ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ರೇಸ್ ಶುರುವಾಗಿದೆ. ಹಾಗೆಯೇ ಡಿಜಿಪಿ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ಪೊಲೀಸ್ ಮಹಾ ನಿರ್ದೇಶಕ (Karnataka DGP) ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಪ್ರಮುಖ ಮೂರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಪೈಪೋಟಿ ನಡೆದಿದ್ದು, ಅಲೋಕ್ ಮೋಹನ್ (Alok Mohan), ಕಮಲ್ ಪಂಥ್ (Kamal Pant) ಹಾಗೂ ರವೀಂದ್ರನಾಥ್ (Ravindranath) ರೇಸ್‌ನಲ್ಲಿದ್ದಾರೆ.
ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅವರು ಸಿಬಿಐಗೆ ನಿರ್ದೇಶಕರಾಗಿ ಚಾರ್ಜ್ ತೆಗೆದುಕೊಳ್ಳುವ ಮುಂಚೆಯೇ ಅಧಿಕಾರಕ್ಕಾಗಿ ಪೈಪೋಟಿ ನಡೆದಿದೆ. ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗೆ ಪೈಪೋಟಿ ಶುರುವಾಗಿದ್ದು, ಅಲೋಕ್ ಮೋಹನ್ , ಕಮಲ್ ಪಂಥ್ ಹಾಗೂ ರವೀಂದ್ರನಾಥ್ ಅವರಲ್ಲಿ ಪೈಪೋಟಿ ನಡೆದಿದೆ.
ಇದನ್ನೂ ಓದಿ: Weather Report: ಕರಾವಳಿ, ಉತ್ತರ ಒಳನಾಡಿನಲ್ಲಿ ತಗ್ಗಿದ ಮಳೆ; ದಕ್ಷಿಣ ಒಳನಾಡಿನಲ್ಲಿ ಮುಂದುವರಿಯಲಿದೆ ಅಬ್ಬರ
ಸದ್ಯ ಇರುವ ಹಿರಿತನವನ್ನು ಗಮನಿಸುವುದಾದರೆ ಅಗ್ನಿ ಶಾಮಕ ದಳದ ಡಿಜಿಪಿ ಆಗಿರುವ ಅಲೋಕ್ ಮೋಹನ್ ಅವರು ಮೊದಲಿಗರಾಗಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರಾಗುವವರು ಒಂದು ವರ್ಷದವರೆಗೂ ಕಾರ್ಯ ನಿರ್ವಹಿಸಬೇಕು. ಆದರೆ, ಈಗ ನಿವೃತ್ತಿ ಅಂಚಿನಲ್ಲಿರುವವರು ಅಧಿಕಾರದಲ್ಲಿದ್ದರೂ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸದ್ಯ ಕಮಲ್ ಪಂಥ್ ಎಡಿಜಿಪಿ ಸಿಐಡಿ ನೇಮಕಾತಿ ವಿಭಾಗದಲ್ಲಿದ್ದಾರೆ. ರವೀಂದ್ರನಾಥ್ ಅವರು ಎಡಿಜಿಪಿ ತರಬೇತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ನಾನಾ ಕಾರಣಕ್ಕೆ ರಾಜೀನಾಮೆ ನೀಡಿದ್ದ ರವೀಂದ್ರನಾಥ್ ಅವರ ಮೇಲೆ ಸರ್ಕಾರದ ಮಟ್ಟದಲ್ಲಿ ಅಷ್ಟಾಗಿ ಒಲವಿಲ್ಲ ಎನ್ನಲಾಗಿದೆ. ಆದರೆ, ಅವರೂ ಈಗ ಡಿಜಿ ಮತ್ತು ಐಜಿಪಿ ರೇಸ್‌ನಲ್ಲಿ ಇದ್ದಾರೆ. ನೂತನ ಸರ್ಕಾರ ರಚನೆಯಾದ ಬಳಿಕ ಮುಂದಿನ ಮುಖ್ಯಮಂತ್ರಿಯವರು ಯಾರನ್ನು ಡಿಜಿಪಿ ಮಾಡಲಿದ್ದಾರೆ ಎಂಬುದು ಮುಂದಿನ ಕುತೂಹಲಕ್ಕೆ ಕಾರಣವಾಗಿದೆ.
ಪ್ರವೀಣ್ ಸೂದ್ ಈಗ ಸಿಬಿಐ ನಿರ್ದೇಶಕ!
ದೇಶದ ಉನ್ನತ ಹುದ್ದೆಯಲ್ಲೊಂದಾಗಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರ (CBI Director) ಸ್ಥಾನಕ್ಕೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ (Praveen Sood) ನೇಮಕಗೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಪ್ರವೀಣ್ ಸೂದ್ ಎರಡು ವರ್ಷಗಳ ಕಾಲ ಅಧಿಕಾರದಲ್ಲಿರಲಿದ್ದಾರೆ.
ಮೇ 25ಕ್ಕೆ ಹಾಲಿ ಸಿಬಿಐ ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಅವಧಿ ಮುಕ್ತಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಸಿಬಿಐ ನಿರ್ದೇಶಕರ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದಿದೆ. ಸದ್ಯ ಮೂವರು ಐಪಿಎಸ್ ಅಧಿಕಾರಿಗಳು ಹೆಸರು ಸಂಭಾವ್ಯ ಪಟ್ಟಿಯಲ್ಲಿತ್ತು. ಆದರೆ, ಅಂತಿಮವಾಗಿ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: Praveen Sood: ಪ್ರವೀಣ್ ಸೂದ್ ನಾಲಾಯಕ್ ಡಿಜಿಪಿ, ಅಧಿಕಾರಕ್ಕೆ ಬಂದಾಗ ತೋರಿಸ್ತೇನೆ ಎಂದಿದ್ದ ಡಿ.ಕೆ. ಶಿವಕುಮಾರ್!
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ ರಂಜನ್ ಚೌಧರಿ ಒಳಗೊಂಡ ಉನ್ನತ ಮಟ್ಟದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕರ್ನಾಟಕ, ದೆಹಲಿ ಸೇರಿದಂತೆ ಮೂರು ರಾಜ್ಯಗಳ ಅಧಿಕಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಹೆಸರು ಅಂತಿಮವಾಗಿದೆ. ಅವರು ಎರಡು ವರ್ಷಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬಿದ್ದಿದೆ.