ರಾಯಚೂರು: ಅಕ್ಕ- ತಂಗಿಯರಿಬ್ಬರು ಕಾಲು ಜಾರಿ ಕೆರೆಗೆ (Drowned in River) ಬಿದ್ದಿದ್ದಾರೆ. ಅಕ್ಕ ನೀರುಪಾಲಾದರೆ, ತಂಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರಾಯಚೂರಿನ ಮಾನ್ವಿ ತಾಲೂಕಿನ ಪಾಸಲ್ಬಂಡಾ ಕ್ಯಾಂಪ್‌ನಲ್ಲಿ ಈ ದುರ್ಘಟನೆ ನಡೆದಿದೆ. ಲಕ್ಷ್ಮೀ (19)ಮೃತ ದುರ್ದೈವಿ.
ತಂಗಿ ಕವಿತಾಳನ್ನು (17) ಸ್ಥಳೀಯರು ರಕ್ಷಿಸಿದ್ದು, ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಲಕ್ಷ್ಮೀ ಮಾನ್ವಿ ಪಟ್ಟಣದ ವೆಂಕಟೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ತಂಗಿ ಜತೆ ಮಧ್ಯಾಹ್ನದ ಸಮಯ ಕುರಿ ಮೇಯಿಸಲು ಹೋಗಿದ್ದಳು.
ಮನೆಗೆ ಹೋಗುವಾಗ ಮುನ್ನ ಕುರಿಗಳಿಗೆ ನೀರು ಕುಡಿಸುವ ಸಲುವಾಗಿ ಕೆರೆ ಬಳಿ ಬಂದಿದ್ದಾರೆ. ಈ ವೇಳೆ ಅಚಾನಕ್ ಆಗಿ ಅಕ್ಕ-ತಂಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಈಜು ಬಾರದೇ ಇದ್ದಿದ್ದರಿಂದ ಲಕ್ಷ್ಮೀ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ. ಅಲ್ಲೆ ಇದ್ದ ಸ್ಥಳೀಯರು ಕವಿತಾಳನ್ನು ರಕ್ಷಿಸಿದ್ದಾರೆ.
ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ: Murder Case : ಮಗಳಿಗೆ ಆಸ್ತಿ ಬರೆದಿದ್ದಕ್ಕೆ ಸಿಟ್ಟು; ತಂದೆಯನ್ನು ಅಟ್ಟಾಡಿಸಿ ಕೊಂದ ಪಾಪಿ ಮಗ
ಕಾವೇರಿ ನದಿಗಿಳಿದ ವಿದ್ಯಾರ್ಥಿ ಈಜಲು ಬಾರದೆ ನೀರುಪಾಲು
ಕೊಡಗು: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ (Drowned in River) ನೀರುಪಾಲಾಗಿದ್ದಾನೆ. ವಿದ್ಯಾರ್ಥಿ ಹೃತ್ವಿಕ್ (16) ಮೃತ ದುರ್ದೈವಿ. ಕೊಡಗು ಜಿಲ್ಲೆಯ ಕುಶಾಲನಗರದ ಕಣಿವೆ ಗ್ರಾಮದ ಕಾವೇರಿ ನದಿಯಲ್ಲಿ ಘಟನೆ ನಡೆದಿತ್ತು.
ಮೈಸೂರು ಮೂಲದ ಹೃತ್ವಿಕ್ ಫೆ.25ರ ಭಾನುವಾರ ಕುಶಾಲನಗರದ ಸ್ನೇಹಿತನ ಮನೆಗೆ ಬಂದಿದ್ದ. ಸ್ನೇಹಿತರ ಜತೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ. ನೀರಿನ ಆಳಕ್ಕೆ ಜಿಗಿದ ಹೃತ್ವಿಕ್ ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ. ಘಟನೆ ಸಂಭವಿಸಿದಾಗ ಹೃತ್ವಿಕ್‌ನನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಣಂಬೂರು ಬೀಚ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ನಾಪತ್ತೆ
ಮಂಗಳೂರು: ನಗರದ ಪಣಂಬೂರು ಬೀಚ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ಬಾಗಲಕೋಟೆ ಮೂಲದ, ಪ್ರಸ್ತುತ ಮೀನಕಳಿಯಲ್ಲಿ (Mangalore News) ವಾಸವಾಗಿರುವ ತುಕರಾಮ (13) ನಾಪತ್ತೆಯಾದ ಬಾಲಕ.
ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತುಕರಾಮ, ಸಂಜೆ ಗೆಳೆಯರೊಡನೆ ಈಜಾಡಲು ತೆರಳಿದ್ದ ಎನ್ನಲಾಗಿದೆ. ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಸಿಲುಕಿ ಬಾಲಕ ನಾಪತ್ತೆಯಾಗಿದ್ದಾನೆ. ಜೀವರಕ್ಷಕ ದಳ, ಸ್ಥಳೀಯರಿಂದ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪಣಂಬೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ