ಹಾವೇರಿ: ಬಡವರು, ರೈತರು, ಕಾರ್ಮಿಕರಿಗಾಗಿ ನಾವು ಸರ್ಕಾರ ಮಾಡುತ್ತೇವೆ. ಹೀಗಾಗಿ ರಾಜ್ಯದ ಜನರು ಕಾಂಗ್ರೆಸ್‌ಗೆ ಕನಿಷ್ಠ 150 ಸೀಟ್ ಕೊಡಬೇಕು. ಇಲ್ಲದಿದ್ದರೆ ಬಿಜೆಪಿಯವರು 40 ಪರ್ಸೆಂಟ್ ಕಮಿಷನ್ ಹಣದಲ್ಲಿ ಮತ್ತೆ ಸರ್ಕಾರ (Karnataka Election 2023) ಮಾಡುತ್ತಾರೆ. ಇವರಿಗೆ 40 ಸ್ಥಾನಕ್ಕಿಂತ ಜಾಸ್ತಿ ಕೊಡಬೇಡಿ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (rahul gandhi) ಕಿಡಿಕಾರಿದರು.
ಹಾನಗಲ್ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ನಾಲ್ಕು ಗ್ಯಾರಂಟಿ ಯೋಜನೆ ಜಾರಿ ಮಾಡಲಾಗುತ್ತದೆ. ನಾವು ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿ ಈ ನಾಲ್ಕು ಭರವಸೆಗಳನ್ನು ಈಡೇರಿಸುತ್ತೇವೆ. ಇವುಗಳಿಂದ ಬಡವರಿಗೆ ಉಪಯೋಗವಾಗುತ್ತದೆಯೇ ಹೊರತು ಅದಾನಿ, ಅಂಬಾನಿಗೆ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಂತಹ ಹಿರಿಯ ನಾಯಕರಿಗೆ ಬಿಜೆಪಿ ಟಿಕೆಟ್ ಯಾಕೆ ಕೊಡಲಿಲ್ಲ ಅಂತ ನಾನು ಕೇಳಿದೆ. ಆಗ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಿದೆ ಎಂದು ಹೇಳಿದರು. ಇವರು ಭ್ರಷ್ಟಾಚಾರ ಮಾಡಲಿಲ್ಲ, 40 ಪರ್ಸೆಂಟ್ ಕಮಿಷನ್ ತೆಗೆದುಕೊಂಡಿಲ್ಲ, ಅದಕ್ಕಾಗಿಯೇ ಟಿಕೆಟ್ ಕೊಡಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Amit Shah: ಜಗದೀಶ್ ಶೆಟ್ಟರ್ ಹೋಗಿದ್ದರಿಂದ ಪಕ್ಷಕ್ಕೆ ನಷ್ಟವಿಲ್ಲ; ಅವರ ಸೋಲು ಖಚಿತ: ಹುಬ್ಬಳ್ಳಿಯಲ್ಲಿ ಅಮಿತ್ ಶಾ
ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ ಅವರ ಸುತ್ತಮುತ್ತ ಭ್ರಷ್ಟಾಚಾರದಲ್ಲಿ ಮುಳುಗಿದವರು ನಿಂತಿರುತ್ತಾರೆ. ಮಠದ ಅನುದಾನದಲ್ಲಿ 30 ಪರ್ಸೆಂಟ್ ತೆಗೆದುಕೊಂಡಿದ್ದರು ಎಂದು ದಿಂಗಾಲೇಶ್ವರ ಶ್ರೀಗಳು ಆರೋಪಿಸಿದ್ದರು. ಏನೇ ಕೆಲಸ ಮಾಡಬೇಕೆಂದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕು. ಗುತ್ತಿಗೆದಾರ ಸಂಘದವರು ಮೋದಿಯವರಿಗೆ ಪತ್ರ ಬರೆದಾಗ, ಉತ್ತರ ನೀಡುವುದು ಹೋಗಲಿ, ಆ ಪತ್ರ ಸಹ ಪಡೆಯಲಿಲ್ಲ. ಇದು ಸಹ ಕಳ್ಳತನದ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
ಪ್ರಧಾನಿಯವರು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಆ ವರ್ಗಕ್ಕೆ ಸಹಾಯ ಮಾಡಲು ಅವರಿಗೆ ಮನಸ್ಸಿಲ್ಲ. ಸರ್ಕಾರದ ಬಜೆಟ್ ಸೆಕ್ರೆಟರಿಗಳು ನಿರ್ಣಯ ಮಾಡುತ್ತಾರೆ ಎಂದ ಅವರು, ಹಿಂದುಳಿದವರು, ಎಸ್‌ಸಿ, ಎಸ್‌ಟಿ ಸಮುದಾಯದವರು ಎಷ್ಟಿದ್ದಾರೆ ಎಂಬುದು ಈ ದೇಶದ ಜನತೆಗೆ ಗೊತ್ತಾಗಬೇಕಿದೆ. ಮೀಸಲಾತಿಯ ಗರಿಷ್ಠ ಶೇ. 50 ಮಿತಿ ಕಿತ್ತುಹಾಕಬೇಕು ಎಂದು ಹೇಳಿದರು.
ದೇಶದಲ್ಲಿ ಅಗತ್ಯ ವಸ್ತುಗಳ ದರ ಗಗನಕ್ಕೆ ಏರಿದೆ. 100 ರೂಪಾಯಿ ಪೆಟ್ರೋಲ್, ಸಾವಿರ ರೂಪಾಯಿ ಗ್ಯಾಸ್ ಆಗಿದೆ.
ಇದರ ಲಾಭ ಮೂರ್ನಾಲ್ಕು ಉದ್ಯಮಿಗಳಿಗೆ ಮಾತ್ರ ಹೋಗುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Karnataka Election : ಬಿಟ್ಟು ಹೋದವರಿಂದ ಟೀಮ್‌ಗೆ ಸಮಸ್ಯೆ ಇಲ್ಲ, ಈ ಸಲ ಕಪ್ ನಮ್ದೇ ಎಂದ ಪ್ರಲ್ಹಾದ್ ಜೋಶಿ!
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ನಾನು ಪ್ರತಿ ಬಾರಿ 25 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತಿದ್ದೆ. ಚಿಕ್ಕ ಬಾಲಕನಿಗೆ ಹೇಳುವ ಹಾಗೆ ಪೋನ್ ಮಾಡಿ, ಟಿಕೆಟ್ ಕೊಡುವುದಿಲ್ಲ, ನಿವೃತ್ತಿ ಪಡೆಯಿರಿ ಎಂದು ಹೇಳಿ ಅವಮಾನ ಮಾಡಿದರು. ಹೀಗಾಗಿ ನನಗೆ ಕರೆ ಮಾಡಿದವರಿಗೆ ವಾರ್ನಿಂಗ್ ಕೊಟ್ಟೆ. ನನ್ನದು ಯಾವುದೇ ಸಿ.ಡಿ ಇದೆಯಾ, ಭ್ರಷ್ಟಾಚಾರ ಇದೆಯಾ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ ವ್ಯಕ್ತಿಗೆ ಹೇಗೆ ಟಿಕೆಟ್ ನಿರಾಕರಿಸುತ್ತೀರಿ ಎಂದು ಕೇಳಿದೆ. ನನ್ನ ಸ್ವಾಭಿಮಾನ, ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆ ಆಯಿತು. ಹೀಗಾಗಿ ಬಿಜೆಪಿ ತೊರೆದು ಬಂದಿರುವುದಾಗಿ ಹೇಳಿದರು.
ಕಾಂಗ್ರೆಸ್‌ನಲ್ಲಿ ಗೌರವದಿಂದ ನಡೆಸಿಕೊಂಡರೆ ಸಾಕು ಎಂದಿದ್ದೆ. ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತದೆ. 7ನೇ ಸಲ ಆರಿಸಿ ಬಂದರೆ ಜಗದೀಶ್ ಶೆಟ್ಟರ್ ಯಡಿಯೂರಪ್ಪನವರ ನಂತರ ಲಿಂಗಾಯತ ನಾಯಕ ಆಗುತ್ತಾರೆ. ಹೀಗಾಗಿ ನನಗೆ ಟಿಕೆಟ್ ಕೊಡಲಿಲ್ಲ ಎಂದ ಅವರು, ಕಾಂಗ್ರೆಸ್‌ನಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.