Site icon Vistara News

Raichur News: ಮಾದರಿಯಾದ ʼಸಂಡೆ ಫಾರ್ ಸೋಷಿಯಲ್ ವರ್ಕ್ʼ ಅಭಿಯಾನ

Sunday for Social Work campaign at lingasugur

ಲಿಂಗಸುಗೂರು: ಭಾನುವಾರದ (Sunday) ರಜೆಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಇಚ್ಛೆಯಿಂದ ಯುವಕರ ತಂಡವೊಂದು “ಸಂಡೆ ಫಾರ್ ಸೋಷಿಯಲ್ ವರ್ಕ್‌”ಎಂಬ ಅಭಿಯಾನವನ್ನು ಹಮ್ಮಿಕೊಂಡು ಇತರರಿಗೂ (Raichur News) ಮಾದರಿಯಾಗಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ರಾಮಣ್ಣ ಹಂಪರಗುಂದಿ ಅವರು ತಮ್ಮ ಗೆಳೆಯರ ಜತೆಗೂಡಿಕೊಂಡು ಅಭಿನಂದನ್ ಸಂಸ್ಥೆ ಹುಟ್ಟುಹಾಕಿ ಆ ಸಂಸ್ಥೆಯ ಮೂಲಕ ಪ್ರತಿ ಭಾನುವಾರದ ರಜಾ ದಿನವನ್ನು ಸುಖಾಸುಮ್ಮನೆ ವ್ಯರ್ಥ ಮಾಡದೇ ವಾರಕ್ಕೊಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸ್ವಚ್ಛತೆ ಕಾರ್ಯ ಕೈಗೆತ್ತಿಕೊಳ್ಳುವುದು ವಾರದ ಕಾರ್ಯಚಟುವಟಿಕೆಯಾಗಿದೆ.

142 ವಾರಗಳು

ಅಭಿನಂದನ್ ಸಂಸ್ಥೆಯಿಂದ ಈಗಾಗಲೇ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನ ಹಮ್ಮಿಕೊಂಡು ಇಲ್ಲಿವರೆಗೆ ಪ್ರಸ್ತುತ 142 ವಾರಗಳನ್ನು ಪೂರೈಸಿ ಮುನ್ನಡೆದಿದೆ. ಮಸ್ಕಿ, ಲಿಂಗಸುಗೂರು ತಾಲೂಕು ಸೇರಿ ಅಕ್ಕಪಕ್ಕದ ತಾಲೂಕು, ಜಿಲ್ಲೆಗಳಲ್ಲೂ ಈ ಅಭಿಯಾನವನ್ನು ಕೈಗೊಂಡಿದೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಇಂದೂ ಇಳಿಕೆ; ರಾಜಧಾನಿಯಲ್ಲಿ ಹೀಗಿದೆ ದರ

ಸಂಡೆ ಫಾರ್ ಸೋಷಿಯಲ್ ವರ್ಕ್‌ ಅಭಿಯಾನದ ಮೂಲಕ 40 ಸರ್ಕಾರಿ ಶಾಲೆಗಳು, 18 ಉದ್ಯಾನವನಗಳು, 50ಕ್ಕೂ ಅಧಿಕ ಬಸ್ ತಂಗುದಾಣ, ನಿಲ್ದಾಣಗಳು, 33 ದೇವಸ್ಥಾನಗಳು ಹಾಗೂ ಒಂದು ಸ್ಮಶಾನವನ್ನು ಸ್ವಚ್ಛತೆಗೊಳಿಸಲಾಗಿದೆ. ಬರೀ ಸ್ವಚ್ಛಗೊಳಿಸುವುದಷ್ಟೇ ಅಲ್ಲ ಬಸ್ ತಂಗುದಾಣ, ಶಾಲಾ ಕೊಠಡಿಗಳಿಗೆ ಬಣ್ಣ ಬಳಿದು ಹೊಸತನ ನೀಡಲಾಗುತ್ತಿದೆ.

ಈ ಭಾನುವಾರ ಲಿಂಗಸುಗೂರು ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿರುವ ಬಸ್ ತಂಗುದಾಣ ಸ್ವಚ್ಛತೆ ಕಾರ್ಯಕೈಗೊಂಡಿದ್ದಾರೆ. ಈ ಸೇವಾ ಕಾರ್ಯದಲ್ಲಿ ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಡಿಗೇರ, ಅಮಿತ್ ಕುಮಾರ್ ಪುಟ್ಟಿ, ಕಿಶೋರ್ ಹಾಗೂ ಇನ್ನಿತರಿದ್ದರು.

ಇದನ್ನೂ ಓದಿ: SSLC Exam 2024: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಸಿಗದ ಹಾಲ್‌ ಟಿಕೆಟ್‌; ಡಿಸಿ ಕಚೇರಿ ಮುಂದೆ ಅಣಕು ಪರೀಕ್ಷೆ ಬರೆದು ಆಕ್ರೋಶ

ಭಾನುವಾರದ ರಜೆಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಇಚ್ಛೆಯಿಂದ ಆರಂಭವಾಗಿರುವುದೇ ಈ ಸಂಡೆ ಫಾರ್ ಸೋಷಿಯಲ್ ವರ್ಕ್. ಸ್ವಚ್ಛ ಭಾರತದ ಕನಸನ್ನು ನನಸಾಗಿ ಮಾಡುವ ಪ್ರಯತ್ನದಲ್ಲಿ ನಾವುಗಳು ಈ ಅಭಿಯಾನದ ಮೂಲಕ ಕಾರ್ಯನಿರತರಗಿದ್ದೇವೆ. ಒಂದು ವಾರವೂ ಬಿಡದೇ ಇಲ್ಲಿಯವರೆಗೆ 142 ವಾರಗಳ ಸೇವಾ ಕಾರ್ಯವನ್ನು ನಾವು ಕೈಗೊಂಡಿದ್ದೇವೆ. ಈ ಅಭಿಯಾನದಡಿಯಲ್ಲಿ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ, ದೇವಸ್ಥಾನ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನವನಗಳನ್ನು ಸ್ವಚ್ಚಗೊಳಿಸಲಾಗಿದೆ. ಯಾವುದೇ ಗ್ರಾಮ, ಪಟ್ಟಣದಲ್ಲಿ ಜನರಿಗೆ ಉಪಯುಕ್ತವಾಗುವ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯ ಕಾರ್ಯವಿದ್ದರೆ ತಿಳಿಸಿದರೆ ನಾವು ಸ್ವಚ್ಚತೆಗೆ ಮುಂದಾಗುತ್ತೇವೆ ಎಂದು ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ತಿಳಿಸಿದ್ದಾರೆ.

Exit mobile version