ಚಾಮರಾಜನಗರ: ಜಿಲ್ಲೆಯಲ್ಲಿ ಸತತ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ನಾನಾ ಅವಾಂತರವನ್ನು (Rain Effect) ಸೃಷ್ಟಿ ಮಾಡಿದ್ದು, ಇಲ್ಲಿನ ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ಸ್ಮಶಾನವೇ ಜಲಾವೃತವಾಗಿದೆ. ಹಾಗಾಗಿ ಗ್ರಾಮಸ್ಥರು ಹೆಣ ಹೂಳಲು ಜಾಗವಿಲ್ಲದೆ ಗ್ರಾಮ ಪಂಚಾಯಿತಿ ಆವರಣದಲ್ಲಿಯೇ ಮಣ್ಣು ಮಾಡಿದ್ದಾರೆ. ಈ ಸಂಬಂಧ ಭಾರಿ ಗದ್ದಲವಾಗಿದ್ದು, ಕೊನೆಗೂ ಗ್ರಾಮದವರ ಹಠವೇ ಮೇಲುಗೈ ಆಗಿದೆ.
ಮಳೆಯಿಂದಾಗಿ ಸ್ಮಶಾನವು ಜಲಾವೃತಗೊಂಡಿದ್ದು, ಹೆಣ ಹೂಳಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೇ ವೇಳೆ ಗ್ರಾಮದ ಜಯಮ್ಮ ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದರೆ, ಮೃತದೇಹ ಹೂಳಲು ಸ್ಮಶಾನಕ್ಕೆ ತೆರಳಿದರೆ ಅಲ್ಲಿ ಜಲಾವೃತವಾಗಿತ್ತು.
ಮತ್ತೆ ಜಾಗ ಕೇಳಿದ ಗ್ರಾಮಸ್ಥರು
ಸ್ಮಶಾನವನ್ನು ಬಳಸಲು ಆಗದೇ ಇದ್ದರಿಂದ ನಮಗೆ ಹೆಣ ಹೂಳಲು ಬೇರೆ ಜಾಗ ಕೊಡಿ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಬಳಿ ಕೇಳಿದ್ದಾರೆ. ಆದರೆ, ಇದಕ್ಕೆ ಸೂಕ್ತ ಸ್ಪಂದನೆ ದೊರೆಯದೇ ಇದ್ದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ಗ್ರಾಮ ಪಂಚಾಯತ್ ಆವರಣದಲ್ಲಿ ಇಟ್ಟು ಪ್ರತಿಭಟಿಸಿದ್ದಾರೆ.
ಆಗಲೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದೆ ಇದ್ದಾಗ ಗ್ರಾಪಂ ಆವರಣದಲ್ಲಿ ಗ್ರಾಮಸ್ಥರು ಗುಂಡಿ ತೋಡಿದ್ದಾರೆ. ಈ ವೇಳೆ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದವಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಸಮಾಧಾನ ಮಾಡಲು ಯತ್ನಿಸಿದರೂ ಸುಮ್ಮನಾಗದ ಗ್ರಾಮಸ್ಥರು ಅಲ್ಲಿಯೇ ಅಂತಿಮ ಕಾರ್ಯ ನೆರವೇರಿಸಲು ಸಜ್ಜಾಗಿದ್ದಾರೆ. ಈ ವೇಳೆ ಮತ್ತೊಮ್ಮೆ ಗಲಾಟೆ ನಡೆದಿದೆ. ಪೊಲೀಸರು ಅಡ್ಡಿಪಡಿಸಿದರೂ ಕೇಳದ ಗ್ರಾಮಸ್ಥರು ಮೃತದೇಹವನ್ನು ಹೂಳಿದ್ದಾರೆ.
ಗ್ರಾಮದಲ್ಲಿ ದಲಿತರಿಗಿಲ್ಲ ಸ್ಮಶಾನ
ಗ್ರಾಮದಲ್ಲಿರುವ ಸ್ಮಶಾನದಲ್ಲಿ ದಲಿತರಿಗೆ ಜಾಗವಿಲ್ಲ. ಇದರಿಂದ ತಾತ್ಕಾಲಿಕವಾಗಿ ಊರಿನ ಹೊರವಲಯದಲ್ಲಿ ಗ್ರಾಮಸ್ಥರು ಸ್ಮಶಾನ ಮಾಡಿಕೊಂಡಿದ್ದರು. ಆದರೆ, ಸತತ ಮಳೆಗೆ ಸ್ಮಶಾನವು ನೀರು ಪಾಲಾಗಿದ್ದು, ಹೆಣ ಹೂಳಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ | ಚಾಮರಾಜನಗರ ಶಾಸಕ ಎನ್.ಮಹೇಶ್‌ಗೆ ಮಳೆಹಾನಿ ಗ್ರಾಮಸ್ಥರ ತರಾಟೆ