Site icon Vistara News

ಡಿಕೆಶಿ-ಸಿದ್ದರಾಮಯ್ಯ ಒಗ್ಗಟ್ಟಿನ ಶಕ್ತಿ ರಾಜ್ಯದ ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದೆ ಎಂದ ರಾಹುಲ್‌ ಗಾಂಧಿ

ರಾಹುಲ್‌

ದಾವಣಗೆರೆ: ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪರಸ್ಪರ ಆಲಂಗಿಸಿಕೊಂಡದ್ದು ನೋಡಿ ನನಗೆ ತುಂಬ ಖುಷಿ ಆಯಿತು. ಇವರಿಬ್ಬರ ಒಗ್ಗಟ್ಟು, ಕಾಂಗ್ರೆಸ್‌ ಪಕ್ಷದ ಶಕ್ತಿ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎನ್ನುವುದು ನನಗೆ ಮನವರಿಕೆಯಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅವರು ಬುಧವಾರ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಹುಟುಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ಬೃಹತ್‌ ಸಿದ್ದರಾಮೋತ್ಸವದಲ್ಲಿ ಮಾತನಾಡಿದರು. ರಾಹುಲ್‌ ಗಾಂಧಿ ಅವರಿಗಿಂತ ಮೊದಲು ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು ಮಾತಿಗೆ ಮುನ್ನ ಸಿದ್ದರಾಮಯ್ಯ ಅವರನ್ನು ರೇಷ್ಮೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಡಿಕೆಶಿ ಅವರು ಸಿದ್ದರಾಮಯ್ಯ ಅವರನ್ನು ಆಲಿಂಗಿಸಿಕೊಂಡರು. ಬಳಿಕ ಇಬ್ಬರೂ ಕೈಗಳನ್ನು ಮೇಲೆತ್ತಿ ಒಗ್ಗಟ್ಟಿನ ಸಂಕೇತ ತೋರಿದರು. ಇದನ್ನೇ ರಾಹುಲ್‌ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಸಿದ್ದರಾಮಯ್ಯ ಅವರ ಶಕ್ತಿಯನ್ನು, ಆಡಳಿತವನ್ನು ಹೊಗಳಿದ ರಾಹುಲ್‌ ಡಿ.ಕೆಶಿ ಅವರನು ಒಬ್ಬ ಒಳ್ಳೆಯ ಸಂಘಟಕನೆಂದು ಬೆನ್ನು ತಟ್ಟಿದರು. ʻʻಡಿಕೆಶಿ ಅವರು ನೀವು ಅಭೂತಪೂರ್ವವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಅತ್ಯಂತ ಸ್ಪಷ್ಟವಾಗಿ ಹೇಳ್ತೇನೆ. ಈ ಒಗ್ಗಟ್ಟಿನ ಪ್ರದರ್ಶನ ಬಿಜೆಪಿ ಆರೆಸ್ಸೆಸ್‌ನ್ನು ಸೋಲಿಸುವ ಶಕ್ತಿಯನ್ನು ಹೊಂದಿದೆʼʼ ಎಂದರು ರಾಹುಲ್.

ರಾಜ್ಯದಲ್ಲಿ ವಿಪರೀತ ಮಳೆಯಿಂದ ಉಂಟಾಗಿರುವ ಅನಾಹುತದಲ್ಲಿ ಪ್ರಾಣ ಕಳೆದುಕೊಂಡಿರುವವರು, ಸಂಕಷ್ಟದಲ್ಲಿರುವ ಜನರಿಗೆ ಸಾಂತ್ವನ ಹೇಳುವ ಮೂಲಕ ತಮ್ಮ ಮಾತು ಆರಂಭಿಸಿದರು ರಾಹುಲ್‌ ಗಾಂಧಿ.

ರಾಹುಲ್‌ ಮಾತುಗಳು

ಸಿದ್ದರಾಮಯ್ಯ, ಅವರ ವಿಚಾರಗಳು ನನಗೆ ಇಷ್ಟ
-ನಾನಿಲ್ಲಿ ಸಂತೋಷ, ಸಂಭ್ರಮದ ಕಾರ್ಯಕ್ರಮಕ್ಕೆ ಬಂದಿದ್ದೇನೆ.‌ ನಾನು ಸಾಮಾನ್ಯವಾಗಿ ಯಾವುದೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಇಲ್ಲಿಗೆ ಬಂದಿರುವುದು ನಾನು ಸಿದ್ದರಾಮಯ್ಯ ಅವರೊಂದಿಗೆ ಇರುವ ವಿಶೇಷವಾಗಿರುವ ಬಾಂಧವ್ಯದ ಕಾರಣಕ್ಕಾಗಿ. ಒಬ್ಬ ವ್ಯಕ್ತಿಯಾಗಿ ಸಿದ್ದರಾಮಯ್ಯ ಅವರನ್ನು ನಾನು ತುಂಬ ಇಷ್ಟಪಡುತ್ತೇನೆ. ಅದೇ ಹೊತ್ತಿಗೆ ನಾನು ಅವರ ವಿಚಾರಗಳಿಗೂ ನನಗೆ ಸಹಮತವಿದೆ. ಬಡವರು ಮತ್ತು ಶೋಷಿತರ ಬಗ್ಗೆ ಅವರಿಗಿರುವ ಕಾಳಜಿ ಬಗ್ಗೆ ನನಗೆ ಖುಷಿ ಇದೆ. ಐದು ವರ್ಷ ಆಡಳಿತ ನಡೆಸಿದ್ದರ ಬಗ್ಗೆ ನನಗೆ ಸಂತೋಷವಿದೆ. ಅವರಿಗೆ ಕರ್ನಾಟಕದ ಎಲ್ಲ ಸಮಸ್ಯೆಗಳ ಅರಿವು ಇದೆ. ಅವರ ಮುಖ್ಯವಾದ ಧೋರಣೆ ಬಡವರ ಪರವಾಗಿದೆ.

ಸಾಮರಸ್ಯ ಒಡೆದ ಬಿಜೆಪಿ
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಜನರನ್ನು ಒಂದುಗೂಡಿಸಿತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಿತು. ಆದರೆ, ಈಗ ಬಿಜೆಪಿ ಸರಕಾರ ಅದೆಲ್ಲವೂ ಒಡೆದು ಹಾಕಿದೆ. ಇಡೀ ಕರ್ನಾಟಕದಲ್ಲಿ ಬಿಜೆಪಿ ಸರಕಾರದಲ್ಲಿ ಕಣ್ಣಿಗೆ ರಾಚುವಂತೆ ಭ್ರಷ್ಟಾಚಾರವಿದೆ. ಅವರು ಬಸವಣ್ಣನ ಪ್ರತಿಮೆ ಮುಂದೆ ಒಳ್ಳೆಯ ಆಡಳಿತದ ಪ್ರತಿಜ್ಞೆ ಮಾಡಿದ್ದರು. ಆದರೆ, ಜನರನ್ನು ಕೊಳ್ಳೆ ಹೊಡೆದರು. ಬಸವಣ್ಣ ಅವರು ಎಲ್ಲರೂ ಪ್ರಾಮಾಣಿಕರಾಗಿರಬೇಕು, ಕಾಯಕವೇ ಕೈಲಾಸ ಎಂದರು. ಬಿಜೆಪಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ.

ನಮಗೆ ಬಹುತ್ವ ಮುಖ್ಯ
ಕಾಂಗ್ರೆಸ್‌ ಪಕ್ಷ ರಾಜ್ಯದ ಸಂಸ್ಕೃತಿ, ಭಾಷೆ ಮತ್ತು ಜೀವನದ ಬಗ್ಗೆ ನಂಬಿಕೆ ಹೊಂದಿದೆ. ಎಲ್ಲ ಭಾಷೆ, ಸಂಸ್ಕೃತಿ, ಭಾಷೆಗಳು ಸೇರಿಯೇ ಒಂದು ದೇಶವಾಗುವುದು. ಆದರೆ, ಬಿಜೆಪಿ ಒಂದೇ ವಿಷಯವನ್ನು ಕರ್ನಾಟದಕ ಮೇಲೆ ಹೇರಲು ಯತ್ನ ಮಾಡುತ್ತಿದೆ. ಬಿಜೆಪಿಯವರು ಕರ್ನಾಟಕವನ್ನು ವಸಾಹತು ಮಾಡಲು ಪ್ರಯತ್ನ ಮಾಡುತ್ತಿದೆ. ನಾವು ಕರ್ನಾಟಕದ ಅಭಿವೃದ್ಧಿಗೆ, ಸ್ವಾಭಿಮಾನಕ್ಕೆ ಬದ್ಧರಾಗಿದ್ದೇವೆ.

ಯೋಜನೆಗಳನ್ನು ಹೋಲಿಸಿ ನೋಡಿ
ನಾವು ಈಗಲೂ ಸಿದ್ದರಾಮಯ್ಯ ಸರಕಾರದ ಅನ್ನ ಭಾಗ್ಯ, ಕೃಷಿ ಭಾಗ್ಯ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್‌, ಕ್ಷೀರ ಭಾಗ್ಯ ನೆನಪು ಮಾಡಿಕೊಳ್ಳುತ್ತಿದ್ದೇವೆ. ನಾನು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಜತೆ ಇಂದಿರಾ ಕ್ಯಾಂಟಿನ್‌ಗೆ ಹೋಗಿದ್ದೆ. ಅಲ್ಲಿ ನಾವು ಒಳ್ಳೆಯ ಆಹಾರ ನೀಡಿದ್ದರು. ಕಾಂಗ್ರೆಸ್‌ ಪಕ್ಷ ರಾಷ್ಟ್ರ ಮತ್ತು ರಾಜ್ಯದಲ್ಲಿ ಅಳವಡಿಸಿದ ಯೋಜನೆಗಳನ್ನು ನಾನು ಹೇಳಬಲ್ಲೆ. ಕರ್ನಾಟಕವನ್ನು ಪ್ರಪಂಚದ ಭೂಪಟದಲ್ಲಿ ಕಾಣಿಸಿದ್ದು ಕಾಂಗ್ರೆಸ್‌ ಸರಕಾರ. ರಾಜೀವ್‌ ಗಾಂಧಿ ಅವರು ಕರ್ನಾಟಕವನ್ನು ಕಂಪ್ಯೂಟರ್‌ ಕ್ಷೇತ್ರದಲ್ಲಿ ಮೇಲೆ ತಂದರು.

ಇಲ್ಲಿ ಬೇಡ ಅಮೆರಿಕದಲ್ಲಿ ಹೋಗಿ ಕೇಳಿ
ನೀವು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಬೇಕಿದ್ದರೆ ಅಮೆರಿಕದಲ್ಲಿ ಹೋಗಿ ಕೇಳಿ. ಅವರು ಕರ್ನಾಟಕ ಇಷ್ಟು ಕೆಟ್ಟದಾಗಿ ಎಂದೂ ಇರಲಿಲ್ಲ ಎಂದು ಹೇಳುತ್ತಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸಾಮರಸ್ಯ ಇತ್ತು ಎಂದು ಹೇಳುತ್ತಾರೆ. ಆಗ ಎಲ್ಲ ಸಮುದಾಯಗಳೂ ಶಾಂತಿ, ಸಾಮರಸ್ಯದಿಂದ ಬದುಕು ವಾತಾವರವಣ ಇತ್ತು. ಆಗ ಯಾರಿಗೂ ಭಯ ಎನ್ನುವುದು ಇರಲಿಲ್ಲ. ಯಾವುದೇ ಉದ್ಯಮ, ವ್ಯಾಪಾರ ಯಶಸ್ವಿ ಆಗಲು ಈ ವಾತಾವರಣ ಬೇಕು.

Exit mobile version