Site icon Vistara News

Sant Sevalal Jayanti: ಒಂದೇ ವರ್ಷದಲ್ಲಿ ಸಂತ ಸೇವಾಲಾಲ್‌ರ ಜನ್ಮಸ್ಥಳದಲ್ಲಿ ರೈಲ್ವೆ ನಿಲ್ದಾಣ: ಬಿ.ವೈ.ರಾಘವೇಂದ್ರ

BY Raghavendra

ದಾವಣಗೆರೆ: 2000 ಕೋಟಿ ರೂ.ಗಳ ವೆಚ್ಚದಲ್ಲಿ ರಾಣೆಬೆನ್ನೂರು-ಶಿವಮೊಗ್ಗ ರೈಲ್ವೆ ಮಾರ್ಗ ಕಾಮಗಾರಿ ನಡೆಯುತ್ತಿದೆ. ಸೇವಾಲಾಲ್ ಜನ್ಮ ಸ್ಥಳದ ಮೂಲಕ ರೈಲ್ವೆ ಮಾರ್ಗ ಹೋಗುವಂತೆ ಮಾಡಲು ನಾನು ಮನವಿ ಮಾಡಿದ್ದೆ. ಹೀಗಾಗಿ ಮುಂದಿನ ಸಂತ ಸೇವಾಲಾಲ್ ಜಯಂತಿ (Sant Sevalal Jayanti) ವೇಳೆಗೆ ಸೇವಾಲಾಲ್‌ರ ಜನ್ಮಸ್ಥಳ ಭಾಯಾಗಡ್‌ನಲ್ಲಿ ರೈಲ್ವೆ ನಿಲ್ದಾಣ ಉದ್ಘಾಟನೆಯಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್‌ರ 285ನೇ ಜಯಂತಿಯಲ್ಲಿ ಮಾತನಾಡಿದ ಅವರು, ನಾನು ಕೇವಲ ಮೈಕ್‌ನಲ್ಲಿ ರೈಲು ಬಿಡಲ್ಲ. ಮುಂದಿನ ಜಾತ್ರೆ ಒಳಗೆ ಅದನ್ನು ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದರು.

ಈ ಹಿಂದೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸೇವಾಲಾಲ್‌ರ ದೇವಸ್ಥಾನಕ್ಕೆ ಜಾಗ ಗುರುತಿಸಿ 2 ಕೋಟಿ ಅನುದಾನ ಕೊಟ್ಟಿದ್ದರು. ಮುಂದೆ ಬಂದ ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾಯಾಗಡ್ ಅಭಿವೃದ್ಧಿಗೆ ಹಣ ಕೊಟ್ಟರು. ಸರ್ಕಾರ ಯಾವುದೇ ಬರಲಿ, ಹೋಗಲಿ, ಈ ಸಮುದಾಯಕ್ಕೆ ಕೆಲಸ ಆಗಲು ಹಣ ಮೀಸಲಿಡಬೇಕು. ನೀವು ದೇವರಿಗೆ ಹೂವು ಹಾಕುತ್ತೀರಿ, ಮುಂದೆ ನನಗೊಂದು ಹೂ ಹಾಕಿ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವಂತೆ ಜನರನ್ನು ಕೋರಿದರು.

ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದ ಉಮೇಶ್ ಜಾಧವ್, ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಶಿವಮೂರ್ತಿ ನಾಯಕ್, ಎಂ.ಪಿ. ರೇಣುಕಾಚಾರ್ಯ, ಪಿ.ಟಿ. ಪರಮೇಶ್ವರ್ ನಾಯ್ಕ್ ಮತ್ತಿತರರು ಇದ್ದರು.

ಸಚಿವ ಮಧುಬಂಗಾರಪ್ಪ ಮಾತನಾಡಿ, ಬಂಜಾರ ಸಮುದಾಯಕ್ಕೆ ಸೇವಾಲಾಲ್ ಅವರ ಕೊಡುಗೆ ಅಪಾರ. ಸೇವಾಲಾಲ್ ಅವರ ಜನ್ಮಸ್ಥಳ ಕರ್ನಾಟಕದಲ್ಲಿ ಇರುವುದು ನಮಗೆ ಹೆಮ್ಮೆ. ಬಂಜಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚು ಒತ್ತು ನೀಡುತ್ತೇವೆ ಎಂದು ತಿಳಿಸಿದರು.

ಬಂಜಾರ ಸಮಾಜದವರು ಹಣ ಸಹಾಯ ಕೇಳುತ್ತಿದ್ದರು. ಆಗ ಬಂಗಾರಪ್ಪನವರು ಬೈದು ಕಳುಹಿಸುತ್ತಿದ್ದರು.ನಿಮಗೆ ಒಂದು ಡೆಂಟಲ್ ಕಾಲೇಜು ಕೊಡುತ್ತೇನೆ ಎಂದು ಒಂದೇ ದಿನದಲ್ಲಿ ನಿರ್ಧಾರ ಮಾಡಿದ್ದರು. ಶಿಕ್ಷಣದಿಂದ ಸಮಾಜ ಮುಂದೇ ಬರಲು ಸಾಧ್ಯ ಹೇಳಿದರು.

ಇದನ್ನೂ ಓದಿ | Karnataka Budget Session 2024: ರೈತರ ಆತ್ಮಹತ್ಯೆ ಕಡಿಮೆ ಎಂದು ಸುಳ್ಳು ಹೇಳಿದ ಸರ್ಕಾರ: ಬಿ.ವೈ. ವಿಜಯೇಂದ್ರ ಕಿಡಿ

ನಿಮ್ಮ ಬೇಡಿಕೆಗಳನ್ನ ಈಡೇರಿಸಲು ನಮ್ಮ ಸರ್ಕಾರ ಬದ್ಧ. ನಿಮ್ಮ ಸಹೋದರನಾಗಿ ನಾನು ಧ್ವನಿ ಎತ್ತಿ ಕೆಲಸ ಮಾಡಿಸಿಕೊಡುತ್ತೇನೆ. ರಾಜ್ಯದಲ್ಲಿ 76 ಸಾವಿರ ಶಾಲೆಗಳು ಬರುತ್ತವೆ. 1 ಕೋಟಿ 20 ಲಕ್ಷ ಮಕ್ಕಳು ಓದುತ್ತಿದ್ದಾರೆ. ನನ್ನ ಇಲಾಖೆ ಕಷ್ಟದ ಇಲಾಖೆ, ಆದರೆ ಪುಣ್ಯದ ಕೆಲಸ. ಮಕ್ಕಳು ದೇವರ ಸಮಾನ, ಹೀಗಾಗಿ ಅವರಿಗೆ ಶಿಕ್ಷಣ ನೀಡುವುದು ಪುಣ್ಯದ ಕೆಲಸ. ದೇಶದ ಆಸ್ತಿ ಶಿಕ್ಷಣ, ಶಿಕ್ಷಣ ಪಡೆದರೆ ಅಂಬೇಡ್ಕರ್ ಅವರ ಆಸೆ ಈಡೇರುತ್ತೆ. ಮೆಡಿಕಲ್ ಕಾಲೇಜ್ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಬದ್ಧ ತಿಳಿಸಿದರು.

Exit mobile version