ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಮಿತಿಮೀರಿದ್ದ ದರೋಡೆಕೋರರ ಹಾವಳಿಗೆ ಪೊಲೀಸರು ಅಂತ್ಯ ಹಾಡಿದ್ದಾರೆ. ಒಬ್ಬಾಕೆ ಮಹಿಳೆ ಈ ದರೋಡೆಕೋರರ ಮಾಸ್ಟರ್ ಮೈಂಡ್ ಆಗಿದ್ದಳು ಎನ್ನುವುದು ಕುತೂಹಲ ಮೂಡಿಸಿದೆ.
ಇತ್ತೀಚೆಗೆ ರಾಯಚೂರಿನ ಸಿಂಧನೂರಿನಲ್ಲಿ ಮನೆ ದರೋಡೆಯಾಗಿತ್ತು. ನಕಲಿ ಪಿಸ್ತೂಲು ತೋರಿಸಿ ಮನೆ ದೋಚಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕುಖ್ಯಾತ ಅಂತಾರಾಜ್ಯ ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ. ಸುಜಾತ, ರಾಮಕೃಷ್ಣ, ಕುಮಾರ್ ರಾಜ್, ಅರ್ದಾನಿ ಬಂಧಿತರು. ಇವರಿಂದ 1 ಲಕ್ಷ ರೂ. ನಗದು, 520 ಗ್ರಾಂ. ಬಂಗಾರ, ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.
ಈ ತಂಡ ಆಂಧ್ರದಿಂದ ಬಂದು ಕರ್ನಾಟಕದಲ್ಲಿ ಕಳವು, ದರೋಡೆ ಮಾಡಿ ನಂತರ ಆಂಧ್ರಕ್ಕೆ ಪರಾರಿಯಾಗುತ್ತಿತ್ತು. ಇವರು ಶ್ರೀಮಂತರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಸಿಂಧನೂರು ನಗರದಲ್ಲಿ ಬಾಡಿಗೆ ಮನೆ ಮಾಡಿ ಇರುತ್ತಿದ್ದರು. ಇವರಲ್ಲಿ ಸುಜಾತ ಎಂಬಾಕೆ ಸಿಂಧನೂರಿನಲ್ಲಿ ಬಾಡಿಗೆ ಮನೆ ಮಾಡಿ ವೇಶ್ಯಾವಾಟಿಕೆ ದಂಧೆಯನ್ನೂ ನಡೆಸುತ್ತಿದ್ದಳು. ತಂಡದ ಮಾಸ್ಟರ್ ಮೈಂಡ್ ಇವಳೇ ಆಗಿದ್ದು ಕಳ್ಳತನಕ್ಕೆ ಮೊದಲು ಮ್ಯಾಪ್ ಸಿದ್ಧಪಡಿಸುತ್ತಿದ್ದಳು. ಆಕೆ ಸಿದ್ಧಪಡಿಸಿದ ಪ್ಲಾನ್‌ನಂತೆ ಉಳಿದವರು ಕೃತ್ಯ ಎಸಗುತ್ತಿದ್ದರು. ಸಿಂಧನೂರಿನ ಕೃತ್ಯ ನಡೆದು 15 ದಿನದೊಳಗೆ ಪೊಲೀಸರು ಕುಖ್ಯಾತ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ | ನಕಲಿ ಪಿಸ್ತೂಲ್ ತೋರಿಸಿ ಮನೆ ದರೋಡೆ