Site icon Vistara News

Amit Shah | ರಾಹುಲ್‌ ಸೋಲಿನ ಸರದಾರ, ಕಾಂಗ್ರೆಸ್‌ ದಿಕ್ಕಾಪಾಲು; ಸಿದ್ದು ಮನೆಗೆ, ಕನಕಪುರಕ್ಕೆ ಮಾತ್ರ ಡಿಕೆಶಿ ಲೀಡರ್‌: ಅಶೋಕ್ ಗೇಲಿ

R Ashok writes to chief minister to relieve as mandya incharge minister

ಬೆಂಗಳೂರು: ರಾಹುಲ್‌ ಗಾಂಧಿ ಅವರು ಸೋಲಿನ ಸರದಾರರಾದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಗೆಲುವಿನ ಸರದಾರರು ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ಹೇಳಿದರು.‌

ಅರಮನೆ ಮೈದಾನದಲ್ಲಿ ಬಿಜೆಪಿಯ ಬೂತ್‌ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಮಿತ್‌ ಶಾ ಅವರು ಹೋದಲ್ಲೆಲ್ಲ ಬಿಜೆಪಿ ಜಯ ಗಳಿಸಿದೆ. ಆದರೆ, ಕಾಂಗ್ರೆಸ್‌ ನಾಯಕ ಹೋದಲೆಲ್ಲ ಆ ಪಕ್ಷವು ಸೋತಿದೆ. ಜನರ ಭಾಷೆಯಲ್ಲಿ ಹೇಳುವುದಾದರೆ ಮಠಾಶ್‌ ಆಗಿದೆ. ಗುಜರಾತ್‌ ಸೇರಿದಂತೆ ಕೆಲವು ಕಡೆ ರಾಹುಲ್‌ ಗಾಂಧಿ ಅವರು ತಲೆಯನ್ನೇ ಹಾಕಿಲ್ಲ. ರಾಹುಲ್‌ ಗಾಂಧಿ ಅವರು ಸೋಲಿನ ಸರದಾರರಾದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಗೆಲುವಿನ ಸರದಾರರು ಎಂದು ಹೇಳಿದರು.

Amit Shah

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದಿದ್ದಾರೆಂದರೆ ಯುದ್ಧ ಪ್ರಾರಂಭವಾದಂತೆ. ಇನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಪಂಚರತ್ನ, ಆ ರತ್ನ, ಈ ರತ್ನ ಎಂದೇ ಕುಳಿತುಕೊಂಡಿದ್ದಾರೆ. ಆದರೆ, ನಮ್ಮದು ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಭೆಗಳೂ ನಡೆದಿವೆ. ಈಗಿರುವ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಪಕ್ಷದ ೨೦ ಮಂದಿ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ಇದನ್ನೂ ಓದಿ | Manual Scavenger As Deputy Mayor | ಸಫಾಯಿ ಕರ್ಮಚಾರಿ ಮಹಿಳೆ ಈಗ ಉಪ ಮೇಯರ್‌, ಇದು ಬ್ಯೂಟಿ ಆಫ್‌ ಡೆಮಾಕ್ರಸಿ

ಈಗಾಗಲೇ ಬೆಂಗಳೂರಿನಲ್ಲಿ ೧೫ ಶಾಸಕರಿದ್ದಾರೆ. ಈಗಿನ ಸಮೀಕ್ಷೆ ಪ್ರಕಾರ ಮುಂದಿನ ಚುನಾವಣೆಯಲ್ಲಿ ಆ ಸಂಖ್ಯೆ ೨೦ಕ್ಕೇರಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಇದು ಈಗಿನ ಚಿತ್ರಣವಷ್ಟೇ ಆಗಿದ್ದು, ಮುಂಬರುವ ದಿನಗಳಲ್ಲಿ ಇದು ಇಪ್ಪತ್ತೊಂದೂ ಆಗಬಹುದು, ಇಪ್ಪತ್ತೆರಡೂ ಆಗಬಹುದು. ಗೆಲ್ಲುವ ಸಂಖ್ಯೆ ಇನ್ನೂ ಜಾಸ್ತಿಯಾಗಬಹುದು. ಅಮಿತ್‌ ಷಾ ಈಗಾಗಲೇ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಾರೆಂದರೆ ತನ್ನಿಂದ ತಾನೇ ಮತ ಗಳಿಕೆ ಜಾಸ್ತಿಯಾಗಲಿದೆ. ಈ ಕಾರಣಕ್ಕಾಗಿಯೇ ಅಮಿತ್‌ ಶಾ ಅವರಿಗೆ ಚುನಾವಣಾ ಚಾಣಕ್ಯ ಎಂದೇ ಬಿರುದು ಕೊಡಲಾಗಿದೆ ಎಂದು ಹೇಳಿದರು.

Amit Shah

ಈಗ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಆಗ ಕಾಂಗ್ರೆಸ್‌ ಇರುವುದೇ ಇಲ್ಲ. ಆ ಪಕ್ಷದ ನಾಯಕರು ದಿಕ್ಕಾಪಾಲಾಗಿ ಹೋಗುತ್ತಾರೆ. ಏಕೆಂದರೆ ಈ ಚುನಾವಣೆ ಆದ ಮೇಲೆ ನಾನು ಸ್ಪರ್ಧೆಯನ್ನೇ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಹಾಗಾಗಿ ಅವರನ್ನು ಈಗಲೇ ಮನೆಗೆ ಕಳುಹಿಸುವುದು ಒಳಿತು. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಏರಿಯಾಗೆ ಮಾತ್ರ ಲೀಡರ್ ಆಗಿದ್ದಾರೆ. ಕನಕಪುರ ಬಿಟ್ಟರೆ ಅವರ ಹವಾ ಬೇರೆಲ್ಲೂ ನಡೆಯುವುದಿಲ್ಲ. ಹೀಗಾಗಿ ರಾಜ್ಯಾದ್ಯಂತ ಈಗ ಬಿಜೆಪಿ ಹವಾ ಇದೆ ಎಂದು ಅಶೋಕ್‌ ಹೇಳಿದರು.

ಬೆಂಗಳೂರಿನಲ್ಲಿ ಬಿಜೆಪಿ ಜಾಸ್ತಿ ಗೆದ್ದರೆ ಇಡೀ ರಾಜ್ಯದಲ್ಲಿ ಹೆಚ್ಚಿನ ಸೀಟು ಗೆಲ್ಲಲಿದೆ ಎಂಬ ಮಾತಿದೆ. ಅಲ್ಲದೆ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬೆಂಗಳೂರು ಭಾಗದಲ್ಲಿ ಬಿಜೆಪಿ ೧೭ ಸೀಟು ಗೆದ್ದಿತ್ತು. ಆಗ ನಾವು ರಾಜ್ಯದಲ್ಲಿ ೧೧೦ ಸ್ಥಾನಗಳನ್ನು ಗೆದ್ದಿದ್ದೆವು. ಹಾಗಾಗಿ ಬೆಂಗಳೂರು ಕ್ಷೇತ್ರಗಳು ಪ್ರಮುಖವಾಗಿವೆ ಎಂದು ಹೇಳಿದರು.

ಇದನ್ನೂ ಓದಿ | Karnataka Election | ಅಮಿತ್ ಶಾ ಮೂಲಕ ಮೈಸೂರು ಭಾಗದಲ್ಲಿ ಬಿಜೆಪಿಯ ದಂಡಯಾತ್ರೆ ಆರಂಭ: ಕಟೀಲ್

ನಮಗೆ ವರಿಷ್ಠರ ಟಾರ್ಗೆಟ್‌, ಪ್ಲ್ಯಾನ್
ಈ ಚುನಾವಣೆ ಮಾತ್ರವಲ್ಲ, ಮುಂದಿನ ಚುನಾವಣೆಗಳಲ್ಲಿ ನಾವು ಎಷ್ಟು ಸೀಟು ಗೆಲ್ಲಬೇಕು? ಹೇಗೆ ಗೆಲ್ಲಬೇಕು? ಯಾವ ರೀತಿ ಕಾರ್ಯತಂತ್ರ ಇರಬೇಕು ಎಂಬ ಬಗ್ಗೆ ನಮಗೆ ಪ್ಲ್ಯಾನ್‌ ಅನ್ನು ಕೊಟ್ಟಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಕೊಟ್ಟ ಮಾತನ್ನು ಈಡೇರಿಸಿಕೊಂಡು ಬರುತ್ತಿದ್ದೇವೆ. ರಾಮ ಮಂದಿರವನ್ನು ನಿರ್ಮಿಸಿಕೊಟ್ಟಿದ್ದೇವೆ, ಆರ್ಟಿಕಲ್‌ ೩೭೦ ಮೂಲಕ ಕಾಶ್ಮೀರ ನಮ್ಮದಾಗಿದೆ. ಹೀಗೆ ನಾವು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುತ್ತಿರುವುದು ಜನರಿಗೆ ತಲುಪಿದೆ ಎಂದು ಹೇಳಿದರು.

ಕಳೆದ ಬಾರಿ ನಾನು ಕಾರ್ಯಕಾರಣಿಯೊಂದರಲ್ಲಿ ಭಾಗವಹಿಸಿದ್ದೆ. ಆಗ ಒಬ್ಬರು ನಾಯಕರು ಸಭೆಯಲ್ಲಿ ಇನ್ನು ೨೦ ವರ್ಷಗಳ ಕಾಲ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ಇರಬೇಕು ಎಂದು ಹೇಳಿದರು. ಆಗ ವೇದಿಕೆಯಲ್ಲಿದ್ದ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಎದ್ದುನಿಂತು, ೨೦ ವರ್ಷ ಅಲ್ಲ, ಇನ್ನು ೪೦ ವರ್ಷಗಳ ಕಾಲ ನಮ್ಮದೇ ಸರ್ಕಾರ ಇರಬೇಕು. ಅದೇ ನಮ್ಮ ವಿಷನ್‌ ಎಂದು ಹೇಳಿದ್ದರು. ಈ ರೀತಿಯಾಗಿ ಪಕ್ಷದ ಸಂಘಟನೆ ಇರಬೇಕು ಎಂದು ಅಶೋಕ್‌ ಹೇಳಿದರು.

ಅಮಿತ್‌ ಶಾ ಟಾರ್ಗೆಟ್‌
ಪಕ್ಷದ ಸಭೆಯಲ್ಲಿ ಅಮಿತ್‌ ಶಾ ಅವರು ಗುರಿ ನೀಡಿದ್ದಾರೆ. ಚುನಾವಣಾ ಕಾರ್ಯತಂತ್ರಗಳು ಇಂದಿನಿಂದಲೇ ಶುರು. ಮುಂದಿನ ಸಾರಿ ನಾನು ಬಂದಾಗ ಬೆಂಗಳೂರಿನಲ್ಲಿ ಒಂದೇ ಒಂದು ಸಭೆಯನ್ನು ಮಾಡುತ್ತೇನೆ. ಉಳಿದಂತೆ ಹಳೇ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಸಭೆ ನಡೆಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ೧೫ ದಿನಕ್ಕೊಮ್ಮೆ ಕರ್ನಾಟಕಕ್ಕೆ ಬರುವುದಾಗಿ ಹೇಳಿದ್ದಾರೆ. ಮೋದಿ, ಶಾ ಜೋಡಿ ಬೆಂಕಿ-ಬಿರುಗಾಳಿ ಇದ್ದಂತೆ. ಇವರಿಬ್ಬರನ್ನೂ ತಡೆಯುವ ಶಕ್ತಿ ಸಿದ್ದರಾಮಯ್ಯ ಅವರಿಗಾಗಲೀ, ಡಿ.ಕೆ. ಶಿವಕುಮಾರ್‌ ಅವರಿಗಾಗಲೀ ಇದೆಯೇ? ಖಂಡಿತಾ ಇಲ್ಲ. ರಾಹುಲ್‌ ಗಾಂಧಿಯವರನ್ನು ನಂಬಿಕೊಂಡಿದ್ದಾರೆ. ಅವರು ಈಗಾಗಲೇ ಗಡ್ಡ ಬಿಟ್ಟು ಸನ್ಯಾಸಿಯಾಗಿದ್ದಾರೆ. ರಾಹುಲ್‌ ಹಾಗೂ ಸೋನಿಯಾ ಗಾಂಧಿಯವರಿಗೆ ಈ ಪ್ರವಾಹವನ್ನು ತಡೆಯುವ ಶಕ್ತಿ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ | Pandya Brothers | ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್‌; ಕಾರಣ ಏನು?

ನಾವು ಇಂದಿನಿಂದಲೇ ಚುನಾವಣೆ ಎಂದು ಭಾವಿಸಿ ಕೆಲಸ ಮಾಡಬೇಕು. ಯಾರು ಬಿಜೆಪಿ ತತ್ವ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಬರುವವರನ್ನು ಗುರುತಿಸಿ ಪಕ್ಷಕ್ಕೆ ತರುವ ಕೆಲಸವನ್ನು ಕಾರ್ಯಕರ್ತರು ಪ್ರತಿ ವಾರ್ಡ್‌, ಪ್ರತಿ ಬೂತ್‌ನಲ್ಲೂ ಮಾಡಬೇಕು. ಆಗ ಮಾತ್ರ ನಮ್ಮ ಸಂಘಟನೆ ಇನ್ನಷ್ಟು ಬಲಗೊಳ್ಳುತ್ತದೆ, ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಶಾಸಕ ಸತೀಶ್ ರೆಡ್ಡಿ, ಸಂಸದ ಪಿ.ಸಿ ಮೋಹನ್, ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಲೆಹರ್ ಸಿಂಗ್, ಸಚಿವರಾದ ಅಶ್ವತ್ಥನಾರಾಯಣ, ಸೋಮಶೇಖರ್, ಮುರುಗೇಶ್ ನಿರಾಣಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉಪಸ್ಥಿತರಿದ್ದರು.

ಇದನ್ನೂ ಓದಿ | ITR Deadline | ಐಟಿಆರ್‌, ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ ಗಡುವು ಇಂದು ಅಂತ್ಯ

Exit mobile version