವಿಡ್ ಎಲ್ಲಾ ಕೆಲಸಗಳನ್ನು ಹಾಳು ಮಾಡಿ, ಜನರ ಬದುಕನ್ನು ದುಸ್ತರಗೊಳಿಸಿತು ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ | Karnataka Election: ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಪಿಎಫ್ಐ, ಬಜರಂಗದಳ ಬ್ಯಾನ್ ಮಾಡಲಿಲ್ಲ: ಎಚ್.ಡಿ. ಕುಮಾರಸ್ವಾಮಿ
ನಾನು ಕಂಡ ಕನಸು ನನಸು ಮಾಡಲು ಸಮಯದ ಕೊರತೆ ಉಂಟಾಗಿ ಕೆಲವು ಸಮಸ್ಯೆ ಮಾತ್ರ ಬಗೆಹರಿಸಿದ್ದೇನೆ. ಆದರೆ ಇನ್ನೂ ಸಾಕಷ್ಟು ಸಮಸ್ಯೆಗಳು ಕಣ್ಣಿಗೆ ಕಾಣುತ್ತಿದವೆ. ಅದನ್ನು ಬಗೆಹರಿಸಬೇಕಾದರೆ ಇನ್ನೂ ಐದು ವರ್ಷಗಳ ಸಮಯ ಬೇಕಾಗಿದ್ದು, ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಅಲ್ಲದೇ ನೀವು ಮಾಡಿರುವ ಮನವಿಯನ್ನು ಸರ್ಕಾರದ ಜತೆ ಚರ್ಚಿಸುವುದಾಗಿ ತಿಳಿಸಿದ ಶಾಸಕರು, ಚುನಾವಣೆ ಮುಗಿದ ಕೂಡಲೇ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.