Site icon Vistara News

Rain Affected areas: ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

ಬೆಂಗಳೂರು: ರಾಜ್ಯದಲ್ಲಿ 2,225 ಗ್ರಾಮಗಳು ಮತ್ತು 20,38,334 ಜನರು ಪ್ರವಾಹ, ಭೂ ಕುಸಿತಕ್ಕೆ ಪ್ರತೀ ವರ್ಷ ತುತ್ತಾಗುತ್ತಾರೆ. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿನ ಮಳೆ ಸಂತ್ರಸ್ತ ಗ್ರಾಮಗಳನ್ನು (Rain Affected areas) ಗುರುತಿಸಿ, ಅವರಿಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚಿಸಿದರು

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷ ಮಳೆಯಿಂದ ಮನೆ, ಬೆಳೆ ಹಾನಿ ಆಗಿರುವವರಿಗೆ ಎಸ್‌ಡಿಆರ್‌ಎಫ್‌ ಪ್ರಕಾರ ಪರಿಹಾರವನ್ನು ಕೂಡಲೇ ಇತ್ಯರ್ಥ ಮಾಡಬೇಕು ಎಂದು ಸೂಚನೆ ನೀಡಿದರು.

ಪಿಂಚಣಿ ಅರ್ಜಿಗಳು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬಾಕಿ ಇವೆ ಎನ್ನುವ ಪಟ್ಟಿ ಪ್ರಸ್ತಾಪಿಸಿದ ಸಿಎಂ, ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಮಿತಿಯೊಳಗೆ ಇತ್ಯರ್ಥ ಮಾಡಬೇಕು ಎಂದರು. ಇದೇ ವೇಳೆ ಕಾಲ ಮಿತಿ ಮೀರಿದ ಅರ್ಜಿಗಳು ಏಕೆ ಇದೆ ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿ ಇತ್ಯರ್ಥ ಮಾಡಲು ಸೂಚಿಸಿದರು.

ಪಿಂಚಣಿಗಳ ವಿಲೇ ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕಾನೂನು ಪ್ರಕಾರವೇ ಉದಾರತನದಿಂದ ವರ್ತಿಸಿ ಪರಿಹಾರ ನೀಡಿ ಎನ್ನುವ ಸೂಚನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಿಎಂ ನೀಡಿದರು. ಇನ್ನು ಸಣ್ಣ ಪುಟ್ಟ ತಾಂತ್ರಿಕ ಕಾರಣಗಳಿಗಾಗಿ ರೈತರ ಆತ್ಮಹತ್ಯೆ ಪರಿಹಾರದ ಅರ್ಜಿಗಳನ್ನು ತಿರಸ್ಕರಿಸದೆ ಉದಾರವಾಗಿ ವರ್ತಿಸಿ ರೈತ ಕುಟುಂಬಗಳಿಗೆ ಸಹಾಯ ಮಾಡಿ ಎಂದರು.

ಇದನ್ನೂ ಓದಿ | Shiva Rajkumar: ಹಾವೇರಿ ಅಪಘಾತ; ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ಮಾಡಿದ ಶಿವಣ್ಣ ದಂಪತಿ

ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ಪ್ರತಿ ತಿಂಗಳು ಕೋಟಿಗಟ್ಟಲೆ ಬಾಡಿಗೆ ನೀಡುತ್ತಿದ್ದೇವೆ. ಇವರಿಗೆ ಸ್ವಂತ ಕಟ್ಟಡ ಕೊಡಿ. ಸ್ವಂತ ಕಟ್ಟಡದ ಅವಕಾಶ ಇಲ್ಲದಿದ್ದರೆ ಜಾಗ ನೀಡಿ ಕಟ್ಟಡ ಕಟ್ಟಿಸಿ. ಇದರಿಂದ ನಮಗೆ ವರ್ಷಕ್ಕೆ 40-50 ಕೋಟಿ ಬಾಡಿಗೆ ಹಣ ಉಳಿತಾಯವಾಗುತ್ತದೆ ಎಂದು ಸೂಚನೆ ನೀಡಿದರು.

ಮಹಿಳಾ ಆಯೋಗದ ವರದಿ ಬಳಿಕ ಕ್ರಮ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಲಬುರಗಿ ಮಹಿಳಾ ಹಾಸ್ಟೆಲ್‌ಗೆ ಭೇಟಿ ನೀಡಿ ಹಾಸ್ಟೆಲ್ ಟ್ಯಾಂಕ್ ಮೂಲಕ ಕಲುಷಿತ ನೀರಿನ ಸರಬರಾಜು ಆಗುತ್ತಿರುವ ಬಗ್ಗೆ ಬರೆದಿರುವ ಪತ್ರವನ್ನು ಸಿಎಂ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆ ಸಮಸ್ಯೆಯನ್ನು ಬಗೆಹರಿಸಿ ಈಗಾಗಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರಿಸಿದರು.

ಗ್ಯಾರಂಟಿ ಯೋಜನೆ ಸಮೀಕ್ಷೆ

ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಬೇಕು. ರಾಜ್ಯದಲ್ಲಿ 8452317 ಕುಟುಂಬಗಳ ಸುಮಾರು 5 ಕೋಟಿ ಜನರ ಸಮೀಕ್ಷೆ ನಡೆಸಬೇಕಾಗಿದೆ ಎಂದು ಸಿಎಂ ಸೂಚಿಸಿದರು.

ಗ್ರಾಮೀಣಾಭಿವೃದ್ಧಿ

ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆಗೆ ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ. ಕಲುಷಿತ ನೀರು ಪರೀಕ್ಷೆಗೆ ಸಾಕಷ್ಟು ಪ್ರಮಾಣದಲ್ಲಿ ಕಿಟ್‌ ಲಭ್ಯವಿದೆ. ಪ್ರತಿ ಹೋಬಳಿಗೆ ಭೇಟಿ ನೀಡಿ ಪ್ರಮಾಣ ಪತ್ರ ಒದಗಿಸಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಇದುವರೆಗೆ 42945 ಜನವಸತಿ ಪ್ರದೇಶಗಳಲ್ಲಿ ಜಂಟಿ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶುದ್ಧ ನೀರು ಘಟಕ ದುರಸ್ತಿ ಮಾಡಿ

ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಯೋಜನೆ ರೂಪಿಸಬೇಕು. ಈಗಾಗಲೇ ಅಂತಹ ಶುದ್ಧ ನೀರು ಘಟಕಗಳ ಪರಿಶೀಲನೆ ನಡೆಸಲಾಗಿದ್ದು, ಸಮರ್ಪಕ ಯೋಜನೆ ರೂಪಿಸಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.

ಇದನ್ನೂ ಓದಿ | Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಸಂಪುಟದ ಎಲ್ಲ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version