ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏಣಿತ್ತಡ್ಕದ ಕುಮಾರಧಾರ ಹೊಳೆಯಲ್ಲಿ ತೆಪ್ಪ ಮಗುಚಿ (Raft tragedy) ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ (46) ಮೃತಪಟ್ಟ ಮಹಿಳೆಯಾಗಿದ್ದಾರೆ. ತೆಪ್ಪದಲ್ಲಿದ್ದ ಇನ್ನಿಬ್ಬರು ಮಹಿಳೆಯರು ಈಜಿ ದಡ ಸೇರಿದ್ದಾರೆ.
ಕುಮಾರಧಾರ ಹೊಳೆಯಲ್ಲಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅರೆಲ್ತಡ್ಕ ಎಂಬಲ್ಲಿಂದ ಗೀತಾ ಹುಲ್ಲು ಸಂಗ್ರಹಿಸಿ ಹೊಳೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ನದಿಯ ಮದ್ಯ ಭಾಗಕ್ಕೆ ಬಂದಾಗ ಜೋರಾಗಿ ಗಾಳಿ ಬೀಸಿದೆ. ಇದರಿಂದ ತೆಪ್ಪ ನಿಯಂತ್ರಣಕ್ಕೆ ಸಿಗದೇ ಮಗುಚಿ ಬಿದ್ದಿದೆ.
ಇದನ್ನೂ ಓದಿ: Tiger Attack: ಮೈಸೂರಲ್ಲಿ ಚಿರತೆ ದಾಳಿಗೆ ಬಾಲಕ ಮೃತ್ಯು ಬೆನ್ನಲ್ಲೇ ಹುಲಿ ದಾಳಿಗೆ ಯುವಕ ಬಲಿ; ಒಂದೇ ದಿನದ ಅಂತರದಲ್ಲಿ 2 ಸಾವು
ಇನ್ನಿಬ್ಬರು ಪಾರು
ತೆಪ್ಪದಲ್ಲಿ ಗೀತಾ ಅವರ ಜತೆ ಇನ್ನೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದೆ. ಅವರು ಹುಲ್ಲು ತುಂಬಿದ್ದ ಗೋಣಿ ಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ. ಆದರೆ, ಗೀತಾ ಈಜಲಾಗದೇ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗೀತಾ ಶವದ ಮುಂದೆ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಕಡಬ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.