ಬೆಂಗಳೂರು: ರಾಜಧಾನಿ ಸೇರಿ 8 ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಮಳೆ (Rain alert) ಅಬ್ಬರಿಸಲಿದೆ. ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ (yellow alert) ಘೋಷಣೆ ಮಾಡಿದೆ.
ಜೂನ್ 3ರವರೆಗೆ ಒಟ್ಟು 4 ದಿನ ರಾಜ್ಯಕ್ಕೆ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದಿನ 2 ದಿನ ಮಾತ್ರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ನಾಳೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಗರಿಷ್ಠ ತಾಪಮಾನ 31-33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ.
ನಿನ್ನೆ ಬೆಂಗಳೂರಿನಲ್ಲಿ ಅಬ್ಬರಿಸಿದ ಭಾರಿ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿದ್ದವು. ಗಾಳಿಗೆ ಮರಗಳು ಮುರಿದಿದ್ದವು. ಟ್ರಾಫಿಕ್ ಅಸ್ತವ್ಯಸ್ತವಾಗಿತ್ತು. ಹಲವು ಕಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ನಿವಾಸಿಗಳು ಬವಣೆ ಅನುಭವಿಸಿದ್ದರು. ಕೆಆರ್ ಸರ್ಕಲ್ ಅಂಡರ್‌ಪಾಸ್ ದುರಂತದ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಮಳೆ ಜೋರಾಗಿ ಬರತೊಡಗಿದ ಕೂಡಲೇ ಅಂಡರ್‌ಪಾಸ್‌ಗಳನ್ನು ಮುಚ್ಚಲಾಗುತ್ತಿದೆ.
ಇದನ್ನೂ ಓದಿ: Rain News: ಮಳೆ ಅಬ್ಬರ, ರಸ್ತೆ ಕಾಣದೆ ಬಿದ್ದ ಬೈಕ್ ಸವಾರ, ಗಾಳಿಗೆ ಹಾರಿ ಹೋದ ಮದುವೆ ಶಾಮಿಯಾನ