Site icon Vistara News

Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

theft Case in Raichur

ರಾಯಚೂರು: ಅವರಿಬ್ಬರು ಜೀವದ ಗೆಳತಿಯರು.. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗುತ್ತಿದ್ದರು. ಹೀಗಿದ್ದಾಗ ಸ್ನೇಹಿತೆ ಸಾಲದ ಸುಳಿಗೆ ಸಿಲುಕಿದ್ದಳು ಎಂದು ಮಾಸ್ಟರ್‌ ಪ್ಲಾನ್‌ ಮಾಡಿ ಕಳ್ಳತನದ (theft Case) ನಾಟಕವಾಡಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಯಲಾಗಿ ಸಿಕ್ಕಿಬಿದ್ದಿದ್ದಾರೆ. ಮಹಿಳೆಯರಿಬ್ಬರ ಈ ಸ್ನೇಹಕ್ಕೆ ಮೆಚ್ಚಬೇಕೋ ಅಥವಾ ಕಳ್ಳತನದ ಹೈಡ್ರಾಮಾ ಮಾಡಿ ಸೃಷ್ಟಿಸಿದ ಸಮಸ್ಯೆಗೆ ಬೈಯಬೇಕೋ ಎಂದು ಪೊಲೀಸರೇ (Raichur News) ತಲೆಕೆಡಿಸಿಕೊಂಡಿದ್ದಾರೆ.

ರಾಜೇಶ್ವರಿ ಮತ್ತು ರೇಣುಕಾ ಇವರಿಬ್ಬರು ರಾಯಚೂರು ನಗರದ ಜಲಾಲ್ ನಗರದ ನಿವಾಸಿಗಳು. ಸಾಲದ ಸುಳಿಯಲ್ಲಿ ಸಿಲುಕಿದ ಗೆಳತಿಗಾಗಿ ಮತ್ತೊಬ್ಬಳು ಐನಾತಿ ಐಡಿಯಾ ಮಾಡಿದ್ದರು. ಮೈಮೇಲಿದ್ದ ಬಂಗಾರವನ್ನು ತಾವೇ ಬಚ್ಚಿಟ್ಟು ಕಳ್ಳತನದ ಹೈಡ್ರಾಮಾ ಮಾಡಿದ್ದು, ಪೊಲೀಸರ ತನಿಖೆಯಲ್ಲಿ ಕಳ್ಳತನದ ಅಸಲಿಯತ್ತು ಬಯಲಾಗಿದೆ.

ರಾಜೇಶ್ವರಿ ಪತಿ 10 ಲಕ್ಷ ರೂ. ಸಾಲವನ್ನು ರೇಣುಕಾಗೆ ಕೊಟ್ಟಿದ್ದರು. ಆದರೆ ಸಾಲ ತೀರಿಸಲು ಆಗದೆ ರೇಣುಕಾ ಸಂಕಷ್ಟಕ್ಕೆ ಸಿಲುಕಿದ್ದಳು. ಗೆಳತಿ ರೇಣುಕಾಳ ಕಷ್ಟ ನೋಡಲು ಆಗದೆ ಆಕೆಯನ್ನು ಪಾರು ಮಾಡಲು ರಾಜೇಶ್ವರಿ ತನ್ನ ಚಿನ್ನಾಭರಣ ಕೊಡಲು ನಿರ್ಧರಿಸಿದ್ದಳು. ಆದರೆ ಚಿನ್ನಾಭರಣ ಕೊಟ್ಟರೆ ಪತಿ ಎಲ್ಲಿ ಪ್ರಶ್ನೆ ಮಾಡುತ್ತಾರೋ ಎಂದು ರಾಜೇಶ್ವರಿ ಆತಂಕಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

ಇದಕ್ಕಾಗಿ ರಾಜೇಶ್ವರಿ ಮಾಸ್ಟರ್‌ ಪ್ಲಾನ್‌ವೊಂದನ್ನು ಮಾಡಿದ್ದರು. ಚಿನ್ನಾಭರಣ ಕಳವು ಆಯಿತು ಎಂದು ಕಳ್ಳತನದ ನಾಟಕ ಮಾಡಿದ್ದರು. ಅದರಂತೆ ಕಳೆದ 23ರಂದು ಮನ್ಸಲಾಪೂರ ಹೂವಿನ ಅಂಜನೇಯ ದೇವಸ್ಥಾನಕ್ಕೆ ರೇಣುಕಾ ಹಾಗೂ ರಾಜೇಶ್ವರಿ ತೆರಳಿದ್ದರು. ಈ ವೇಳೆ ರಾಜೇಶ್ವರಿ, ರೇಣುಕಾಳ ಮಗ ಜನಾರ್ದನನ್ನು ಕರೆಸಿಕೊಂಡು, ಮೈಮೇಲಿಂದ ಚಿನ್ನಾಭರಣವನ್ನು ಕೊಟ್ಟು ಕಳುಹಿಸಿದ್ದಳು.

ಆ ನಂತರ ಬಯಲು ಶೌಚಾಲಯಕ್ಕೆ ತೆರಳಿದ್ದಾಗ ಕಳ್ಳರು ಬಂದಿದ್ದರು. ಬಟನ್ ಚಾಕು ತೋರಿಸಿ 10 ತೊಲೆ ಬಂಗಾರ ಕದ್ದಿದ್ದಾರೆ ಎಂದು ಕಥೆ ಸೃಷ್ಟಿಸಿದ್ದರು. ಬಳಿಕ ರಾಜೇಶ್ವರಿ ರಾಯಚೂರು ಗ್ರಾಮೀಣ ಠಾಣೆಗೆ ತೆರಳಿ ಕಳ್ಳತನದ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಮಹಿಳೆಯರಿಬ್ಬರನ್ನು ವಿಚಾರಣೆ ಮಾಡಿದ್ದರು.

ಮೊದಮೊದಲು ಕಳ್ಳನೊಬ್ಬ ಕದ್ದ ಎನ್ನುತ್ತಿದ್ದವರು, ನಂತರ ತಾವೇ ಬಚ್ಚಿಟ್ಟಿದ್ದು ಎಂದು ಒಪ್ಪಿಕೊಂಡಿದ್ದಾರೆ. ಗ್ರಾಮೀಣ ಪೊಲೀಸರ ತನಿಖೆಯಲ್ಲಿ ಮಹಿಳೆಯರಿಬ್ಬರ ಕಳುವಿನ ಆಟ ಹೊರಬಂದಿದೆ. ಸದ್ಯ ರೇಣುಕಾಳ ಮಗ ಜನಾರ್ದನನ್ನು ವಶಕ್ಕೆ ಪಡೆದಿರುವ ಗ್ರಾಮೀಣ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version