ಲಿಂಗಸುಗೂರು: ವಿವಿಧ ವಿನೂತನ ಚಟುವಟಿಕೆಗಳ ಮೂಲಕ ತಾಲೂಕಿನಲ್ಲಿ ಖ್ಯಾತಿಯಾದ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಸಾಲಿನ ಮಲೆನಾಡಿನ ಗಾಂಧಿ ದಿ. ಎಚ್.ಜಿ. ಗೋವಿಂದೇಗೌಡ (H.G. Govindegowda) ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಮುಡಿಗೇರಿದೆ.
ಶಾಲೆಯೊಳಗೆ ಕಾಲಿಟ್ಟಿರೆ ಇದು ಅರಣ್ಯ ಪ್ರದೇಶವೋ ಎನ್ನುವಂತೆ ಇರುವ ಅಲ್ಪಸ್ವಲ್ಪ ಜಾಗದಲ್ಲಿ ಉತ್ತಮ ಪರಿಸರ ಬೆಳೆಸಿ ಮಕ್ಕಳಿಗೆ ಪಠ್ಯ ಜತೆ ಪರಿಸರ ಸಂರಕ್ಷಣೆ ಬಗ್ಗೆ ಪ್ರಜ್ಞೆ ಮೂಡಿಸಲಾಗುತ್ತಿದೆ. ಜತೆಗೆ ಪಕ್ಷಿಸಂಕುಲ ಉಳಿವಿಗಾಗಿ ಅವುಗಳ ಆಹಾರ ಹಾಗೂ ಕುಡಿಯಲು ನೀರಿನ ಅರವಟಿಕೆ ಮಾಡಲಾಗಿದೆ. ಈಗಾಗಲೇ ಶಾಲೆಗೆ “ಹಸಿರು ಶಾಲೆ” ಎಂದು ಪ್ರಶಸ್ತಿ ಲಭಿಸಿದೆ.
ವಿಭಿನ್ನ ಚಟುವಟಿಕೆ
ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಪಠ್ಯ ಭೋದನೆ ಮಾತ್ರವಲ್ಲದೆ ಮಕ್ಕಳಿಗೆ ಕೃಷಿಯತ್ತ ಒಲವು ಮೂಡಿಸುವ ಹಿನ್ನಲೆಯಲ್ಲಿ ಬ್ಯಾಗ್ ರಹಿತ ದಿನದಂದು ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವುದು, ಶಾಲೆಯಲ್ಲಿ ಮಕ್ಕಳಿಗೆ ವ್ಯಾಪಾರ ವ್ಯವಹಾರದ ಬಗ್ಗೆ ಮಾಹಿತಿ ಒದಗಿಸುವುದು, ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಚುನಾವಣೆ ಮೂಲಕ ಶಾಲಾ ಹಂತದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಮಾಡುವುದು ಇದರಿಂದ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಚುನಾವಣಾ ಬಗ್ಗೆ ಅರಿವು ಮೂಡಿಸುವ ಸೇರಿದಂತೆ ವಿಭಿನ್ನ ಕಾರ್ಯಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.
ರಾಜ್ಯಕ್ಕೆ ಒಂದೇ ಶಾಲೆ ಆಯ್ಕೆ
ಶಾಲೆಯಲ್ಲಿ ಮೂಲಸೌಕರ್ಯ, ಶಾಲಾ ಹಂತದಲ್ಲಿ ಕೈಗೊಂಡ ಚಟುವಟಿಕೆಗಳ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಗ್ರಾಮದಲ್ಲಿ ಶಿಕ್ಷಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ನಡೆಸುವ ಮೌಲ್ಯಮಾಪನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಶಾಲೆಗೆ ಮಲೆನಾಡಿನ ಗಾಂಧಿ, ಮಾಜಿ ಶಿಕ್ಷಣ ಸಚಿವ ದಿ.ಎಚ್.ಜಿ.ಗೋವಿಂದೇಗೌಡ ಅತ್ಯುತ್ತಮ ಸರ್ಕಾರಿ ಶಾಲೆಗೆ ಪ್ರಶಸ್ತಿಗೆ ಎಲ್ಲಾ ಅರ್ಹತೆ ಹೊಂದಿದ ತಾಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ ಮಾಡಿದೆ.
ನ.1 ರಂದು ಪ್ರಶಸ್ತಿ ಪ್ರದಾನ
ಎಚ್.ಜಿ.ಗೋವಿಂದೇಗೌಡ ಪ್ರಶಸ್ತಿಗೆ ಆಯ್ಕೆಯಾದ ಬೆಂಡೋಣಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಜತೆ ನೀಡುವ ನಗದು ಪುರಸ್ಕಾರದ ಮೊತ್ತದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆ, ಶಾಲೆಯಲ್ಲಿ ಮೂಲಸೌಕರ್ಯಗಳಾದ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯ, ಮಕ್ಕಳ ಸೃಜನಶೀಲತೆ ಹೆಚ್ಚಿಸುವ ಉದ್ದೇಶಕ್ಕಾಗಿ ಬಳಕೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ನಮ್ಮ ಶಾಲೆಯಲ್ಲಿ ವಿಭಿನ್ನ ಚಟುವಟಿಕೆಗಳು ಹಾಗೂ ಶಾಲೆಯ ಉತ್ತಮ ಪರಿಸರ ಸೇರಿದಂತೆ ಇನ್ನಿತರ ಮಾನದಂಡಗಳನ್ನು ಆದರಿಸಿ ಎಚ್.ಜಿ. ಗೋವಿಂದೇಗೌಡ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಮಗೆ ಖುಷಿ ತಂದಿದೆ ಮತ್ತು ಜವಾಬ್ದಾರಿ ಹೆಚ್ಚಿಸಿದೆ.
-ವೈ.ಚಂದ್ರ, ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಬೆಂಡೋಣಿ