ಮಂಗಳೂರು: ಲೋಕಸಭಾ ಅಧಿವೇಶನದಲ್ಲಿ ಹಿಂದುತ್ವದ ಅವಹೇಳನ ಮಾಡಿದ್ದಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು, ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಇದರ ಬೆನ್ನಲ್ಲೇ ಜಿಲ್ಲೆಯ ಬಂಟ್ವಾಳ ತಾಲೂಕಿನ ಪವರ್ ಫುಲ್ ದೇವಿಗೆ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಿಶ್ವ ಹಿಂದು ಪರಿಷತ್ ಮುಖಂಡರು ದೂರು ನೀಡಿರುವುದು ಕಂಡುಬಂದಿದೆ. ದೇವರ ನಿಂದನೆ, ಧರ್ಮವಿರೋಧಿ ಹೇಳಿಕೆ ಕೊಟ್ಟು ರಾಷ್ಟ್ರೀಯತೆಗೆ ಅವಮಾನ ಮಾಡಿದ್ದಾರೆ ಎಂದು ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಿಗೆ ದೂರು ನೀಡಲಾಗಿದೆ.
ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಮೂಲಕ ವಿಶ್ವ ಹಿಂದು ಪರಿಷತ್ ಮುಖಂಡರು ದೇವಿಗೆ ದೂರು ಕೊಟ್ಟು, ರಾಹುಲ್ ಗಾಂಧಿಗೆ ಒಳ್ಳೆ ಬುದ್ಧಿಕೊಟ್ಟು, ಈ ಹೇಳಿಕೆಗೆ ತಕ್ಕ ಶಿಕ್ಷೆ ನೀಡಲು ಪ್ರಾರ್ಥನೆ ಮಾಡಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
“ಹಿಂದು ಧರ್ಮ ಹಾಗೂ ನಮ್ಮ ಅನೇಕ ಹಿಂದೂ ಮಹಾಪುರುಷರು ಅಹಿಂಸೆಯನ್ನು ಪ್ರತಿಪಾದಿಸುತ್ತಾರೆ. ಜೀಸಸ್ ಕ್ರೈಸ್ಟ್ ಕೂಡ ಅಹಿಂಸೆಯನ್ನೇ ಪ್ರತಿಪಾದಿಸುತ್ತಾನೆ. ಸ್ವತಃ ಕೈಯಲ್ಲಿ ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದುಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ, ಅಸತ್ಯವನ್ನೇ ಹೇಳುತ್ತಿದ್ದಾರೆ. ನೀವು ಹಿಂದುಗಳೇ ಅಲ್ಲ” ಎಂದು ರಾಹುಲ್ ಗಾಂಧಿ ಸಂಸತ್‌ನಲ್ಲಿ ಜುಲೈ 1ರಂದು ಹೇಳಿದ್ದರು.
ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಬಿಜೆಪಿ ನಾಯಕರು ಹಿಂಸೆ ಹಾಗೂ ದ್ವೇಷದಲ್ಲಿ ತೊಡಗಿದ್ದು, ಅವರು ಹಿಂದುಗಳಲ್ಲ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆ ಖಂಡಿಸಿ ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.
ತಿರುಗೇಟು ಕೊಟ್ಟಿದ್ದ ಮೋದಿ
ರಾಹುಲ್ ಗಾಂಧಿ ಹೇಳಿಕೆಗೆ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿಯೇ ತಿರುಗೇಟು ಕೊಟ್ಟಿದ್ದರು. “ಸ್ವಾಮಿ ವಿವೇಕಾನಂದರು ಯಾವ ಧರ್ಮದ ಕುರಿತು ಅಭಿಮಾನದಿಂದ ಹೇಳಿದ್ದರೋ, ಯಾವ ಧರ್ಮದ ಮಹತ್ವ, ಸಹಿಷ್ಣುತೆಯನ್ನು ಜಗತ್ತಿಗೇ ತಿಳಿಸಿದ್ದರೋ, ಅದೇ ಧರ್ಮದವರು ನಾವು. ಹಿಂದು ಧರ್ಮವು ಎಂದಿಗೂ ದ್ವೇಷ, ಹಿಂಸೆಯನ್ನು ಪ್ರಚೋದಿಸಿಲ್ಲ. ಬಿಜೆಪಿಯು ಇಂತಹ ಧರ್ಮದಲ್ಲಿ ನಂಬಿಕೆ ಇರಿಸಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಹಿಂದುಗಳನ್ನು ಅವಮಾನಿಸುತ್ತಿದೆ. ಹಿಂದುಗಳು ಕಾಂಗ್ರೆಸ್‌ನ ಈ ಷಡ್ಯಂತ್ರವನ್ನು ತಿಳಿಯಬೇಕು. ದೇಶದಲ್ಲಿ ಹಿಂದುಗಳು ಕಾಂಗ್ರೆಸ್ ಬಗ್ಗೆ ಎಚ್ಚರದಿಂದ ಇರಬೇಕು” ಎಂದು ಹೇಳಿದ್ದರು.
ಇದನ್ನೂ ಓದಿ | Assembly Session: ಅಧಿವೇಶನದಲ್ಲಿ ಹಗರಣಗಳ ಸದ್ದು; ಮೊದಲ ದಿನವೇ ಮುಗಿಬಿದ್ದ ವಿಪಕ್ಷ ನಾಯಕರು, ಹೆದರಲ್ಲ ಎಂದ ಸಿಎಂ!
“ಹಿಂದುಗಳ ಕುರಿತು ರಾಹುಲ್ ಗಾಂಧಿ ಅವರು ಸುಳ್ಳುಗಳನ್ನು ಹರಡಿಸುತ್ತಿದ್ದಾರೆ. ಹಿಂದುಗಳು ಹಿಂಸಾವಾದಿಗಳು ಎಂದು ಹೇಳುವ ಮೂಲಕ ಪ್ರಚೋದನೆ ನೀಡುತ್ತಿದೆ. ಇದು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕನ ಸಂಸ್ಕೃತಿ, ಇದು ನಿಮ್ಮ ವ್ಯಕ್ತಿತ್ವ, ಇವು ನಿಮ್ಮ ಕೆಟ್ಟ ವಿಚಾರಗಳು, ಹಿಂದುಗಳ ಮೇಲೆ ನೀವು ಹೊಂದಿರುವ ದ್ವೇಷ, ನಿಮ್ಮ ಚಟುವಟಿಕೆಗಳು ಹಿಂದುಗಳ ವಿರೋಧಿಯಾಗಿವೆ. ಇದನ್ನು ಹಿಂದುಗಳು ಗಮನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು.