Site icon Vistara News

Sand Mafia: ಮರಳು ಮಾಫಿಯಾ ದುರುಳರಿಂದ ಅಧಿಕಾರಿಗಳ ಮೇಲೆ ಹಲ್ಲೆ

sand mafia

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಮರಳು ಮಾಫಿಯಾ (sand mafia) ಅಟ್ಟಹಾಸಗೈದಿದ್ದು, ಮರಳುಗಾರಿಕೆ ತಡೆದ ಮೈನ್ಸ್ ಅಧಿಕಾರಿಗಳ ಮೇಲೆ ಪುಂಡರು ಹಲ್ಲೆ (assault case) ನಡೆಸಿದ್ದಾರೆ.

ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ದುರುಳರು ಅಧಿಕಾರಿಗಳ ಮೇಲೆ ಕಬ್ಬಿಣ ರಾಡ್‌ನಿಂದ ಮಾರಣಾಂತಿಕ ಹಲ್ಲೆಗೈದಿದ್ದಾರೆ. ಘಟನೆಯಲ್ಲಿ ನಿವೃತ್ತ ಸೈನಿಕ ನಿಲಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಇವರು ಗಣಿ & ಭೂ ವಿಜ್ಞಾನ ಇಲಾಖೆಯ ಖನಿಜ ರಕ್ಷಣಾ ಪಡೆಯ ಅಧಿಕಾರಿಯಾಗಿದ್ದಾರೆ.

ತುಂಗಭದ್ರಾ ನದಿ ತೀರದಲ್ಲಿ ಕಾರ್ಯಾಚರಣೆಗೆ ಖನಿಜ ರಕ್ಷಣಾ ತಂಡ ಇನ್‌ಸ್ಪೆಕ್ಟರ್‌ ಮಂಜುನಾಥ ನೇತೃತ್ವದಲ್ಲಿ ತೆರಳಿತ್ತು. ತಂಡದಲ್ಲಿ 4-5 ಜನ ಖನಿಜ ರಕ್ಷಣಾ ಪಡೆ ಸಿಬ್ಬಂದಿ ಇದ್ದು, ಯಡಿವಾಳ, ಚಿಕಲಪರ್ವಿ, ಮದ್ಲಾಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಆಕ್ರಮ ಮರಳು ಸಾಗಾಟದ ಮಾಹಿತಿ ಮೇರೆಗೆ ಮದ್ಲಾಪುರದಲ್ಲಿ ತಂಡ ದಾಳಿ ನಡೆಸಿ ಬುರಾನಪುರ ನದಿಯ ಬಳಿ ಮರಳುಗಾರಿಕೆಯಲ್ಲಿ ನಿರತವಾಗಿದ್ದ ಜೆಸಿಬಿ ಮತ್ತು ಟಿಪ್ಪರ್ ಜಪ್ತಿ ಮಾಡಿಕೊಂಡಿದ್ದಾರೆ. ಜಪ್ತಿ ಮಾಡಿದ ವಾಹನ ಸ್ಟೇಷನ್‌ಗೆ ತರುವಾಗ ಕಿರಾತಕರು ಟಿಪ್ಪರ್ ಚಾಲಕ & ಜೆಸಿಬಿ ಚಾಲಕರ ಮೇಲೆ ಹಲ್ಲೆ ಮಾಡಿದ್ದಾರೆ. ತಡೆಯಹೋದ ಸಿಬ್ಬಂದಿ ನಿಲಪ್ಪನ ತಲೆ ಮತ್ತು ಮುಖಕ್ಕೆ ಬಲವಾದ ಗಾಯಗಳಾಗಿವೆ.

ಸದ್ಯ ಗಾಯಾಳು ನಿಲಪ್ಪನಿಗೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಣಿ & ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನನ್ವಯ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೆಣ್ಣು ಕೊಡಲಿಲ್ಲ ಎಂದು ಅಡಿಕೆ ಹಾಳು ಮಾಡಿದ!

ಮೈಸೂರು: ಮದುವೆಯಾಗಲು ಹೆಣ್ಣು ಕೊಡಲಿಲ್ಲ ಅಂತ ಭೂಪನೊಬ್ಬ ರೈತರೊಬ್ಬರ ಮನೆಯ ಅಡಿಕೆಯನ್ನೆಲ್ಲ ಹಾಳು ಮಾಡಿದ್ದಾನೆ. ಹುಣಸೂರು ತಾಲೂಕಿ‌ನ ಕಡೇ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ. ಅವರ ಮಗಳನ್ನು ತನಗೆ ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಅಡಿಕೆ ಬೆಳೆ ನಾಶ ಮಾಡಿದವನು ಹೆಸರು ಅಶೋಕ್. ರೈತ ವೆಂಕಟೇಶ್ ಅವರಿಗೆ ಸೇರಿದ ಜಮೀನು ಇದಾಗಿದೆ. ನಾಲ್ಕು ದಿನಗಳ ಹಿಂದೆ ಅವರ ಶುಂಠಿ ಬೆಳೆಯನ್ನು ಈತ ಕತ್ತರಿಸಿ ಹಾಕಿದ್ದ.

ವೆಂಕಟೇಶ್ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಶುಂಠಿ, ಅಡಿಕೆ ಬೆಳೆ ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಬೇಕಿತ್ತು. ಇದೇ ವೇಳೆ ನಿನ್ನೆ ಮಧ್ಯರಾತ್ರಿ ಕಿಡಿಗೇಡಿಗಳನ್ನು ಸೇರಿಸಿಕೊಂಡು ಅಡಿಕೆ ಬೆಳೆ ಕತ್ತರಿಸಿದ್ದಾನೆ. ವೆಂಕಟೇಶ್ ಪುತ್ರಿಯನ್ನು ಅದೇ ಗ್ರಾಮದ ಬೇರೊಬ್ಬರಿಗೆ ವಿವಾಹ ಮಾಡಿಸಲು ಮಾತುಕತೆ ನಡೆದಿತ್ತು. ಅಶೋಕ್ ಕ್ಯಾರೆಕ್ಟರ್ ಸರಿ ಇಲ್ಲ ಎಂಬ ಕಾರಣಕ್ಕೆ ನಿರಾಕರಣೆ ಮಾಡಲಾಗಿತ್ತು. ಇದರಿಂದಾಗಿ ದ್ವೇಷ ಬೆಳೆಸಿಕೊಂಡ ಅಶೋಕ್ ಬೆಳೆ ನಾಶ ಮಾಡಿದ್ದಾನೆ ಎಂದು ಹುಡುಗಿಯ ತಂದೆ ವೆಂಕಟೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: Sand Mafia: ಮರಳು ಮಾಫಿಯಾ; ಕಾನ್ಸ್​ಟೇಬಲ್ ಹತ್ಯೆ ರೂವಾರಿ ಸಾಯಿಬಣ್ಣಾ ಮೇಲೆ ಫೈರಿಂಗ್‌

Exit mobile version