ಕಾರವಾರ: ಭಾರಿ ಮಳೆಯಿಂದಾಗಿ ರಾಜ್ಯದ ನಾನಾ ಭಾಗಗಳಲ್ಲಿ ಗುಡ್ಡ ಕುಸಿತದ ಘಟನೆಗಳು ನಡೆಯುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ನಿತ್ಯ ಭೂಮಿ ಬಾಯಿ ಬಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಣಶಿಯ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.
ಅಣಶಿ ಗುಡ್ಡ ಕುಸಿತದಿಂದಾಗಿ ಕಾರವಾರದಿಂದ ಬೆಳಗಾವಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಈ ರಸ್ತೆ ಅತ್ಯಂತ ಪ್ರಮುಖ ಸಂಚಾರ ಸೇತುವಾಗಿದ್ದು, ಅದು ಕುಸಿದಿರುವುದರಿಂದ ವಾಹನಗಳ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ.
ಈ ಗುಡ್ಡ ಪ್ರದೇಶದ ತಿಂಗಳ ಹಿಂದೆಯೂ ಒಮ್ಮೆ ಕುಸಿದು ಬಿದ್ದಿತ್ತು. ಆಗಲೂ ಸಂಚಾರಕ್ಕೆ ತಡೆಯಾಗಿತ್ತು. ಕುಸಿದ ಮಣ್ಣನ್ನು ತೆರವುಗೊಳಿಸಿದ್ದ ಜಿಲ್ಲಾಡಳಿತ ಹಗಲಿನ ವೇಳೆ ಲಘುವಾಹನ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಪೂರ್ಣ ಪ್ರಮಾಣದ ಸಂಚಾರಕ್ಕೆ ಇನ್ನೂ ಧೈರ್ಯ ಮಾಡಿರಲಿಲ್ಲ.
ಈಗ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಡ್ಡ ಮತ್ತೊಂದು ಕುಸಿದು ಬಿದ್ದಿದೆ. ಮಣ್ಣನ್ನು ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ತೆರವು ಮಾಡುತ್ತಿದ್ದಾರೆ. ಗುಡ್ಡ ಭಾಗದ ಕುಸಿತ ಅಪಾಯಕಾರಿಯಾಗಿರುವುದರಿಂದ ಇನ್ನು ಕೆಲವು ದಿನಗಳ ಕಾಲ ಸಂಚಾರಕ್ಕೆ ಅವಕಾಶ ಸಿಗಲಿಕ್ಕಿಲ್ಲ ಎನ್ನಲಾಗಿದೆ.
ಇದನ್ನೂ ಓದಿ| Rain News | ಬಂಟ್ವಾಳ-ಬೆಳ್ತಂಗಡಿ ರಾ.ಹೆ. 73ರ ಹಲವೆಡೆ ಗುಡ್ಡ ಕುಸಿತ; ಚಾರ್ಮಾಡಿಯಲ್ಲಿ ಅಲರ್ಟ್