ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಏಪ್ರಿಲ್ 16 ಮತ್ತು 17ರಂದು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅವರು ಮೊದಲ ಬಾರಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಕೋಲಾರದ ಜೈ ಭಾರತ್ ಸಮಾವೇಶ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಏ.16 ರಂದು ಬೆಳಗ್ಗೆ 11.50ಕ್ಕೆ ನವ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಂತರ ಕೋಲಾರ ಸಮೀಪದ ಟಮಕದಲ್ಲಿ ಮಧ್ಯಾಹ್ನ 12.25ಕ್ಕೆ ಆಯೋಜಿಸಿರುವ ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ 2.40ಕ್ಕೆ ಕೋಲಾರದಿಂದ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ 5.30ಕ್ಕೆ ಜೆ.ಪಿ.ನಗರದಲ್ಲಿ ಬೀದಿಬದಿ ವ್ಯಾಪಾರಿಗಳು ಹಾಗೂ ಪೌರಕಾರ್ಮಿಕರ ಜತೆ ಸಂವಾದ ನಡೆಸಲಿದ್ದಾರೆ. ಇದಾದ ಬಳಿಕ 6.45ಕ್ಕೆ ಕೆಪಿಸಿಸಿ ಇಂದಿರಾ ಗಾಂಧಿ ಭವನವನ್ನು ಉದ್ಘಾಟಿಸಲಿದ್ದಾರೆ.
ಏ.17ರಂದು ಬೆಂಗಳೂರಿನಿಂದ ಬೀದರ್‌ಗೆ ರಾಹುಲ್ ಗಾಂಧಿ ಪ್ರಯಾಣ ಬೆಳೆಸಲಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಅಲ್ಲಿಂದ ಹುಮ್ನಾಬಾದ್ ಪಟ್ಟಣಕ್ಕೆ ತೆರಳಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ರಾಜಶೇಖರ ಪಾಟೀಲ್ ನಾಮ ಪತ್ರಸಲ್ಲಿಕೆ ವೇಳೆ ರಾಹುಲ್ ಗಾಂಧಿ ಉಪಸ್ಥಿತರಿರಲಿದ್ದು, ನಂತರ ನವ ದೆಹಲಿಗೆ ವಾಪಸ್ ಆಗಲಿದ್ದಾರೆ.
ʼಎಲ್ಲ ಕಳ್ಳರ ಉಪನಾಮ ಮೋದಿ ಎಂದೇ ಯಾಕಿರುತ್ತದೆʼ ಎಂಬ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು. ಈ ಹಿಂದೆ ರಾಹುಲ್ ಗಾಂಧಿ ಕೋಲಾರದಲ್ಲೇ ವಿವಾದಿತ ಹೇಳಿಕೆ ನೀಡಿದ್ದರು. ಹೀಗಾಗಿ ಸಂವಿಧಾನ ಉಳಿಸುವ ಹೋರಾಟವನ್ನು ʼಜೈ ಭಾರತ್ʼ ಸಮಾವೇಶದ ಮೂಲಕ ಕೋಲಾರದಿಂದಲೇ ಆರಂಭಿಸುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಅದರಂತೆ ಕೋಲಾರದಲ್ಲಿ ಜೈ ಭಾರತ್ ಸಮಾವೇಶ ಆಯೋಜನೆ ಮಾಡಲಾಗಿದೆ.
ಜೈ ಭಾರತ್ ಸಮಾವೇಶದ ಸಿದ್ಧತೆ ಪರಿಶೀಲಿಸಿದ ಡಿಕೆಶಿ
ಜೈ ಭಾರತ್ ಸಮಾವೇಶಕ್ಕೆ ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಕೋಲಾರದ ಟಮಕ ಬಳಿ ಸಮಾವೇಶ ನಡೆಯುವ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ (ಏ. 15) ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಡಿಕೆಶಿ ಜತೆಗೆ ಕೆ.ಎಚ್.ಮುನಿಯಪ್ಪ, ಎಂ.ಆರ್.ಸೀತಾರಾಂ, ಸಲೀಂ ಅಹಮದ್ ಸೇರಿ ಹಲವು ರಾಜ್ಯ ನಾಯಕರು ಇದ್ದರು. ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಸುಮಾರು ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ | Karnataka Election 2023: ಜೆಡಿಎಸ್ ಸೇರಿದ ಭಾರತೀ ಶಂಕರ್; ಸಿದ್ದರಾಮಯ್ಯ ವಿರುದ್ಧ ವರುಣದಲ್ಲಿ ದಲಿತ ಅಸ್ತ್ರ
ರಮೇಶ್ ಕುಮಾರ್ ನಿವಾಸಕ್ಕೆ ರಣದೀಪ್ ಸುರ್ಜೆವಾಲಾ ಭೇಟಿ
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಶಾಸಕ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನಿವಾಸಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶನಿವಾರ ಭೇಟಿ ನೀಡಿ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಸ್ಪರ್ಧೆ ಮಾಡದಿದ್ದರೆ ರಮೇಶ್ ಕುಮಾರ್ ಸೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ನಾಮಪತ್ರ ಸಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ತಾಲೂಕಿನ ರಮೇಶ್ ಕುಮಾರ್ ಅವರ ನಿವಾಸಕ್ಕೆ ರಣದೀಪ್ ಸುರ್ಜೇವಾಲಾ ಹಾಗೂ ಶಾಸಕ ಬೈರತಿ ಸುರೇಶ್ ಭೇಟಿ ನೀಡಿ, ಮುನಿಸು ಶಮನಗೊಳಿಸುವ ಪ್ರಯತ್ನ ನಡೆಸಿದರು.
ಜೈ ಭಾರತ್ ಕಾರ್ಯಕ್ರಮ ಕುರಿತು ಚರ್ಚಿಸಲು ಬಂದಿದ್ದೆ: ಸುರ್ಜೇವಾಲಾ
ಬಳಿಕ ಮಾತನಾಡಿದ ರಣದೀಪ್ ಸುರ್ಜೇವಾಲಾ, ಜೈ ಭಾರತ್ ಕಾರ್ಯಕ್ರಮ ಕುರಿತು ಚರ್ಚೆ ಮಾಡಲು ರಮೇಶ್ ಕುಮಾರ್ ಮನೆಗೆ ಬಂದಿದ್ದೆ. ಭಾನುವಾರ ನಡೆಯಲಿರುವ ಜೈ ಭಾರತ ಕಾರ್ಯಕ್ರಮ ದೊಡ್ಡ ಇತಿಹಾಸ ನಿರ್ಮಾಣ ಮಾಡಲಿದೆ. ರಮೇಶ್ ಕುಮಾರ್ ಅವರನ್ನು ತಂದೆಯ ಸ್ಥಾನದಲ್ಲಿ ನೋಡುತ್ತಿರುವೆ, ಅವರಿಂದ ಕಲಿಯುವುದು ಸಾಕಷ್ಟಿದೆ ಎಂದು ತಿಳಿಸಿದರು.
ಮೋದಿ ಉಪನಾಮವಿರುವ ನೀರವ್ ಮೋದಿ, ಲಲಿತ್ ಮೋದಿ ಸೇರಿ ಹಲವರು ಬ್ಯಾಂಕ್‌ಗಳ ಹಣ ಲೂಟಿ ಮಾಡಿ ವಿದೇಶಕ್ಕೆ ಓಡಿ ಹೋಗಿದ್ದಾರೆ. ಜನರ ಹಣ ಲೂಟಿ ಮಾಡಿದವರನ್ನು ಕಳ್ಳ ಎನ್ನುತ್ತಾರೆ. ಕಳ್ಳರನ್ನು ಕಳ್ಳರೆಂದು ರಾಹುಲ್ ಗಾಂಧಿ ಹೇಳಿರುವುದಲ್ಲಿ ತಪ್ಪೇನೂ ಇಲ್ಲ ಎಂದು ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವುದಕ್ಕೆ ಕಿಡಿಕಾರಿದರು.
ಇದನ್ನೂ ಓದಿ | Karnataka Election 2023 : ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟ; ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಇಲ್ಲ
ರಾಜ್ಯದಲ್ಲಿ ಕಮಿಷನ್ ಸರ್ಕಾರ ಆಡಳಿತದಲ್ಲಿದೆ. ಈ ಬಿಜೆಪಿ ಸರ್ಕಾರ ತೊಲಗಿಸಲು ಜೈ ಭಾರತ ಕಾರ್ಯಕ್ರಮ ನಡೆಯುತ್ತಿದೆ. 70ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಪಕ್ಷ ತೊರೆಯುತ್ತಿದ್ದಾರೆ. ಬಿಜೆಪಿ ಮುಳಗುತ್ತಿದೆ, ಕಾಂಗ್ರೆಸ್ ಪಕ್ಷ ಬಲಿಷ್ಠವಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ರಮೇಶ್ ಕುಮಾರ್ ಕೋಪ ಮಾಡಿಕೊಂಡಿಲ್ಲ,
ಅವರಿಗೆ ಕೆಲ ವಿಷಯಗಳಲ್ಲಿ ಅಸಮಾಧಾನವಿದೆ. ಆದರೆ, ನಮ್ಮ ಮನೆ ಒಡೆಯುವ ಕೆಲಸ ಮಾಡಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಇದರ ಬಗ್ಗೆ ನಾನು ಮಾತನಾಡಲು ಆಗುವುದಿಲ್ಲ ಎಂದು ತಿಳಿಸಿದರು.