ವಿಜಯನಗರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಆಯತಪ್ಪಿ ರೈಲಿನ ಗಾಲಿಗೆ ಸಿಲುಕುವ ಅಪಾಯದಲ್ಲಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೇ ಪೊಲೀಸ್ ಕಾನ್‌ಸ್ಟೆಬಲ್ ಸಂತೋಷ್ ರಾಠೋಡ್ ಅವರು ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ (Salam Police) ವ್ಯಕ್ತವಾಗಿದೆ.
ಈ ಘಟನೆ ನಡೆದಿರುವುದು ಮಾರ್ಚ್ 23ರಂದು ಸಂಜೆ 7.32ಕ್ಕೆ. ಹೊಸಪೇಟೆ ರೈಲು ನಿಲ್ದಾಣದಲ್ಲಿ. ಪ್ಲಾಟ್‌ಫಾರಂ ಮೇಲೆ ನಿಂತಿದ್ದ ಪೊಲೀಸ್ ಪೇದೆ ರೈಲಿನ ಅಡಿಗೆ ಬೀಳುತ್ತಿದ್ದವನನ್ನು ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾರೆ.
ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ. ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಹೋದರೆ 5 ರೂ. ಕೊಡಬೇಕು. ಅದನ್ನು ಉಳಿಸಲೆಂದು ಪ್ಲ್ಯಾನ್ ಮಾಡಿದ ಆತ ಅದೇ ವೇಳೆಗೆ ಬಂದು ನಿಂತಿದ್ದ ಬೆಳಗಾವಿ- ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ!
ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ಹೊರಟಿತ್ತು. ಆಗ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಸ್ವಲ್ಪದರಲ್ಲೇ ಕಾಲು ಜಾರಿ ರೈಲಿನ ಅಡಿಗೆ ಸಿಲುಕುವ ಅಪಾಯ ಎದುರಾಯಿತು. ಅದೇ ವೇಳೆಗೆ ಅಲ್ಲೆ ಇದ್ದ ಪೊಲೀಸ್ ಪೇದೆ ಸಂತೋಷ್ ರಾಠೋಡ್ ಪ್ರಯಾಣಿಕ ಕೈ ಹಿಡಿದು ಮೇಲೆತ್ತಿದ್ದಾರೆ. ಜತೆಗಿದ್ದ ರೈಲ್ವೇ ಪೊಲೀಸ್ ಗುರುರಾಜ್ ಅವರು ಕೂಡ ಕೊನೆಯಲ್ಲಿ ಸಹಕರಿಸಿ ಜೀವ ಉಳಿಸಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ರೈಲ್ವೇ ಇಲಾಖೆ ತನ್ನ ವೆಬ್ಸೈಟ್ ನಲ್ಲಿ ಈ ಕಥೆ ಹೇಳಿ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಪ್ರೀತಿಯ ಅಪ್ಪು ಸರ್, ನಿಮ್ಮ ಸಿನಿಮಾ, ಬದುಕು, ನಡವಳಿಕೆಗಳು ಸರ್ವಕಾಲಕ್ಕೂ ಸ್ಫೂರ್ತಿ