Site icon Vistara News

Rahul Gandhi: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಸಾಮಾನ್ಯ ಕಾರ್ಯಕರ್ತರಿಗೂ ಸರ್ಕಾರದಲ್ಲಿ ಸ್ಥಾನ: ರಾಹುಲ್‌ ಗಾಂಧಿ

Rahul Gandhi says Congress will come to power, common workers will also get a place in government

ಬೆಂಗಳೂರು: ನಗರದ ಮಿಲ್ಲರ್ಸ್‌ ರಸ್ತೆಯಲ್ಲಿ ನಿರ್ಮಿಸಿರುವ ಕೆಪಿಸಿಸಿ ನೂತನ ಕಟ್ಟಡ ʼಇಂದಿರಾ ಗಾಂಧಿ ಭವನʼ ವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ರಾತ್ರಿ ಉದ್ಘಾಟಿಸಿದರು. ಇದೇ ವೇಳೆ ಕಟ್ಟಡದಲ್ಲಿ ನಿರ್ಮಿಸಿರುವ ʼಭಾರತ್ ಜೋಡೊʼ ಸಭಾಂಗಣವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ ಅವರು, ಬಿಜೆಪಿ ದೇಶಕ್ಕೆ ಏನು ಮಾಡುತ್ತಿದೆ ಎಂಬುದು ನಿಮಗೆ ಗೊತ್ತಿದೆ. ಹೀಗಾಗಿ ನಾವು ದೇಶವನ್ನು ರಕ್ಷಣೆ ಮಾಡಬೇಕಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಒಗ್ಗಟ್ಟಿನಿಂದ ನಾವು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ, 40% ಸರ್ಕಾರವಿದೆ. ಪ್ರಧಾನಿ ಮೋದಿ ಏನೇ ಹೇಳಿದರೂ ಭ್ರಷ್ಟಾಚಾರ ಕಡಿಮೆ ಆಗಿಲ್ಲ.. 40% ಭ್ರಷ್ಟ ಸರ್ಕಾರದ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಜನರ ಮಾತು ಕೇಳುವ ಸರ್ಕಾರವನ್ನು ನಾವು ನೀಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸರ್ಕಾರದಲ್ಲಿ ಶಾಸಕರಿಗೆ ಮಾತ್ರ ಹುದ್ದೆಗಳಲ್ಲ. ಸಾಮಾನ್ಯ ಕಾರ್ಯಕರ್ತರು ಸಹ ಸರ್ಕಾರದಲ್ಲಿ ಭಾಗಿಯಾಗುತ್ತಾರೆ. ನಿಮ್ಮ ಧ್ವನಿಯನ್ನು ಸರ್ಕಾರದ ಭಾಗವಾಗಿಸಲು ಅವಕಾಶ ಮಾಡಿಕೊಡುತ್ತೇವೆ. ನಿಗಮ ಮಂಡಳಿ ಸೇರಿ ಹಲವು ಹುದ್ದೆಗಳನ್ನು ಕಾರ್ಯಕರ್ತರಿಗೆ ನೀಡುತ್ತೇವೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಡೀ ದೇಶದಲ್ಲೇ ಈ ರೀತಿಯ ಹೈಟೆಕ್ ಕಾಂಗ್ರೆಸ್ ಕಚೇರಿ ಎಲ್ಲೂ ಇಲ್ಲ. ನಾನು ಸಣ್ಣ ಕಚೇರಿಯಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದೆ. ಡಿ.ಕೆ. ಶಿವಕುಮಾರ್ ಬಹಳ ಲಕ್ಕಿ ಇದ್ದಾನೆ. ಫುಲ್ ಹೈಟೆಕ್ ಆಗಿ ಕಟ್ಟಡ ನಿರ್ಮಾಣ ಮಾಡಿದ್ದಾನೆ. ಸ್ವಲ್ಪ ಮುಂಗೋಪಿ ಎಂಬುವುದು ಬಿಟ್ಟರೆ ಒಳ್ಳೆಯ ಕೆಲಸಗಾರ. ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುತ್ತಾನೆ. ಎಲ್ಲ ನಾಯಕರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸೋನಿಯಾ, ರಾಹುಲ್, ಪ್ರಿಯಾಂಕಾ ಸೇರಿ ಎಲ್ಲರಿಗೂ ಡಿಕೆಶಿ ಇಷ್ಟವಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಟ್ಟಡಕ್ಕೆ ಇಂದಿರಾ ಗಾಂಧಿ ಹೆಸರಿಡಲು ನಾನೇ ಹೇಳಿದೆ. 150 ಸೀಟ್ ಗೆಲ್ಲಬೇಕು ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಸುಮ್ಮನೆ ನಂಬರ್ ಹೇಳಲ್ಲ. ಇವತ್ತು ಹೇಳಿದ್ದಾರೆ ಎಂದರೆ ನಾವು 150ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ನಾವು ಗೆಲ್ಲಬೇಕು. ಅಧಿಕಾರಕ್ಕೆ ಬಂದ ಮೇಲೆ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು, ಈ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದು ಪಕ್ಷದ ನಾಯಕರಿಗೆ ಸಲಹೆ ನೀಡಿದರು.

ಈ ಯುದ್ಧದಲ್ಲಿ ನಾವು ಗೆಲ್ಲಲಿಲ್ಲ ಎಂದರೆ ಏನೂ ಪ್ರಯೋಜನವಿಲ್ಲ‌. ಮೋದಿ ಪ್ರಜಾಪ್ರಭುತ್ವವನ್ನು ಮುಗಿಸಲು ಹೊರಟಿದ್ದಾರೆ. ಅವರು ನಿರಂಕುಶವಾದಿಯಂತೆ ವರ್ತಿಸುತ್ತಿದ್ದಾರೆ. ಸಂಸತ್ತಿನಲ್ಲಿ ನಮ್ಮ‌ ಪ್ರಶ್ನೆಗೆ ಸರಿಯಾಗಿ ಉತ್ತರಿಸಲ್ಲ, ಅವರ ಸಚಿವರೂ ಉತ್ತರ ನೀಡಲ್ಲ. ರಾಹುಲ್ ಗಾಂಧಿ ಏನು ತಪ್ಪು ಮಾಡಿದರು? ಅದಾನಿ ಬಗ್ಗೆ ಪ್ರಶ್ನೆ ಕೇಳಿದ್ದು ತಪ್ಪಾ? ಅವರ ಲೋಕಸಭಾ ಸದಸ್ಯತ್ವ ಅನರ್ಹ ಮಾಡಿ, ಮನೆ ಕಿತ್ತುಕೊಂಡರು. ಆ ಮೂಲಕ ರಾಹುಲ್ ಗಾಂಧಿ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ‌ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ | Karnataka ELection: ಮೊದಲ ಕ್ಯಾಬಿನೆಟ್‌ನಲ್ಲೇ 4 ಗ್ಯಾರಂಟಿ ಜಾರಿ ಗ್ಯಾರಂಟಿ: ಕೋಲಾರದಲ್ಲಿ ರಾಹುಲ್‌ ಗಾಂಧಿ ಭಾಷಣ

ರಾಹುಲ್ ಗಾಂಧಿ ಹೆದರುವ ಮನುಷ್ಯ ಅಲ್ಲ. ಮೋದಿ ಬರಲಿ, ಅಮಿತ್ ಶಾ ಬರಲಿ. ಇಂತಹ 100 ಜನ ಬರಲಿ, ಯಾರಿಗೂ ಹೆದರುವುದಿಲ್ಲ. ರಾಹುಲ್ ಗಾಂಧಿಗೆ ನೀವೆಲ್ಲ ಶಕ್ತಿ ನೀಡಬೇಕು ಅವರಿಗೆ ಶಕ್ತಿ ನೀಡಿದರೆ ನನಗೆ ಶಕ್ತಿ ನೀಡಿದ ಹಾಗೆ ಎಂದು ಕೈ ಕಾರ್ಯಕರ್ತರು ಹಾಗೂ ನಾಯಕರಿಗೆ ಮನವಿ ಮಾಡಿದರು.

Exit mobile version