Site icon Vistara News

Hunting Animals : ಕಾಡು ಪ್ರಾಣಿಗಳನ್ನು ಬೇಟೆಯಾಡಿ ಖಾದ್ಯ ತಯಾರಿ ವೇಳೆ ದಾಳಿ; ಮೂವರು ಎಸ್ಕೇಪ್‌, ಮಾಂಸ ವಶಕ್ಕೆ

Food prepared from hunted animals

ಸುಳ್ಯ: ತಂಡವೊಂದು ಕಾಡು ಪ್ರಾಣಿಗಳನ್ನು ಬೇಟೆಯಾಡಿ (Hunting Animals) ಖಾದ್ಯ ತಯಾರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು (Forest Officials) ದಾಳಿ ನಡೆಸಿ ಬೇಯಿಸಿದ ಮಾಂಸವನ್ನು ವಶಕ್ಕೆ ಪಡೆದುಕೊಂಡ ಘಟನೆ ಸುಳ್ಯ ಗಡಿ ಭಾಗದಿಂದ ವರದಿಯಾಗಿದೆ.

ಕೊಡಗು ಸಂಪಾಜೆ ವಲಯದ ದಬ್ಬಡ್ಕದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆ ಮಾಡಿದ್ದರು ಎನ್ನಲಾಗಿದೆ. . ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ಮನೆಗಳಿಗೆ ದಾಳಿ ಮಾಡಿ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಪೂವಯ್ಯ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಮಧು ಸೂದನ್ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಉಪ ವಲಯ ಅರಣ್ಯ ಅಧಿಕಾರಿ ನಿಸಾರ್ ಮಹೋಮ್ಮದ್, ಗಸ್ತು ಅರಣ್ಯ ಪಾಲಕ ಚಂದ್ರಪ್ಪ ಬಣಕಾರ್, ಕಾರ್ತಿಕ್ ಡಿ. ಹಾಗೂ ಸಿಬ್ಬಂದಿಗಳಾದ ಮನೋಜ್, ದುರ್ಗಾ ಪ್ರಸಾದ್, ಗಗನ್, ಶರತ್, ಶಂಕರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Elephant death: ಆಹಾರ ಅರಸಿ ಬಂದ ಬಲಿಷ್ಠ ಆನೆ ಅಸಹಾಯಕವಾಗಿ ಬಿದ್ದು ಸಾವು

ಉಳ್ಳಾಲದಲ್ಲಿ ಸಿಡಿಲು ಬಡಿದು ಅಂಗಡಿ ಭಸ್ಮ

ಉಳ್ಳಾಲ: ಭಾರಿ ಸಿಡಿಲು ಮಳೆಗೆ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿ ಲಕ್ಷಾಂತರ ನಷ್ಟ ಸಂಭವಿಸಿರುವ ಘಟನರ ರಾಣಿಪುರದಲ್ಲಿ ಸಂಭವಿಸಿದೆ. ಕಟ್ಟಡದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು ಸ್ಥಳಕ್ಕೆ ತಕ್ಷಣ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಎದುರಿನ ಪೀಟರ್ ಆಪ್ರೋಸ್ ಎಂಬವರ ದಿನಸಿ ಅಂಗಡಿಗೆ ಸಿಡಿಲು ಬಡಿದು ಭಸ್ಮವಾಗಿದೆ. ಮಂಗಳವಾರ ಮುಂಜಾನೆ ನಸುಕಿನ ವೇಳೆ ಸಿಡಿಲು ಬಡಿದಿದೆ.

ಘಟನೆ ವೇಳೆ ಪೀಟರ್ ತನ್ನ ಪತ್ನಿ ಅಸುಂತ ಮರಿಯ ಡಿಕ್ರೂಜ್ ಮತ್ತು ಮಗ ಪ್ರೀತಮ್ ಜೊತೆ ಮನೆಯಲ್ಲಿ ನಿದ್ರಿಸುತ್ತಿದ್ದರು. ಅಂಗಡಿ‌ಗೆ ಬೆಂಕಿ ಬಿದ್ದಿರುವುದನ್ನು ಕಂಡು ದಾರಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಮನೆ ಮಂದಿಯನ್ನು ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೀಟರ್ ಕುಟುಂಬ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ಮನೆಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನ ನಂದಿಸಿದ್ದಾರೆ.

ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ದಾಸ್ತಾನು ಸುಟ್ಟು ಕರಕಲಾಗಿದ್ದು ಮೂರು ರೆಫ್ರಿಜರೇಟರ್ ಸುಟ್ಟಿವೆ. ಎಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗಿವೆ.ಅಂಗಡಿ,ಮನೆ ಒಟ್ಟಿಗೆ ಇದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ.

ಸ್ಥಳಕ್ಕೆ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿ ಸೋಜ, ಮಾಜಿ ಉಪಾಧ್ಯಕ್ಷ ನವೀನ್ ಡಿ ಸೋಜ, ಕಂದಾಯ ನಿರೀಕ್ಷರು, ಗ್ರಾಮಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version