ರಾಯಚೂರು: ಕಾಡುಪ್ರಾಣಿಗಳ ಹಾವಳಿ (Wild Animal Attack) ಹೆಚ್ಚಾಗಿದ್ದು, ಜನ-ಸಾಮಾನ್ಯರು ಆತಂಕದಲ್ಲೇ ಓಡಾಡುವಂತಾಗಿದೆ. ಆಹಾರ ಅರಸಿ ನಾಡಿಗೆ ಕಾಲಿಡುತ್ತಿರುವ ಪ್ರಾಣಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಜತೆಗೆ ಸಾಕುಪ್ರಾಣಿಗಳನ್ನು ಕೊಂದು ಎತ್ತಿಕೊಂಡು ಹೋಗುತ್ತಿವೆ. ಸದ್ಯ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಮೂವರ ಮೇಲೆ ಚಿರತೆ (Leopard attack) ದಾಳಿ ನಡೆಸಿದೆ.
ಚಿರತೆ ದಾಳಿಯಿಂದಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮಲ್ಲಣ್ಣ, ರಂಗನಾಥ್, ಹನಮೇಶ ಕಮದಾಳ ಗಾಯಾಳುಗಳು. ಸದ್ಯ ಗಾಯಾಳುಗಳನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂವರು ಜಮೀನಿಗೆ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ಚಿರತೆಯು ಮೂವರ ಮೇಲೂ ಎರಗಿ ದಾಳಿ ಮಾಡಿ ಗಾಯಗೊಳಿಸಿದೆ.
ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಇನ್ನೂ ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಮದಾಳು,ಯರಮಸಾಳ, ಜೇರಬಂಡಿ, ಗುಂಡಗುರ್ತಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಸೆರೆಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Attempt To Murder: ಬಾಯಿಗೆ ಬಂದಂತೆ ಬೈದ್ರು ಅಂತ ಸಿಟ್ಟು; ಮಾಲೀಕನಿಗೆ ಹೊಡೆದು ಕೋಮಾಗೆ ಕಳಿಸಿದ ಸಪ್ಲೇಯರ್!
ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ
ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೆಡುವು ಗ್ರಾಮಕ್ಕೆ ನುಗ್ಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಕರಡಿಯನ್ನು ಕೊನೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗೆ ಅಟ್ಟಿದ್ದಾರೆ. ಕರಡಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ (Wild Animals Attack).
ಕೂಡ್ಲಿಗಿ ತಾಲೂಕಿನ ಕುದುರೆಡವು ಗ್ರಾಮಕ್ಕೆ ಸಂಜೆ 6:30ಕ್ಕೆ ಬಂದಿದ್ದ ಕರಡಿ, ಹುಣಸೆ ಮರವೇರಿ ಕುಳಿತು ಬಿಟ್ಟಿತು. ಕರಡಿ ನೋಡಲು ನೂರಾರು ಗ್ರಾಮಸ್ಥರನ್ನು ನೆರೆದು ಗದ್ದಲದ ವಾತಾವಣ ಮೂಡಿದ್ದರಿಂದ ಬೆದರಿದ ಕರಡಿ ಮರ ಬಿಟ್ಟು ಕೆಳಗೆ ಇಳಿಯಲಿಲ್ಲ. ಆತಂಕಗೊಂಡ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ನೆಮ್ಮದಿಯ ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು
ಸ್ಥಳಕ್ಕಾಗಮಿಸಿದ ಗುಡೇಕೋಟೆ ಕರಡಿಧಾಮದ ಅರಣ್ಯಾಧಿಕಾರಿಗಳು, ಪೋಲೀಸರು ಕರಡಿಯನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. ʼʼಇದು ಗುಡೇಕೋಟೆ ಕರಡಿಧಾಮದಿಂದ ತಪ್ಪಿಸಿಕೊಂಡು ಬಂದ ಕರಡಿಯಾಗಿದ್ದು, ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಹರಸಾಹಸ ಪಡಬೇಕಾಯಿತು. ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ರಾತ್ರಿ ಒಂದು ಗಂಟೆ ನಂತರ ಕರಡಿಯನ್ನು ಕಾಡಿಗೆ ಅಟ್ಟಿದರುʼʼ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು. ಕರಡಿ ಏರಿದ್ದ ಮರದ ಸಮೀಪಕ್ಕೆ ತೆರಳಲು ಅಧಿಕಾರಿಗಳು ಸಾರ್ವಜನಿಕರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಕರಡಿ ಸುರಕ್ಷಿತವಾಗಿ ಕಾಡಿಗೆ ತೆರಳಿದ ಹಿನ್ನಲೆಯಲ್ಲಿ ಕುದುರೆಡವು ಗ್ರಾಮಸ್ಥರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ಕಂಪ್ಲಿಯ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿ ಪ್ರತ್ಯಕ್ಷ!
ಕಂಪ್ಲಿ: ಎರಡು ಕರಡಿಗಳು ಪ್ರತ್ಯಕ್ಷವಾದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಮಂಗಳವಾರ ಬೆಳಗ್ಗೆ (Ballari News) ನಡೆದಿದೆ. ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಗ್ರಾಮಕ್ಕೆ ಮರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎರಡು ಕರಡಿಗಳು ಗ್ರಾಮದಲ್ಲೂ ಕಾಣಿಸಿಕೊಂಡಿವೆ.
ಗ್ರಾಮಸ್ಥರು ಕೂಗಾಡುತ್ತ ಗಲಾಟೆ ಮಾಡಿದ್ದರಿಂದ ಒಂದು ಕರಡಿ ದೇವಸಮುದ್ರ- ಕಂಪ್ಲಿ ಸಂಪರ್ಕಿಸುವ ಕ್ರಾಸ್ ಕಡೆ ಓಡಿ ಹೋದರೆ ಮತ್ತೊಂದು ಕರಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತುರಮಂದಿ ಬಸವೇಶ್ವರ ದೇವಸ್ಥಾನದ ಕಡೆಗೆ ಓಡಿ ಹೋಗಿದೆ. ಗ್ರಾಮದಲ್ಲಿ ಕರಡಿ ಕಂಡಂತಹ ಕೆಲ ಜನರು ದಿಕ್ಕಾಪಲಾಗಿ ಓಡಿ ಹೋದರೆ ಇನ್ನು ಕೆಲ ಜನರ ಗುಂಪು ಅಲ್ಲಿಂದ ಚದುರಿಸಲು ಪ್ರಯತ್ನಿಸಿದಾಗ ಗ್ರಾಮದ ಹೊರ ವಲಯದ ಗೋದಾಮು ಬಳಿ ಬೇಲಿಯಲ್ಲಿ ಅವಿತು ಕುಳಿತಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಗ್ರಾಮಕ್ಕೆ ಆಗಮಿಸಿ ಕರಡಿ ಸೆರೆಗೆ ಬೋನ್ ಅಳವಡಿಸಿದ್ದಾರೆ. ಹೊಸಪೇಟೆ ವಲಯ ಅರಣ್ಯ ಅಧಿಕಾರಿ ಭರತ್ ರಾಜ್ ತಂಡದವರು ಕರಡಿ ಸೆರೆಗಾಗಿ ಸದ್ಯ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ