Site icon Vistara News

ನ್ಯಾಯಮೂರ್ತಿಗಳಿಗೇ ಬೆದರಿಕೆ ಹಾಕಿದ ಎಸಿಬಿ, ರಾಹುಲ್‌ ಗಾಂಧಿ ಖಂಡನೆ, ಡರೋಮತ್‌ ಎಂದು ಅಭಯ

Rahul gandhi

ನವ ದೆಹಲಿ: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೆದರಿಕೆ ಹಾಕಿರುವುದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖಂಡಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಭ್ರಷ್ಟಾಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಈ ವೇಳೆ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಅವರಿಗೆ ವರ್ಗಾವಣೆ ಬೆದರಿಕೆ ಬಂದಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.

ʻʻಬೆಂಗಳೂರು ನಗರ ಜಿಲ್ಲಾಧಿಕಾರಿ ಲಂಚ ಪ್ರಕರಣದಲ್ಲಿ 2ನೇ ಆರೋಪಿಯನ್ನು ಕಲೆಕ್ಷನ್‌ಗೋಸ್ಕರವೇ ನೇಮಿಸಲಾಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತೀರಿ. ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನಾ? ಕರಿ ಕೋಟ್ ಇರುವುದು ಆರೋಪಿಗಳನ್ನು ರಕ್ಷಿಸುವುದಕ್ಕಲ್ಲ. ಭ್ರಷ್ಟಾಚಾರ ಎಂಬುದು ಕ್ಯಾನ್ಸರ್ ರೂಪವನ್ನು ತಾಳಿದೆ. ಇದು ಕ್ಯಾನ್ಸರ್‌ನ 4ನೇ ಹಂತಕ್ಕೆ ಹೋಗಬಾರದು. ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು? ಸರ್ಚ್ ವಾರಂಟ್‌ ತೋರಿಸಿ ವಸೂಲಿ ಮಾಡುವುದು ನಡೆಯುತ್ತಿದೆʼʼ ಎಂದು ಇತ್ತೀಚೆಗೆ ಪ್ರಕರಣ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೇಶ್‌ ಅವರು ಅಸಮಾಧಾನವನ್ನು ಹೊರಹಾಕಿದ್ದರು. ಈ ಸಂಬಂಧ ತಮಗೆ ಬೆದರಿಕೆ ಬಂದಿದೆ ಎಂದು ಸೋಮವಾರ ನಡೆಯುತ್ತಿದ್ದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಬಹಿರಂಗಪಡಿಸಿದ್ದಾರೆ.

ಈ ವಿದ್ಯಮಾನವನ್ನು ಖಂಡಿಸಿರುವ ರಾಹುಲ್‌ ಗಾಂಧಿ ಅವರು, ʻʻಬಿಜೆಪಿ ಪ್ರತಿಯೊಂದು ಸಂಸ್ಥೆಯನ್ನೂ ನಾಶ ಮಾಡುತ್ತಿದೆ. ಹಾಗಾಗಿ ನಾವು ಪ್ರತಿಯೊಬ್ಬರೂ ಭಯರಹಿತವಾಗಿ ಕೆಲಸ ಮಾಡುವ ವ್ಯಕ್ತಿಗಳ ಪರವಾಗಿ ನಿಲ್ಲಬೇಕು,ʼʼ ಎಂದು ಟ್ವೀಟ್‌ ಮಾಡಿದ್ದಾರೆ. ʻಕರ್ನಾಟಕದ ಭ್ರಷ್ಟ ಬಿಜೆಪಿ ಸರಕಾರದ ಭ್ರಷ್ಟತೆಯನ್ನು ಬಯಲುಗೊಳಿಸಿದ ನ್ಯಾಯಾಧೀಶರಿಗೇ ಹೈಕೋರ್ಟ್‌ ನ್ಯಾಯಾಧೀಶರಿಗೇ ಬೆದರಿಕೆ ಹಾಕಲಾಗಿದೆʼ ಎಂದು ಆಕ್ಷೇಪಿಸಿದ್ದಾರೆ.

ʻಡರೋಮತ್‌ʼ (ಭಯಪಡಬೇಡಿ) ಎಂಬ ಹ್ಯಾಷ್‌ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿರುವ ಅವರು, ನ್ಯಾಯಮೂರ್ತಿ ಸಂದೇಶ್‌ ಅವರು ನೀಡಿರುವ ಹೇಳಿಕೆಯ ವಿಡಿಯೊವನ್ನು ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ| ಎಸಿಬಿಗೆ ಚಳಿಬಿಡಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ, ಬಗ್ಗಲ್ಲವೆಂದ ಜಸ್ಟಿಸ್ ಸಂದೇಶ್‌!

Exit mobile version